ಕಂಗನಾ ರಣಾವತ್​ ಕೂ ಖಾತೆಗೆ 10 ಲಕ್ಷ ಫಾಲೋವರ್ಸ್​; ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಿತು ಹವಾ

ವೇದಿಕೆ ಯಾವುದಾದರೇನು, ಅಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸುವ ತಾಕತ್ತು ತಮ್ಮಲ್ಲಿದೆ ಎಂಬುದನ್ನು ಕಂಗನಾ ರಣಾವತ್​ ಸಾಬೀತು ಮಾಡುತ್ತಲೇ ಇದ್ದಾರೆ. ಅವರ ಕೂ ಖಾತೆಗೆ ಒಂದು ಮಿಲಿಯನ್​ ಫಾಲೋವರ್ಸ್​ ಆಗಿದ್ದಾರೆ.

ಕಂಗನಾ ರಣಾವತ್​ ಕೂ ಖಾತೆಗೆ 10 ಲಕ್ಷ ಫಾಲೋವರ್ಸ್​; ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಿತು ಹವಾ
ಕಂಗನಾ ರಣಾವತ್
Edited By:

Updated on: Sep 17, 2021 | 4:00 PM

ನಟಿ ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಹಲವು ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾರೆ. ಆ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರಬೇಕು ಎಂಬುದು ಅವರ ಉದ್ದೇಶ. ಆ ಕಾರಣದಿಂದ ಅವರನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ದೊಡ್ಡದಿದೆ. ಫೇಸ್​ಬುಕ್​, ಇನ್ಸ್​ಸ್ಟಾಗ್ರಾಮ್​ ಮಾತ್ರವಲ್ಲದೆ, ಕೂ ಆ್ಯಪ್​ನಲ್ಲೂ ಕಂಗನಾ ಖಾತೆ ಹೊಂದಿದ್ದಾರೆ. ಅದರಲ್ಲಿಯೂ ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದು, ಕಂಗನಾ ಒಂದು ಮೈಲಿಗಲ್ಲು ತಲುಪಿದ್ದಾರೆ. ಕಂಗನಾ ಕೂ ಖಾತೆಗೆ ಒಂದು ಮಿಲಿಯನ್​ (10 ಲಕ್ಷ) ಫಾಲೋವರ್ಸ್​ ಆಗಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಕಂಗನಾ ಅವರ ಕೂ ಖಾತೆಯ ಫಾಲೋವರ್ಸ್​ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇತ್ತೀಚೆಗೆ ಬಿಡುಗಡೆಯಾದ ‘ತಲೈವಿ’ ಸಿನಿಮಾ ಕುರಿತು ಅವರು ಹಲವು ಪೋಸ್ಟ್​ಗಳನ್ನು ಮಾಡಿದ್ದರು. ಅವರ ಚಿತ್ರದ ಪ್ರಚಾರಕ್ಕೆ ಇದು ಭರ್ಜರಿ ವೇದಿಕೆ ಆಯಿತು. ಅಲ್ಲದೇ ಅನೇಕ ವಿಚಾರಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗಾಗಿ ಅವರ ಖಾತೆಯ ಬಗ್ಗೆ ನೆಟ್ಟಿಗರು ಹೆಚ್ಚು ಕುತೂಹಲ ತೋರಿಸುತ್ತಿದ್ದಾರೆ.

ಇತರೆ ಸಾಮಾಜಿಕ ಜಾಲತಾಣಗಳಿಗೆ ಹೋಲಿಸಿದರೆ ಕೂ ಆರಂಭವಾಗಿರುವುದು ಇತ್ತೀಚೆಗೆ. 2020ರ ಮಾರ್ಚ್​​ನಲ್ಲಿ ಕಾರ್ಯರಂಭ ಮಾಡಿದ ಈ ಆ್ಯಪ್​ನತ್ತ ಹಲವು ಸೆಲೆಬ್ರಿಟಿಗಳು ಆಸಕ್ತಿ ತೋರಿಸುತ್ತಿದ್ದಾರೆ. ಅವರ ಪೈಕಿ ಒಂದು ಮಿಲಿಯನ್ ಫೋಲೋವರ್ಸ್​ ಪಡೆದ ಮೊದಲ ಮಹಿಳಾ ಸೆಲೆಬ್ರಿಟಿ ಎಂಬ ಖ್ಯಾತಿ ಸಿಕ್ಕಿರುವುದು ಕಂಗನಾ ರಣಾವತ್ ಅವರಿಗೆ ಎಂಬುದು ವಿಶೇಷ. ಕೆಲವೇ ತಿಂಗಳ ಹಿಂದೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ಕಂಗನಾ ಅವರ ಟ್ವಿಟರ್​ ಖಾತೆಯನ್ನು ಶಾಶ್ವತವಾಗಿ ಬ್ಯಾನ್​ ಮಾಡಲಾಯಿತು. ಹಾಗಂತ ಅವರು ಕುಗ್ಗಲಿಲ್ಲ. ಟ್ವಿಟರ್​ ಬದಲಿಗೆ ಬೇರೆ ಸೋಶಿಯಲ್​ ಮೀಡಿಯಾಗಳನ್ನು ಹೆಚ್ಚಾಗಿ ಬಳಸಲು ಆರಂಭಿಸಿದರು. ವೇದಿಕೆ ಯಾವುದಾದರೇನು, ಅಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸುವ ತಾಕತ್ತು ತಮ್ಮಲ್ಲಿದೆ ಎಂಬುದನ್ನು ಕಂಗನಾ ಸಾಬೀತು ಮಾಡುತ್ತಲೇ ಇದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದ್ದ ‘ತಲೈವಿ’ ಸಿನಿಮಾ ಹೇಳಿಕೊಳ್ಳುವಷ್ಟು ಕಲೆಕ್ಷನ್​ ಮಾಡಿಲ್ಲ. ಕೊರೊನಾ ಭೀತಿ, ಕೆಲವು ಮಲ್ಟಿಪ್ಲೆಕ್ಸ್​ಗಳ ಅಸಹಕಾರ, ಶೇ. 50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಚಿತ್ರಕ್ಕೆ ಹಿನ್ನಡೆ ಆಯಿತು. ವಿಮರ್ಶಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಶೀಘ್ರದಲ್ಲೇ ಈ ಸಿನಿಮಾ ಓಟಿಟಿಗೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ‘ತೇಜಸ್​’, ‘ಧಾಕಡ್​’, ‘ಎಮರ್ಜಿನ್ಸಿ’, ‘ಮಣಿಕರ್ಣಿಕಾ ರಿಟರ್ನ್ಸ್​​​’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಇದನ್ನೂ ಓದಿ:

‘ತಲೈವಿ’ ರಿಲೀಸ್​ಗೂ ಮೊದಲೇ ಕಂಗನಾ ರಣಾವತ್​ಗೆ ಬಾಂಬೆ ಹೈಕೋರ್ಟ್​ನಿಂದ ಕಹಿ ಸುದ್ದಿ

ಕಂಗನಾ ರಣಾವತ್ ಮುಂದಿನ ನಿಲ್ದಾಣ ರಾಜಕೀಯ; ‘ತಲೈವಿ’ ಬೆನ್ನಲ್ಲೇ ಮಹತ್ವದ ನಿರ್ಧಾರ, ಯಾವ ಪಕ್ಷ?