ಭಾರತೀಯ ಚಿತ್ರರಂಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಹಲವು ದಾಖಲೆಗಳನ್ನು ಮಾಡುತ್ತಿದೆ. ದಿನದಿಂದ ದಿನಕ್ಕೆ ಈ ಚಿತ್ರದ ಗಲ್ಲಾಪೆಟ್ಟಿಗೆ ಗಳಿಕೆ ಜಾಸ್ತಿ ಆಗುತ್ತಲೇ ಇದೆ. ಈ ಬೆಳವಣಿಗೆ ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಿ 9 ದಿನ ಕಳೆದಿದೆ. ಆದರೂ ಕೂಡ ಇಂದಿಗೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ದೇಶಾದ್ಯಂತ ಜನರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಪರಿಣಾಮವಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ (The Kashmir Files Box Office Collection) ಗಣನೀಯವಾಗಿ ಏರಿಕೆ ಆಗಿದೆ. ಈ ಸಿನಿಮಾ ಎದುರು ಬಿಡುಗಡೆಯಾದ ಹಲವು ಚಿತ್ರಗಳು ಸೋತು ಸುಣ್ಣವಾಗಿವೆ. ‘ರಾಧೆ ಶ್ಯಾಮ್’, ‘ಬಚ್ಚನ್ ಪಾಂಡೆ’ ಸಿನಿಮಾಗಳಿಗೂ ಟಫ್ ಪೈಪೋಟಿ ನೀಡಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ದಾಖಲೆ ಮಾಡುತ್ತಿದೆ. ಈ ಚಿತ್ರಕ್ಕೆ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿದ್ದು, ಅವರಿಗೆ ಅನೇಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಾಗೆಯೇ ಕೆಲವು ವಿವಾದಗಳಿಗೂ ಈ ಸಿನಿಮಾ ಕಾರಣ ಆಗಿದೆ.
ಯಾವುದೇ ಸಿನಿಮಾ ಬಿಡುಗಡೆ ಆದಾಗ ಮೊದಲ ಮೂರು ದಿನ ಭರ್ಜರಿ ಕಲೆಕ್ಷನ್ ಆಗುತ್ತದೆ. ನಂತರದ ದಿನಗಳಲ್ಲಿ ಕಲೆಕ್ಷನ್ ನಿಧಾನವಾಗಿ ಕುಸಿಯುತ್ತದೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ವಿಚಾರದಲ್ಲಿ ಅದು ಉಲ್ಟಾ ಆಗಿದೆ. ಮೊದಲ ದಿನ ಅತಿ ಕಡಿಮೆ, ಅಂದರೆ 3.55 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾ ಮರುದಿನದಿಂದಲೇ ಕಲೆಕ್ಷನ್ ಹೆಚ್ಚಿಸಿಕೊಂಡಿತು. ಪ್ರತಿ ದಿನವೂ ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಹೆಚ್ಚುತ್ತಲೇ ಇದೆ. 9ನೇ ದಿನವಾದ ಶನಿವಾರ (ಮಾ.19) ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ 24.80 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 9 ದಿನಕ್ಕೆ ಒಟ್ಟು ಕಲೆಕ್ಷನ್ 141 ಕೋಟಿ ರೂಪಾಯಿ ಆಗಿದೆ.
ಅತಿ ಶೀಘ್ರದಲ್ಲೇ ಈ ಸಿನಿಮಾ 200 ಕೋಟಿ ರೂಪಾಯಿ ಮಾಡಲಿದೆ ಎಂಬುದು ದಟ್ಟವಾಗಿದೆ. ಇಂದು (ಮಾ.20) ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿದ್ದಾರೆ. ಸಹಜವಾಗಿಯೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕಲೆಕ್ಷನ್ ಹೆಚ್ಚಾಗಲಿದೆ. ಭಾನುವಾರ 30 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ಗಲ್ಲಾಪೆಟ್ಟಿಗೆ ಲೆಕ್ಕಾಚಾರ ಬಲ್ಲವರು ಊಹಿಸುತ್ತಿದ್ದಾರೆ. ದೇಶದ ಬಹುತೇಕ ಕಡೆಗಳಲ್ಲಿ ಈ ಚಿತ್ರದ ಭಾನುವಾರದ (ಮಾ.20) ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
#TheKashmirFiles is a ONE-HORSE RACE… Day 9 [Sat] is HIGHER than *all 8 days*… Trending like #Baahubali2 in *Weekend 2*… There’s a *strong possibility* of hitting ₹ 28 cr – ₹ 30 cr today [Day 10]… [Week 2] Fri 19.15 cr, Sat 24.80 cr. Total: ₹ 141.25 cr. #India biz. pic.twitter.com/zYB0L6RiOj
— taran adarsh (@taran_adarsh) March 20, 2022
ಸಿನಿಮಾಗೆ ಅಭೂತಪೂರ್ವ ಗೆಲುವು ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ವಿವಾದಗಳು ಹೆಚ್ಚಿರುವ ಕಾರಣ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಯಶಸ್ಸಿನ ಬಳಿಕ ಅವರು ‘ದಿ ದಿಲ್ಲಿ ಫೈಲ್ಸ್’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಆಗುವ ಅವಘಡಗಳ ಬಗ್ಗೆ ಆತಂಕ ಹೊರಹಾಕಿದ ಪ್ರಕಾಶ್ ರಾಜ್