‘ದಿ ಕೇರಳ ಸ್ಟೋರಿ’ ಸಿನಿಮಾದ (The Kerala Story Movie) ಟ್ರೇಲರ್ ರಿಲೀಸ್ ಆಗಿದೆ. ಅದಾ ಶರ್ಮಾ (Adah Sharma) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಸುದಿಪ್ತೋ ಸೇನ್ ನಿರ್ದೇಶನ ಇದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಚರ್ಚೆ ಹುಟ್ಟುಹಾಕಿದೆ. ಹಿಂದೂ ಕುಟುಂಬದಲ್ಲಿ ಹುಟ್ಟಿ, ಶಿವನ ಆರಾಧನೆ ಮಾಡುವ ಹುಡುಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಐಸಿಸ್ ಸೇರುವ ಕಥೆಯನ್ನು ಈ ಸಿನಿಮಾ ಹೇಳುತ್ತಿದೆ. ಟ್ರೇಲರ್ನಲ್ಲಿರುವ ಹಲವು ವಿಚಾರಗಳು ಚರ್ಚೆ ಹುಟ್ಟುಹಾಕಿದೆ. ಅಂದಹಾಗೆ ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ನಿರ್ದೇಶಕರು ಹೇಳಿದ್ದಾರೆ.
ಶಾಲಿನಿ ಉನ್ನೀಕೃಷ್ಣ (ಅದಾ ಶರ್ಮಾ) ಕೇರಳದ ಹುಡುಗಿ. ಆಕೆಗೆ ಶಿವನ ಮೇಲೆ ಅಪಾರ ಭಕ್ತಿ. ಶಿಕ್ಷಣ ಪಡೆಯಲು ಆಕೆ ಹಾಸ್ಟೆಲ್ ಸೇರುತ್ತಾಳೆ. ಅಲ್ಲಿ ಮುಸ್ಲಿಂ ಹುಡುಗಿಯ ಪರಿಚಯ ಆಗುತ್ತದೆ. ಶಾಲಿನಿ ಮೇಲೆ ನಿಧಾನವಾಗಿ ಮುಸ್ಲಿಂ ಧರ್ಮದ ಪ್ರಭಾವ ಬೀರಲು ಶುರು ಆಗುತ್ತದೆ. ಇದೇ ಸಂದರ್ಭದಲ್ಲಿ ಶಾಲಿನಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಲಾಗುತ್ತದೆ. ‘ಹಿಜಾಬ್ ಹಾಕಿದವರ ಮೇಲೆ ಎಂದಿಗೂ ಅತ್ಯಾಚಾರ ಆಗಲ್ಲ. ಅವರನ್ನು ಯಾರೂ ಚುಡಾಯಿಸುವುದಿಲ್ಲ. ಏಕೆಂದರೆ ಅಲ್ಲಾಹ್ ಯಾವಾಗಲೂ ಅವಳನ್ನು ಕಾಯುತ್ತಿರುತ್ತಾನೆ’ ಎಂದು ಮುಸ್ಲಿಂ ಹುಡುಗಿ ಹೇಳಿದ ಮಾತು ಶಾಲಿನಿ ಮೇಲೆ ಪ್ರಭಾವ ಬೀರುತ್ತದೆ.
ಈ ಘಟನೆ ಬಳಿಕ ಆಕೆಯ ಬಾಳಲ್ಲಿ ಹಲವು ಏರುಪೇರುಗಳು ಉಂಟಾಗುತ್ತವೆ. ಶಾಲಿನಿ ಮತಾಂತರಗೊಂಡು ಫಾತಿಮಾ ಆಗಿ ಬದಲಾಗುತ್ತಾಳೆ. ಐಸಿಸ್ ಸೇರುತ್ತಾಳೆ. ಅಲ್ಲಿ ನರಕ ಅನುಭವಿಸುತ್ತಾಳೆ. ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳುತ್ತಾಳೆ. ತನ್ನ ಬಾಳಲ್ಲಿ ಏನಾಯಿತು ಎಂಬುದನ್ನು ಹೇಳುತ್ತಾಳೆ. ‘ದಿ ಕೇರಳ ಸ್ಟೋರಿ’ ಟ್ರೇಲರ್ನಲ್ಲಿ ಇಷ್ಟು ವಿಚಾರ ತೋರಿಸಲಾಗಿದೆ. ಲವ್ ಜಿಹಾದ್ ವಿಚಾರಗಳೂ ಟ್ರೇಲರ್ನಲ್ಲಿವೆ.
ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ವಿವಾದ: ‘ನಾವು ಸಾಕ್ಷಿ ಇಲ್ಲದೇ ಏನನ್ನೂ ಹೇಳಲ್ಲ’ ಎಂದ ನಿರ್ಮಾಪಕ ವಿಪುಲ್ ಶಾ
‘ದಿ ಕೇರಳ ಸ್ಟೋರಿ’ ನೈಜ ಘಟನೆ ಆಧಾರಿತವಾಗಿದ್ದು ಎಂದು ನಿರ್ದೇಶಕರು ಹೇಳಿದ್ದಾರೆ. 2022ರಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹಿಟ್ ಆಯಿತು. ಕಾಶ್ಮೀರಿ ಪಂಡಿತರ ವಲಸೆ ಮತ್ತು ಅವರ ಹತ್ಯೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ಈಗ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಬರುತ್ತಿದ್ದು ಇದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮೇ 5ರಂದು ‘ದಿ ಕೇರಳ ಸ್ಟೋರಿ’ ರಿಲೀಸ್ ಆಗುತ್ತಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಸಿನಿಮಾ ಏಕೆ ರಿಲೀಸ್ ಆಗುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ