Saharasri: ಮತ್ತೊಂದು ವಿವಾದಿತ ಸಿನಿಮಾ ಘೋಷಿಸಿದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್​; ಈ ಬಾರಿ ಬಯೋಪಿಕ್​

|

Updated on: Jun 11, 2023 | 2:47 PM

Subrata Roy Biopic: ಸುದೀಪ್ತೋ ಸೇನ್​ ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಸಾಕಷ್ಟು ವಿವಾದಕ್ಕೆ ಕಾರಣ ಆಗಿತ್ತು. ಈಗ ಅವರು ಕೈಗೆತ್ತಿಕೊಂಡಿರುವ ಹೊಸ ಚಿತ್ರದ ಕಥೆಯಲ್ಲೂ ಒಂದಷ್ಟು ವಿವಾದಗಳು ಇವೆ.

Saharasri: ಮತ್ತೊಂದು ವಿವಾದಿತ ಸಿನಿಮಾ ಘೋಷಿಸಿದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್​; ಈ ಬಾರಿ ಬಯೋಪಿಕ್​
‘ಸಹರಾಶ್ರೀ’ ಸಿನಿಮಾ ಪೋಸ್ಟರ್​
Follow us on

ರಿಯಲ್​ ಲೈಫ್​ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಮೂಲಕ ನಿರ್ದೇಶಕ ಸುದೀಪ್ತೋ ಸೇನ್​ (Sudipto Sen) ಅವರು ಫೇಮಸ್​ ಆಗಿದ್ದಾರೆ. ಅವರು ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಮಾಡಿದ ಸಾಧನೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ 237 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ನಟಿ ಅದಾ ಶರ್ಮಾ ಅವರಿಗೆ ಈ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿದೆ. ಈ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ನಿರ್ದೇಶಕ ಸುದೀಪ್ತೋ ಸೇನ್​ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಅವರು ನಿರ್ದೇಶಿಸಲಿರುವ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಸುದೀಪ್ತೋ ಸೇನ್​ ಅವರು ಬಯೋಪಿಕ್​ ಆರಿಸಿಕೊಂಡಿದ್ದಾರೆ. ಭಾರತದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಸುಬ್ರತಾ ರಾಯ್​ (Subrata Roy) ಜೀವನದ ಕುರಿತು ಸಿನಿಮಾ ಮಾಡಲು ಅವರು ತೀರ್ಮಾನಿಸಿದ್ದಾರೆ.

ಎಲ್ಲ ಉದ್ಯಮಿಗಳ ಬದುಕಿನಲ್ಲೂ ಏಳು-ಬೀಳುಗಳು ಇರುತ್ತವೆ. ಸಹರಾ ಕಂಪನಿಯ ಸಂಸ್ಥಾಪಕರಾದ ಸುಬ್ರತಾ ರಾಯ್​ ಬದುಕು ಕೂಡ ಅದಕ್ಕೆ ಹೊರತಾಗಿಲ್ಲ. ಉದ್ಯಮದಲ್ಲಿ ಯಶಸ್ವಿಯಾಗಿದ್ದು ಒಂದು ಕಡೆಯಾದರೆ, ಅನೇಕ ಆರೋಪಗಳನ್ನು ಎದುರಿಸಿದ್ದು ಮತ್ತೊಂದು ಕಡೆ. ಅವರ ಜೀವನದ ಕಥೆಯನ್ನು ಈಗ ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ‘ಸಹರಾಶ್ರೀ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಮೋಷನ್​ ಪೋಸ್ಟರ್​ ಕೂಡ ಬಿಡುಗಡೆ ಆಗಿದೆ.

ಇದನ್ನೂ ಓದಿ: Sudipto Sen: ಆಸ್ಪತ್ರೆ ಸೇರಿದ್ದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್​ ಆರೋಗ್ಯ ಈಗ ಹೇಗಿದೆ?

ಸುದೀಪ್ತೋ ಸೇನ್​ ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಸಾಕಷ್ಟು ವಿವಾದಕ್ಕೆ ಕಾರಣ ಆಗಿತ್ತು. ಈಗ ಅವರು ಕೈಗೆತ್ತಿಕೊಂಡಿರುವ ಹೊಸ ಸಿನಿಮಾದ ಕಥೆಯಲ್ಲೂ ಒಂದಷ್ಟು ವಿವಾದ ಇದೆ. ಸುಬ್ರತಾ ರಾಯ್​ ಜೀವನವನ್ನು ಅವರು ಹೇಗೆ ತೋರಿಸಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಸುಬ್ರತಾ ರಾಯ್​ ಅವರನ್ನು ಸಹರಾಶ್ರೀ ಎಂದು ಕರೆಯಲಾಗುತ್ತಿತ್ತು. ಹಾಗಾಗಿ ಅದೇ ಹೆಸರನ್ನು ಈ ಸಿನಿಮಾಗೆ ಶೀರ್ಷಿಕೆಯಾಗಿಸಲಾಗಿದೆ. ಆದರೆ ಈ ಸಿನಿಮಾದಲ್ಲಿ ಯಾರು ಮುಖ್ಯ ಭೂಮಿಕೆ ನಿಭಾಯಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಚಿತ್ರರಂಗದ ಟಾಪ್​ ನಟರೊಬ್ಬರು ಸುಬ್ರತಾ ರಾಯ್​ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Naseeruddin Shah: ‘ದಿ ಕೇರಳ ಸ್ಟೋರಿ ಹಿಟ್​ ಆಗಿದ್ದು ಅಪಾಯಕಾರಿ ಟ್ರೆಂಡ್​’: ವಿವಾದಿತ ಚಿತ್ರದ ಬಗ್ಗೆ ನಸೀರುದ್ದೀನ್​ ಶಾ ಟೀಕೆ

ಅಂದಹಾಗೆ, ‘ಸಹರಾಶ್ರೀ’ ಸಿನಿಮಾಗೆ ಬಂಡವಾಳ ಹೂಡಲಿರುವುದು ನಿರ್ಮಾಪಕ ಸಂದೀಪ್​ ಸಿಂಗ್​. ಪ್ರಸ್ತುತ ಅವರು ‘ಸ್ವಾತಂತ್ರವೀರ್​ ಸಾವರ್ಕರ್​’ ಹಾಗೂ ‘ಮೈ ಅಟಲ್​ ಹೂ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆ ಸಿನಿಮಾಗಳು ಕೂಡ ಬಯೋಪಿಕ್​ ಎಂಬುದು ಗಮನಿಸಬೇಕಾದ ವಿಷಯ. ಸುಬ್ರತಾ ರಾಯ್​ ಜೀವನದ ವಿವರಗಳನ್ನು ತಿಳಿದುಕೊಳ್ಳಲು ಜನರಿಗೆ ಆಸಕ್ತಿ ಇದೆ. ಹಾಗಾಗಿ ಇದನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಿಂದಿ, ಬೆಂಗಾಲಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಎ.ಆರ್​. ರೆಹಮಾನ್​ ಅವರು ಸಂಗೀತ ನೀಡಲಿದ್ದು, ಗುಲ್ಜಾರ್​ ಸಾಹಿತ್ಯ ಬರೆಯಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.