ಕರೀನಾ ಕಪೂರ್ ನಡೆದುಕೊಂಡ ರೀತಿಗೆ ನಾರಾಯಣಮೂರ್ತಿ ಬೇಸರ; ಸುಧಾಮೂರ್ತಿ ಉತ್ತರ ಏನು?
ಕರೀನಾ ವಿಮಾನದಲ್ಲಿ ಹೇಗೆ ನಡೆದುಕೊಂಡಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ನಾರಾಯಣಮೂರ್ತಿ ಅವರು ವಿವರಿಸಿದ್ದಾರೆ. ಜೊತೆಗೆ ಈ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ನಟಿ ಕರೀನಾ ಕಪೂರ್ (Kareena Kapoor) ಅವರು ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಆರಾಧಿಸುವ ಅನೇಕರಿದ್ದಾರೆ. ಕರೀನಾ ಅವರು ಅಭಿಮಾನಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದೂ ಇದೆ. ಈಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಕರೀನಾ ಬಗ್ಗೆ ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿ ಕೆಲವರಿಗೆ ಅಚ್ಚರಿ ಆಗಿದೆ. ನಾರಾಯಣಮೂರ್ತಿ ಅವರು ಭಾವಿಸಿರುವುದು ತಪ್ಪಿರಬಹುದು ಎನ್ನುವ ಅಭಿಪ್ರಾಯವನ್ನು ಸುಧಾಮೂರ್ತಿ ಅವರು ವೇದಿಕೆ ಮೇಲೆಯೇ ವ್ಯಕ್ತಪಡಿಸಿದ್ದರು.
ನಾರಾಯಣಮೂರ್ತಿ ಅವರು ಮಾತನಾಡಿರುವುದು ನಾಲ್ಕು ವರ್ಷಗಳ ಹಳೆಯ ವಿಡಿಯೋ. ಇದು ಈಗ ಮತ್ತೆ ವೈರಲ್ ಆಗಿದೆ. ಕರೀನಾ ವಿಮಾನದಲ್ಲಿ ಹೇಗೆ ನಡೆದುಕೊಂಡಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ನಾರಾಯಣಮೂರ್ತಿ ಅವರು ವಿವರಿಸಿದ್ದಾರೆ. ‘ನಾನು ವಿಮಾನದಲ್ಲಿ ಲಂಡನ್ನಿಂದ ಆಗಮಿಸುತ್ತಿದ್ದೆ. ನನ್ನ ಮುಂದಿನ ಸಾಲಿನಲ್ಲಿ ಕರೀನಾ ಕಪೂರ್ ಅವರು ಕುಳಿತಿದ್ದರು. ಅನೇಕರು ಬಂದು ಕರೀನಾ ಅವರಿಗೆ ಹಾಯ್ ಎಂದು ಮಾತನಾಡಿಸುತ್ತಿದ್ದರು. ಆದರೆ, ಅವರು ಪ್ರತ್ಯುತ್ತರ ಕೊಡುವ ಗೋಜಿಗೂ ಹೋಗಿಲ್ಲ’ ಎಂದು ನಾರಾಯಣಮೂರ್ತಿ ಮಾತು ಆರಂಭಿಸಿದರು.
‘ನನ್ನ ಬಳಿ ಬಂದು ಯಾರಾದರೂ ಮಾತನಾಡಿದರೆ ನಾನು ಎದ್ದು ನಿಂತು ಒಂದೆರಡು ನಿಮಿಷ ಮಾತನಾಡುತ್ತೇನೆ. ಎಲ್ಲರೂ ಇದನ್ನೇ ನಿರೀಕ್ಷಿಸುತ್ತಾರೆ’ ಎಂದು ನಾರಾಯಣಮೂರ್ತಿ ಹೇಳಿದ್ದಾರೆ. ಇವರ ಮಾತಿನ ಮಧ್ಯೆ ಸುಧಾಮೂರ್ತಿ ತಮ್ಮ ಅಭಿಪ್ರಾಯ ತಿಳಿಸಿದರು. ‘ನಿಮಗೆ 10 ಸಾವಿರ ಹಿಂಬಾಲಕರು ಇರಬಹುದು. ಅವರಿಗೆ ಲಕ್ಷಾಂತರ ಮಂದಿ ಫಾಲೋವರ್ಸ್ ಇರುತ್ತಾರೆ. ಅವರಿಗೆ ಇದನ್ನೆಲ್ಲ ಮಾಡಿ ಸುಸ್ತಾಗಿರಬಹುದು’ ಎಂದರು ಸುಧಾಮೂರ್ತಿ.
ಸುಧಾಮೂರ್ತಿ ಅವರು ಆಡಿದ ಮಾತನ್ನು ನಾರಾಯಣಮೂರ್ತಿ ಅವರು ಒಪ್ಪಲಿಲ್ಲ. ‘ಯಾರಾದರೂ ಬಂದು ನಿಮಗೆ ಗೌರವ ಹಾಗೂ ಪ್ರೀತಿ ತೋರಿಸಿದರೆ ನಿಮ್ಮ ಕೈಲಾದ ರೀತಿಯಲ್ಲಿ ಅದಕ್ಕೆ ಉತ್ತರ ನೀಡಬೇಕು. ಆಗ ನಿಮ್ಮ ಅಹಂ ಕಡಿಮೆ ಆಗುತ್ತದೆ’ ಎಂದು ನಾರಾಯಣಮೂರ್ತಿ ಹೇಳಿದ್ದಾರೆ. ಸದ್ಯ ವಿಡಿಯೋಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.
View this post on Instagram
ಇದನ್ನೂ ಓದಿ: ‘ಒಮ್ಮೆ ನಿಮ್ಮನ್ನು ಮುಟ್ತೀನಿ’: ಕರೀನಾ ಕಪೂರ್ ಎದುರು ಮನವಿ ಮಾಡಿದ ಅಭಿಮಾನಿ: ನಟಿಯ ಪ್ರತಿಕ್ರಿಯೆ ಹೇಗಿತ್ತು?
ಸೆಲೆಬ್ರಿಟಿಗಳ ಮೂಡ್ ಒಮ್ಮೊಮ್ಮೆ ಒಂದೊಂದು ರೀತಿಯಲ್ಲಿರುತ್ತದೆ. ಅವರು ಕೆಟ್ಟ ಮೂಡ್ನಲ್ಲಿದ್ದಾಗ ಬಂದು ಸೆಲ್ಫಿ ಕೇಳಿದರೆ ಅವರು ಸಿಟ್ಟಾಗಬಹುದು. ಅವರು ಯಾವ ಮನಸ್ಥಿತಿಯಲ್ಲಿ ಇದ್ದರು ಎನ್ನುವುದು ಕೂಡ ಮುಖ್ಯವಾಗುತ್ತದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನೂ ಕೆಲವರು ‘ಕರೀನಾ ಕಪೂರ್ ನಡೆದುಕೊಳ್ಳುವುದೇ ಹಾಗೆ’ ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:41 am, Wed, 26 July 23