
‘ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಫೈಲ್ಸ್’ ಸಾಲಿಗೆ ಸೇರುವ ‘ಉದಯಪುರ ಫೈಲ್ಸ್’ (Udaipur Files) ಸಿನಿಮಾ ಇಂದು (ಜುಲೈ 11) ಬಿಡುಗಡೆ ಆಗಬೇಕಿತ್ತು. ಆದರೆ ದೆಹಲಿ ಹೈಕೋರ್ಟ್ ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸುಪ್ರೀಂಕೋರ್ಟ್ನಲ್ಲಿಯೂ ಸಹ ಈ ಸಿನಿಮಾದ ಬಿಡುಗಡೆಗೆ ತಡೆ ನೀಡುವಂತೆ ಅರ್ಜಿ ಹಾಕಲಾಗಿತ್ತು, ಆದರೆ ಅರ್ಜಿಯ ತ್ವರಿತ ವಿಚಾರಣೆಗೆ ಒಲ್ಲೆ ಎಂದಿದ್ದ ಸುಪ್ರೀಂಕೋರ್ಟ್, ‘ಸಿನಿಮಾ ಬಿಡುಗಡೆ ಆಗಲಿ’ ಎಂದಿತ್ತು. ಆದರೆ ದೆಹಲಿ ಹೈಕೋರ್ಟ್, ಸಿನಿಮಾದ ಬಿಡುಗಡೆ ಮೇಲೆ ತಡೆ ನೀಡಿದೆ.
2022 ರಲ್ಲಿ ನಡೆದ ಟೈಲರ್ ಕಲ್ಹಯ್ಯ ಲಾಲ್ ಹತ್ಯೆ ಪ್ರಕರಣ ಕುರಿತಾದ ಕತೆಯನ್ನು ‘ಉದಯಪುರ ಫೈಲ್ಸ್’ ಸಿನಿಮಾ ಒಳಗೊಂಡಿದೆ. ಗುರುವಾರ ಸುಮಾರು ಐದು ಗಂಟೆಗಳ ಕಾಲ ದೆಹಲಿ ಹೈಕೋರ್ಟ್ನಲ್ಲಿ ಈ ಕುರಿತು ವಾದ-ಪ್ರತಿವಾದಗಳು ನಡೆದಿದ್ದು, ಅಂತಿಮವಾಗಿ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಅವರು ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು, ಈ ಕುರಿತು ಕೇಂದ್ರ ನಿರ್ಧಾರ ತೆಗೆದುಕೊಳ್ಳಲಿ ಎಂದಿದೆ.
ಸಿನಿಮಾದ ನಿರ್ಮಾಪಕರು ಸಿಬಿಎಫ್ಸಿ, ಕತ್ತರಿಸಿದ್ದ ದೃಶ್ಯಗಳನ್ನೂ ಸೇರಿಸಿ, ಯಾವುದೇ ಪ್ರಮಾಣ ಪತ್ರ ಇಲ್ಲದೆಯೇ ಸಿನಿಮಾದ ಟ್ರೈಲರ್ ಹಾಗೂ ಟೀಸರ್ ಅನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದನ್ನು ಖಂಡಿಸಿರುವ ನ್ಯಾಯಾಲಯ, ಇದು ಸಿನಿಮಾಟೊಗ್ರಫಿ ಕಾಯ್ದೆಯ ಉಲ್ಲಂಘನೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:ಉದಯಪುರ ಫೈಲ್ಸ್: ಸಿನಿಮಾ ನಿಷೇಧಕ್ಕೆ ಕೋರ್ಟ್ ನಿರಾಕರಣೆ
ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಲಿಲ್ ಸಿಬಲ್, ‘ಸಿನಿಮಾದ ಟ್ರೈಲರ್ನಲ್ಲಿ, ಮುಸ್ಲಿಂ ವ್ಯಕ್ತಿಗಳು ಮಾಂಸದ ತುಂಡನ್ನು ದೇವಾಲಯಕ್ಕೆ ಹಾಕುವ ದೃಶ್ಯ ತೋರಿಸಲಾಗಿದೆ. ಬಳಿಕ ಮುಸ್ಲಿಂ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸುವ ದೃಶ್ಯ ತೋರಿಸಲಾಗಿದೆ. ಇದೆಲ್ಲವೂ ಕನ್ಹಯ್ಯ ಲಾಲ್ ಕೊಲೆ ಕೇಸಿಗೆ ಹೇಗೆ ಸಂಬಂಧ ಹೊಂದಿದೆ? ಒಂದು ಸಮುದಾಯವನ್ನು ‘ಆ ಜನ’ ಎಂದು ಸಿನಿಮಾನಲ್ಲಿ ಕರೆಯಲಾಗಿದೆ. ಬೇಕಿದ್ದರೆ ನೀವೇ ಸಿನಿಮಾ ನೋಡಿ ನಿರ್ಣಯ ತೆಗೆದುಕೊಳ್ಳಿ, ಈ ಸಿನಿಮಾ ಅತ್ಯಂತ ದ್ವೇಷ ಕಾರಕ ಅಂಶಗಳನ್ನು ಒಳಗೊಂಡಿದೆ. ಇದು ಖಂಡಿತ ದೇಶಕ್ಕೆ ಒಳ್ಳೆಯದಲ್ಲ ಹಾಗೂ ಇದು ಖಂಡಿತ ಕಲೆ ಅಂತೂ ಅಲ್ಲ’ ಎಂದಿದ್ದಾರೆ.
ನಿರ್ಮಾಪಕರ ಪರ ವಾದಿಸಿದ ವಕೀಲರು, ‘ಸಿನಿಮಾಕ್ಕೆ ಈಗಾಗಲೇ 55 ಕಟ್ಗಳನ್ನು ಸೂಚಿಸಲಾಗಿದೆ. ಹಲವು ಮ್ಯೂಟ್ಗಳನ್ನು ಸಹ ಮಾಡಲಾಗಿದೆ. ಅಲ್ಲದೆ, ಸಿನಿಮಾ ಕೇವಲ ಕನ್ಹಯ್ಯ ಲಾಲ್ ಕೊಲೆಗೆ ಮಾತ್ರವೇ ಸಂಬಂಧಿಸಿದೆ. ಆದರೆ ಸಿನಿಮಾದ ಕೆಲವು ದೃಶ್ಯಗಳನ್ನು ಇರಿಸಿಕೊಂಡು ವಾದ ಮಾಡಲಾಗುತ್ತಿದೆ, ಸಿನಿಮಾ ಬಿಡುಗಡೆಗೆ ತಡೆ ನೀಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ’ ಎಂದಿದ್ದಾರೆ.
ಸಿನಿಮಾಕ್ಕೆ ತಡೆ ನೀಡಿದ ಬಳಿಕ ಮಾತನಾಡಿರುವ ಕನ್ಹಯ್ಯ ಲಾಲ್ ಪುತ್ರ, ತಂದೆಯ ಕೊಲೆಯಾಗಿ ಮೂರು ವರ್ಷಗಳಾಗಿವೆ ವಿಡಿಯೋ ಸಾಕ್ಷಿಗಳು ಲಭ್ಯವಿವೆ ಆದರೆ ಈ ವರೆಗೆ ಅವರಿಗೆ ಶಿಕ್ಷೆ ಆಗಿಲ್ಲ, ಅದೇ ತಂದೆಯ ಕೊಲೆಯ ಬಗ್ಗೆ ಸಿನಿಮಾ ಮಾಡಿ ಸತ್ಯವನ್ನು ಜಗತ್ತಿಗೆ ತೋರಿಸಲು ಹೊರಟರೆ ಬಿಡುಗಡೆಗೆ ಮುಂಚೆಯೇ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ