ಸಾಮಾನ್ಯವಾಗಿ ದಕ್ಷಿಣ ಭಾರತ ಚಿತ್ರರಂಗಗಳಲ್ಲಿ ಕೇಳಿ ಬರುವ ಸಿನಿಮಾ ಬಿಡುಗಡೆ ಕ್ಲ್ಯಾಷ್ ಈಗ ಬಾಲಿವುಡ್ಗೂ ಕಾಲಿಟ್ಟಿದೆ. ಸ್ಟಾರ್ ನಟರ ಸಿನಿಮಾಗಳ ಎದುರು ಬೇರೊಬ್ಬ ಸ್ಟಾರ್ ನಟರ ಅಥವಾ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಿ ಸುಖಾ-ಸುಮ್ಮನೆ ಬಾಕ್ಸ್ ಆಫೀಸ್ನಲ್ಲಿ ಸ್ಪರ್ಧೆ ಏರ್ಪಾಡುವಂತೆ ಮಾಡಲಾಗುತ್ತದೆ. ಕೆಲವು ಹಬ್ಬಗಳ ಸಂದರ್ಭಗಳಲ್ಲಿಯೂ ಸಹ ಹೀಗೆ ಒಂದೇ ದಿನ ದೊಡ್ಡ ಸಿನಿಮಾಗಳ ಬಿಡುಗಡೆ ಆಗುವುದು ಸಹಜ. ಇದೀಗ ದೀಪಾವಳಿ ಸಂದರ್ಭದಲ್ಲಿ ಮತ್ತೆ ಅಂಥಹುದೇ ಸನ್ನಿವೇಶ ಸೃಷ್ಟಿಯಾಗಿದೆ. ಬಾಲಿವುಡ್ನಲ್ಲಿಯೂ ಇದೇ ಪರಿಸ್ಥಿತಿ ಏರ್ಪಟ್ಟಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರೀಸ್, ನಿರ್ದೇಶಕ ರೋಹಿತ್ ಶೆಟ್ಟಿಯನ್ನು ದೂಷಣೆ ಮಾಡಿದೆ.
ನವೆಂಬರ್ 1 ರಂದು ರೋಹಿತ್ ಶೆಟ್ಟಿ ನಿರ್ದೇಶನ ಮಾಡಿ ಸಹ ನಿರ್ಮಾಪಕರೂ ಆಗಿರುವ ‘ಸಿಂಘಂ ಅಗೇನ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಅದೇ ದಿನ ಬಾಲಿವುಡ್ನ ಜನಪ್ರಿಯ ಸಿನಿಮಾ ಸರಣಿ ‘ಭೂಲ್ ಭುಲಯ್ಯಾ’ದ ಮೂರನೇ ಭಾಗ ‘ಭೂಲ್ ಭುಲಯ್ಯ 3’ ಬಿಡುಗಡೆ ಆಗುತ್ತಿದೆ. ಆದರೆ ರೋಹಿತ್ ಶೆಟ್ಟಿ ತಮ್ಮ ಸಿನಿಮಾವನ್ನು ನಿಯಮಬಾರಿವಾಗಿ, ಸ್ಪರ್ಧಾ ಸ್ಪೂರ್ತಿ ಮರೆತು ಬಿಡುಗಡೆ ಹಾಗೂ ವಿತರಣೆ ಮಾಡುತ್ತಿದ್ದಾರೆ ಎಂದು ‘ಭೂಲ್ ಭುಲಯ್ಯ 3’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಟಿ-ಸೀರೀಸ್ ಆರೋಪ ಮಾಡಿದೆ.
‘ಸಿಂಘಂ ಅಗೇನ್’ ಸಿನಿಮಾವನ್ನು ಪಿವಿಆರ್-ಐನಾಕ್ಸ್ ವಿತರಣೆ ಮಾಡುತ್ತಿದ್ದು, ತಮ್ಮ ಮಲ್ಟಿಪ್ಲೆಕ್ಸ್ ಚೈನ್ನ 60% ಸ್ಕ್ರೀನ್ಗಳನ್ನು ‘ಸಿಂಘಂ ಅಗೇನ್’ ಸಿನಿಮಾಕ್ಕಾಗಿ ಮೀಸಲಿಟ್ಟಿವೆಯಂತೆ. ಇನ್ನುಳಿದ 40% ಸ್ಕ್ರೀನ್ಗಳನ್ನು ‘ಭೂಲ್ ಭುಲಯ್ಯ 3’ ಹಾಗೂ ಇತರೆ ಸಿನಿಮಾಗಳಿಗೆ ಮೀಸಲಿಟ್ಟಿದೆ. ಇದರಿಂದಾಗಿ ತಮ್ಮ ‘ಭೂಲ್ ಭುಲಯ್ಯ 3’ ಸೇರಿದಂತೆ ಇತರೆ ಸಿನಿಮಾಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಟಿ ಸೀರೀಸ್ ಹೇಳಿದೆ. ಅಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೂ ಸಹ ಎಲ್ಲ ಶೋ ಅನ್ನು ‘ಸಿಂಘಂ ಅಗೇನ್’ಗೆ ನೀಡುವಂತೆ ರೋಹಿತ್ ಶೆಟ್ಟಿ ಮತ್ತು ತಂಡ ಸೂಚನೆ ನೀಡಿದ್ದು, ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ‘ಸಿಂಘಂ ಸಿನಿಮಾವನ್ನು ಮಾತ್ರವೇ ಪ್ರದರ್ಶಿಸುತ್ತಿವೆ. ‘ಭೂಲ್ ಭುಲಯ್ಯ 3’ಗೆ ಕೆಲವು ಕಡೆ ಕೇವಲ ಅರ್ಲಿ ಮಾರ್ನಿಂಗ್ ಶೋ ಅನ್ನಷ್ಟೆ ನೀಡಲಾಗಿದೆಯಂತೆ.
ಇದನ್ನೂ ಓದಿ:ಒಟಿಟಿಗೆ ಬರಲಿದೆ ಜೂ ಎನ್ಟಿಆರ್ ‘ದೇವರ’, ಯಾವ್ಯಾವ ಸಿನಿಮಾ ಈ ವಾರ?
ಈ ಅನ್ಯಾಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟಿ-ಸೀರೀಸ್, ಸಿಸಿಐ (ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ)ಕ್ಕೆ ದೂರು ನೀಡಿದೆ. ಅಸ್ಪರ್ಧಾತ್ಮಕ ವಿಧಾನದ ಮೂಲಕ ವ್ಯಾಪಾರ ಮಾಡಲಾಗುತ್ತಿದೆ. ಸಿಸಿಐ ಮಧ್ಯಸ್ಥಿಕೆವಹಿಸಿ 50-50ರ ಅನುಪಾತದಲ್ಲಿ ಸ್ಕ್ರೀನ್ಗಳ ವಿತರಣೆಗೆ ಪಿವಿಆರ್-ಐನಾಕ್ಸ್ಗೆ ಸೂಚಿಸಬೇಕು ಎಂದು ಮನವಿ ಮಾಡಿದೆ.
‘ಸಿಂಘಂ ಅಗೇನ್’ ಸಿನಿಮಾಕ್ಕೆ ರೋಹಿತ್ ಶೆಟ್ಟಿ, ಅಜಯ್ ದೇವಗನ್ ಸೇರಿದಂತೆ ರಿಲಯನ್ಸ್ ಎಂಟರ್ಟೈನ್ಮೆಂಟ್, ಜಿಯೋ ಸ್ಟುಡಿಯೋಸ್, ಸಿನರ್ಜಿ ಸ್ಟುಡಿಯೋಸ್ನವರು ಬಂಡವಾಳ ಹೂಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಅಜಯ್ ದೇವಗನ್, ಕರೀನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್ ಹಾಗೂ ಸಲ್ಮಾನ್ ಖಾನ್ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ವಿಲನ್ ಆಗಿ ಅರ್ಜುನ್ ಕಪೂರ್ ನಟಿಸಿದ್ದಾರೆ. ಸಿನಿಮಾದಲ್ಲಿ ರಾಮಾಯಣದ ರೆಫರೆನ್ಸ್ ತರಲಾಗಿದೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ