ನಟಿ ಅದಾ ಶರ್ಮಾ (Adah Sharma) ಅವರು ಹಲವು ಕಾರಣಗಳಿಂದಾಗಿ ಸುದ್ದಿ ಆಗುತ್ತಿದ್ದಾರೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಬಿಡುಗಡೆ ಬಳಿಕ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ಇನ್ನೊಂದು ವಿಶೇಷ ಕಾರಣದಿಂದ ಮತ್ತೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ವಾಸವಾಗಿದ್ದ ಮನೆಯನ್ನು ಅದಾ ಶರ್ಮಾ ಅವರು ಬಾಡಿಗೆಗೆ ಪಡೆದಿದ್ದಾರೆ. ಈ ಸುದ್ದಿ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರು ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿದ್ದು ಗೊತ್ತೇ ಇದೆ. ಆ ಜಾಗದಲ್ಲಿ ವಾಸ ಮಾಡಲು ಬಹುತೇಕರು ಬಯಸುವುದಿಲ್ಲ. ಹಾಗಿದ್ದರೂ ಕೂಡ ಅದಾ ಶರ್ಮಾ ಅವರು ಅದೇ ಮನೆಯನ್ನು ಬಾಡಿಗೆ ಪಡೆದಿರುವುದು ಅಚ್ಚರಿ ಮೂಡಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದರು. ಅವರ ಕೈಯಲ್ಲಿ ಹಲವು ಸಿನಿಮಾಗಳು ಇದ್ದವು. ಅನೇಕ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಏಕಾಏಕಿ ಸಾವಿಗೆ ಶರಣಾಗಿದ್ದು ಎಲ್ಲರಿಗೂ ನೋವು ನೀಡಿತು. ಸುಶಾಂತ್ ನಿಧನದ ಬಳಿಕ ಕೇಳಿಬಂದ ಅಂತೆ-ಕಂತೆಗಳು ಒಂದೆರಡಲ್ಲ. ಅವರ ಅಪಾರ್ಟ್ಮೆಂಟ್ ಬಗ್ಗೆಯೂ ಸಾಕಷ್ಟು ಗಾಸಿಪ್ ಹರಿದಾಡಿತು. ಅಂತಹ ವಿವಾದಿತ ಜಾಗದಲ್ಲಿ ಈಗ ಅದಾ ಶರ್ಮಾ ಅವರು ವಾಸ ಮಾಡಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಅವರ ಆ ಫ್ಲಾಟ್ಗೆ ಶಿಫ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಆಂಜನೇಯನೇ ನನ್ನ ನೆಚ್ಚಿನ ಸೂಪರ್ ಹೀರೋ’: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಹೇಳಿಕೆ
ಮಾಧ್ಯಮಗಳ ವರದಿಯ ಪ್ರಕಾರ, ಸುಶಾಂತ್ ನಿಧನದ ನಂತರ ಆ ಜಾಗವನ್ನು ಖರೀದಿಸಲು ಅನೇಕರು ಆಸಕ್ತಿ ತೋರಿಸಿದ್ದರು. ಆದರೆ ಅದನ್ನು ಮಾರಲು ಅಪಾರ್ಟ್ಮೆಂಟ್ ಮಾಲೀಕರಿಗೆ ಇಷ್ಟವಿಲ್ಲ. ಹಾಗಾಗಿ ಕೇವಲ ಬಾಡಿಗೆಗೆ ನೀಡಬೇಕು ಎಂಬುದಷ್ಟೇ ಅವರ ಉದ್ದೇಶ. ಬಾಡಿಗೆಗೆ ಪಡೆದು ವಾಸಿಸಲು ಕೆಲವರು ಹಿಂದೇಟು ಹಾಕಿದ್ದರು. ಕೊನೆಗೂ ಅದಾ ಶರ್ಮಾ ಅವರು ಆ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಪ್ರತಿ ತಿಂಗಳು ಅವರು ಬರೋಬ್ಬರಿ 4.5 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ಮುಂದಿನ ಸಿನಿಮಾ ‘ಸಿ.ಡಿ’ ಪೋಸ್ಟರ್ ವೈರಲ್
ಅದಾ ಶರ್ಮಾ ಅವರು ಅನೇಕ ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ ಅವರಿಗೆ ದೊಡ್ಡ ಗೆಲುವು ಸಿಕ್ಕಿದ್ದು ‘ದಿ ಕೇರಳ ಸ್ಟೋರಿ’ ಸಿನಿಮಾದಿಂದ. ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದ ಆ ಚಿತ್ರದಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಈಗ ಅವರಿಗೆ ಅನೇಕ ಆಫರ್ಗಳು ಸಿಗುತ್ತಿದೆ. ‘ದಿ ಗೇಮ್ ಆಫ್ ಗಿರ್ಗಿಟ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ಸಿ.ಡಿ’ ಶೀರ್ಷಿಕೆಯ ಹೊಸ ಸಿನಿಮಾ ಇತ್ತೀಚೆಗಷ್ಟೇ ಅನೌನ್ಸ್ ಆಗಿದೆ. ಆ ಸಿನಿಮಾದ ಪೋಸ್ಟರ್ ಗಮನ ಸೆಳೆದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.