ಎಡ-ಬಲ ಸಿದ್ಧಾಂತಗಳ ಚರ್ಚೆ ಮೊದಲಿನಿಂದಲೂ ಇದೆ. ಕೆಲವರು ಎಡ ತತ್ವವನ್ನು ನಂಬಿದರೆ ಇನ್ನೂ ಕೆಲವರು ಬಲಪಂಥೀಯ ವಾದವನ್ನು ನಂಬುತ್ತಾರೆ. ಕೆಲವು ಘಟನೆಗಳಿಂದ ನಂಬಿಕೆಗಳಲ್ಲಿ ಬದಲಾವಣೆ ಆಗುತ್ತದೆ. ಈಗ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files Movie)ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ತಮ್ಮ ಜೀವನದಲ್ಲಿ ನಡೆದ ಘಟನೆಯ ಕುರಿತು ಹೇಳಿಕೊಂಡಿದ್ದಾರೆ. ಅವರು ಈ ಮೊದಲು ಎಡಪಂಥೀಯರಾಗಿದ್ದರಂತೆ. ಆದರೆ, ಅವರು ನಂತರ ಬಲಪಂಥೀಯರ ಸಾಲಿಗೆ ಸೇರಿದರು. ಹೀಗೇಕೆ ಎಂಬುದನ್ನು ಅವರು ವಿವರಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಅನೇಕರು ಈ ಚಿತ್ರವನ್ನು ಟೀಕೆ ಮಾಡಿದರು. ಇದು ಬಿಜೆಪಿ ಬೆಂಬಲಿತರಿಂದ ಸಿದ್ಧವಾದ ಸಿನಿಮಾ ಎನ್ನುವ ಮಾತುಗಳು ಕೇಳಿ ಬಂದವು. ಇದಕ್ಕೆಲ್ಲ ವಿವೇಕ್ ಉತ್ತರಿಸಿದ್ದರು. ಆದರೆ, ವಿವೇಕ್ ಮೊದಲು ಈ ರೀತಿ ಇರಲಿಲ್ಲ. ಅವರು ‘ಅರ್ಬನ್ ನಕ್ಸಲ್’ ಹೆಸರಿನ ಪುಸ್ತಕ ಕೂಡ ಬರೆದಿದ್ದರು.
‘ನನ್ನ ಡಿಎನ್ಎ ತುಂಬಾನೇ ಭಿನ್ನವಾದುದು. ಯಾವುದೇ ಸಂಸ್ಥೆಗಳು ನನ್ನನ್ನು ರೂಪಿಸಲು ಸಾಧ್ಯವಿಲ್ಲ. ನಾನು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದೆ. ‘ಕುದುರೆ ಒಳಗೆ ಹೋದರೆ ಕುದುರೆ ಹೊರಬರುತ್ತದೆ. ಕತ್ತೆ ಒಳಗೆ ಹೋದರೆ ಕತ್ತೆ ಮಾತ್ರ ಬರಲು ಸಾಧ್ಯ’ ಎಂಬ ಸಾಲು ಅಲ್ಲಿನ ಗೇಟ್ ಮೇಲೆ ಬರೆದಿತ್ತು. ಒಂದು ಸಂಸ್ಥೆ ವ್ಯಕ್ತಿಯನ್ನು ರೂಪಿಸಲು ಸಾಧ್ಯವಿಲ್ಲ. ಹಾಗಾಗುತ್ತಿದೆ ಎಂದರೆ ಅದು ಸಂಸ್ಥೆಯ ವೈಫಲ್ಯ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಫಸ್ಟ್ಪೋಸ್ಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ಜೆಎನ್ಯು ವಿಶ್ವವಿದ್ಯಾನಿಲಯದ ಸಮಸ್ಯೆ ಏನೆಂದರೆ ಅವರು ವಿದ್ಯಾರ್ಥಿಗಳ ಬ್ರೇನ್ವಾಶ್ ಮಾಡುತ್ತಾರೆ. ಇಲ್ಲಿ ಕೆಲ ವಿದ್ಯಾರ್ಥಿಗಳನ್ನು ಹೇಗೆ ರೂಪಿಸಲಾಗುತ್ತದೆ ಎಂದರೆ ಅವರು ಏನೇ ಹೇಳಿದರೂ ವಿರೋಧಿಸುತ್ತಾರೆ. ಕೆಲವೊಮ್ಮೆ ನೀವು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕಾಗುತ್ತದೆ. ಕೇವಲ ಟೀಕೆ ಮಾಡುತ್ತಿರುವುದರಿಂದ ಸಹಕಾರಿ ಆಗುವುದಿಲ್ಲ. ನಾನು ನಕ್ಸಲ್ ಆಗಿದ್ದೆ, ಎಡಪಂಥೀಯ ಸಿದ್ಧಾಂತಗಳನ್ನು ನಂಬುತ್ತಿದ್ದೆ. ಆದರೆ, ಕೇವಲ ಟೀಕೆ ಮಾಡುತ್ತಿರುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ಗೊತ್ತಾಯಿತು. ಒಂದೊಮ್ಮೆ ಹಾಗೆಯೇ ಇದ್ದರೆ ಸಮಾಜಕ್ಕೆ ನಿಮ್ಮ ಕೊಡುಗೆ ಏನೂ ಇರುವುದಿಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಬಜೆಟ್ ಎಷ್ಟು? ಮುಚ್ಚುಮರೆ ಇಲ್ಲದೇ ಲೆಕ್ಕ ನೀಡಿದ ವಿವೇಕ್ ಅಗ್ನಿಹೋತ್ರಿ
‘ನಾನು ಸಾಕಷ್ಟು ಸಮಯವನ್ನು ಬಾಲಿವುಡ್ ಹಾಗೂ ಜೆಎನ್ಯುನಲ್ಲಿ ಕಳೆದಿದ್ದೇನೆ. ಆದರೆ, ಇದಾವುದೂ ನನ್ನನ್ನು ರೂಪಿಸಿಲ್ಲ’ ಎಂದು ಅವರು ಹೇಳಿದ್ದಾರೆ. ಅವರ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸಿದ್ಧವಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಈ ಚಿತ್ರ ಬರಲಿದೆ ಎನ್ನಲಾಗಿತ್ತು. ಆದರೆ, ಸಿನಿಮಾ ಕೆಲಸಗಳು ಮುಗಿಯದ ಕಾರಣ ರಿಲೀಸ್ ದಿನಾಂಕ ಮುಂದಕ್ಕೆ ಹೊಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ