ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಇಬ್ಬರು ಎನ್​ಕೌಂಟರ್​​ನಲ್ಲಿ ಹತ್ಯೆ

ಬರೇಲಿಯಲ್ಲಿರುವ ನಟಿ ದಿಶಾ ಪಟಾನಿ ಅವರ ಮನೆ ಮೇಲೆ ಗುಂಡಿನ ದಾಳಿ ಮಾಡಿದ ಆರೋಪಿಗಳ ಎನ್​ಕೌಂಟರ್ ಆಗಿದೆ. ಈ ವೇಳೆ ಗಾಯಗೊಂಡ ಇಬ್ಬರು ಆರೋಪಿಗಳು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಇಬ್ಬರು ಎನ್​ಕೌಂಟರ್​​ನಲ್ಲಿ ಹತ್ಯೆ
Disha Patani

Updated on: Sep 17, 2025 | 9:14 PM

ಇತ್ತೀಚೆಗೆ ನಟಿ ದಿಶಾ ಪಟಾನಿ (Disha Patani) ಅವರ ಬರೇಲಿ ನಿವಾಸದ ಎದುರು ಗುಂಡಿನ ದಾಳಿ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳ ಮೇಲೆ ಈಗ ಎನ್​ಕೌಂಟರ್ ಮಾಡಲಾಗಿದೆ. ಇದರಲ್ಲಿ ಗಾಯಗೊಂಡ ಇಬ್ಬರು ಮೃತರಾಗಿದ್ದಾರೆ. ಬುಧವಾರ (ಸೆಪ್ಟೆಂಬರ್ 17) ಘಾಜಿಯಾಬಾದ್​​ನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಸ್ಪೆಷಲ್ ಟಾಸ್​ಕ್ ಫೋರ್ಸ್ ಅಧಿಕಾರಿಗಳು ಎನ್​ಕೌಂಟರ್ (Encounter) ಮಾಡಿದ್ದಾರೆ. ಮೃತರನ್ನು ಅರುಣ್ ಮತ್ತು ರವೀಂದ್ರ ಎಂದು ಗುರುತಿಸಲಾಗಿದೆ. ರೋಹಿತ್ ಗೋದಾರ ಮತ್ತು ಬೋಲ್ಡಿ ಬ್ರಾರ್ ಗ್ಯಾಂಗ್ ಜತೆ ಅವರಿಬ್ಬರು ಗುರುತಿಸಿಕೊಂಡಿದ್ದರು.

ಸನಾತನ ಧರ್ಮದ ಸಂತರ ಬಗ್ಗೆ ದಿಶಾ ಪಟಾನಿ ಸಹೋದರಿ ಖುಷ್ಬೂ ಪಟಾನಿ ಅವರು ಅಗೌರವ ತೋರಿದ್ದಾರೆ ಎಂಬ ಕಾರಣಕ್ಕೆ ಸೆಪ್ಟೆಂಬರ್ 12ರಂದು ನಸುಕಿನ 3.45ರ ಸುಮಾರಿಗೆ ಗುಂಡಿನ ದಾಳಿ ಮಾಡಲಾಗಿತ್ತು. ಅದರಿಂದ ಆತಂಕದ ವಾತಾವರಣ ಸೃಷ್ಟಿ ಆಗಿತ್ತು. ಈ ಕೃತ್ಯ ಎಸಗಿದವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಚನೆ ನೀಡಿದ್ದರು.

ಸಿಸಿಟಿವಿ ದೃಶ್ಯಗಳು, ಗುಪ್ತಚರ ಮಾಹಿತಿ ಮುಂತಾದ ಸಾಕ್ಷಿಗಳನ್ನು ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಸ್ಪೆಷಲ್ ಟಾಸ್ಕ್ ಫೋರ್ಸ್ ಅಧಿಕಾರಿಗಳು ಮುಂದಾದರು. ದೆಹಲಿ ಕ್ರೈಂ ಬ್ರ್ಯಾಂಚ್ ಸಹಯೋಗದಲ್ಲಿ ಕಾರ್ಯಾಚರಣೆ ಮಾಡಲಾಯಿತು. ಈ ವೇಳೆ ಎನ್​​ಕೌಂಟರ್ ನಡೆಯಿತು. ಅದರಲ್ಲಿ ಗಾಯಗೊಂಡ ಇಬ್ಬರು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಅವರಿಬ್ಬರು ಮೃತರಾದರು.

ಆರೋಪಿಗಳಿಂದ ಪಿಸ್ತೂಲ್ ಮುಂತಾದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ರವೀಂದ್ರ ಈ ಹಿಂದಿನ ಅನೇಕ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಗ್ಯಾಂಗ್​​ ಜೊತೆ ಸಂಪರ್ಕ ಹೊಂದಿರುವ ಇನ್ನೂ ಅನೇಕರನ್ನು ಪತ್ತೆ ಹಚ್ಚಲಾಗುತ್ತಿದೆ. ದಿಶಾ ಪಟಾನಿ ಮನೆ ಎದುರು ನಡೆದ ಗುಂಡಿನ ದಾಳಿಯ ಹೊಣೆಯನ್ನು ರೋಹಿತ್ ಗೋದಾರ ಮತ್ತು ಬೋಲ್ಡಿ ಬ್ರಾರ್ ಗ್ಯಾಂಗ್ ಹೊತ್ತಿಕೊಂಡಿದೆ.

ಇದನ್ನೂ ಓದಿ: ಗುಂಡಿನ ದಾಳಿ ಬಳಿಕವೂ ಬೋಲ್ಡ್ ಫೋಟೋ ಹಂಚಿಕೊಂಡ ದಿಶಾ ಪಟಾನಿ

ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ದಾಳಿಕೋರರ ಪೋಸ್ಟ್ ವೈರಲ್ ಆಗಿತ್ತು. ‘ನಮ್ಮ ಸನಾತನ ಧರ್ಮ ಮತ್ತು ಸಂತರ ಬಗ್ಗೆ ಭವಿಷ್ಯದಲ್ಲಿ ಯಾರಾದರೂ ಅವಮಾನ ಮಾಡಿದರೆ ಪರಿಣಾಮ ಎದುರಿಸಲು ಸಿದ್ಧವಾಗಿರಿ. ನಮ್ಮ ಧರ್ಮವನ್ನು ರಕ್ಷಿಸಲು ನಾವು ಯಾವುದೇ ಹಂತಕ್ಕೆ ಹೋಗಲು ಸಿದ್ಧವಾಗಿದ್ದೇವೆ’ ಎಂದು ಪೋಸ್ಟ್ ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:11 pm, Wed, 17 September 25