ಭಾರತ-ಪಾಕ್ ಪಂದ್ಯದ ವೇಳೆ ಚಿನ್ನದ ಫೋನ್ ಕಳೆದುಕೊಂಡ ಊರ್ವಶಿ: ಟ್ರೋಲ್ ಮಾಡಿದ ನೆಟ್ಟಿಗರು
Urvashi Rautela: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಪಾಕಿಸ್ತಾನ ಮ್ಯಾಚ್ ನೋಡಲು ಹೋಗಿದ್ದ ನಟಿ ಊರ್ವಶಿ ರೌಟೆಲ್ಲಾ ತಮ್ಮ ಚಿನ್ನದ ಐಫೋನ್ ಅನ್ನು ಕಳೆದುಕೊಂಡಿದ್ದಾರಂತೆ.
ನಿನ್ನೆ (ಅಕ್ಟೋಬರ್ 14) ಅಹಮದಾಬಾದ್ನ ನರೇಂದ್ರ ಮೋದಿ (Narendra Modi) ಸ್ಟೇಡಿಯಂ ನಲ್ಲಿ ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಗೃಹ ಮಂತ್ರಿ ಅಮಿತ್ ಶಾ ಅವರಿಂದ ಹಿಡಿದು ಹಲವು ಬಾಲಿವುಡ್ (Bollywood) ತಾರೆಯರು, ಸ್ಯಾಂಡಲ್ವುಡ್ ತಾರೆ ರಮ್ಯಾ ಸೇರಿದಂತೆ ಇನ್ನೂ ಹಲವರು ಭಾರತ-ಪಾಕಿಸ್ತಾನ ಪಂದ್ಯವನ್ನು ಕಣ್ ತುಂಬಿಕೊಂಡರು. ಬಾಲಿವುಡ್ನ ಜನಪ್ರಿಯ ನಟಿ ಊರ್ವಶಿ ರೌಟೆಲ್ಲಾ ಸಹ ಪಂದ್ಯ ನೋಡಲು ಬಂದಿದ್ದರು. ಆದರೆ ಪಂದ್ಯ ನೋಡುವಾಗ ಅವರು ತಮ್ಮ ಅತ್ಯಂತ ದುಬಾರಿ ಐಫೋನ್ ಅನ್ನು ಕಳೆದುಕೊಂಡಿದ್ದಾರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
”ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಅನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ” ಎಂದು ಊರ್ವಶಿ ರೌಟೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರಾ ಊರ್ವಶಿ ರೌಟೆಲ್ಲಾ?
ಆದರೆ ಊರ್ವಶಿ ರೌಟೆಲ್ಲಾರ ಈ ಪೋಸ್ಟ್ ಅನ್ನು ಹಲವರು ಟ್ರೋಲ್ ಮಾಡಿದ್ದಾರೆ. ಊರ್ವಶಿ ರೌಟೆಲ್ಲಾ ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ. ಇದೊಂದು ಪ್ರಚಾರ ಪಡೆಯುವ ತಂತ್ರ ಎಂದು ಕೆಲವರು ಆರೋಪ ಮಾಡಿದ್ದಾರೆ. ಇನ್ನು ಕೆಲವರು ಚಿನ್ನದ ಫೋನು ಸಿಕ್ಕಿದವನು ಅದೃಷ್ಟ ಮಾಡಿದ್ದಾನೆ ಎಂತಲೂ, ಚಿನ್ನದ ಫೋನು ಸಿಕ್ಕವರು ಯಾರಾದರೂ ವಾಪಸ್ ಕೊಡುತ್ತಾರೆಯೇ ಎಂದು ಕುಹುಕವಾಡಿದ್ದಾರೆ.
View this post on Instagram
ಊರ್ವಶಿ ರೌಟೆಲ್ಲಾ, ಟ್ರೋಲಿಗರ ನೆಚ್ಚಿನ ನಟಿ. ಕ್ರಿಕೆಟಿಗ ರಿಷಬ್ ಪಂಥ್ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ಊರ್ವಶಿ ಸಖತ್ ಟ್ರೋಲ್ ಆಗಿದ್ದರು. ರಿಷಬ್ ಆಡುವ ಪಂದ್ಯಗಳಿಗೆ ಹೋಗಿ ರಿಷಬ್ಗೆ ಇರುಸು-ಮುರುಸು ಉಂಟು ಮಾಡಿದ್ದರು ಸಹ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ತಾನು ಪ್ರತಿ ಸಿನಿಮಾಕ್ಕೆ ನೂರು ಕೋಟಿ ಸಂಭಾವನೆ ಪಡೆಯುವುದಾಗಿ ಹೇಳಿಕೊಂಡಿದ್ದರು. ಊರ್ವಶಿಯ ಈ ಹೇಳಿಕೆ ಸಹ ಸಖತ್ ಟ್ರೋಲ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ