
ಸಿನಿಪ್ರಿಯರು ದೇಶಭಕ್ತಿ ಸಿನಿಮಾಗಳನ್ನು ಖಂಡಿತಾ ಇಷ್ಟಪಡುತ್ತಾರೆ. ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆದ ‘ಧುರಂಧರ್’ ಚಿತ್ರವೇ ಅದಕ್ಕೆ ಸಾಕ್ಷಿ. ಈಗ ‘ಬಾರ್ಡರ್ 2’ (Border 2) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿತು. ಎರಡನೇ ದಿನ ಕೂಡ ಒಳ್ಳೆಯ ಕಲೆಕ್ಷನ್ (Box Office Collection) ಆಗಿದೆ. ಮೂರೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ.
ಮೊದಲ ದಿನವಾದ ಜನವರಿ 23ರಂದು ‘ಬಾರ್ಡರ್ 2’ ಸಿನಿಮಾ 30 ಕೋಟಿ ರೂಪಾಯಿ ಗಳಿಸಿತು. 2ನೇ ದಿನ ಅಂದಾಜು 35 ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ಮಾಡಿದೆ. ಗಳಿಕೆಯಲ್ಲಿ ಕೊಂಚ ಏರಿಕೆ ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಭಾನುವಾರ (ಜನವರಿ 25) ಕೂಡ ಇದೇ ಪ್ರಮಾಣದಲ್ಲಿ ಕಲೆಕ್ಷನ್ ಆದರೆ 3 ದಿನದಲ್ಲಿ ಈ ಸಿನಿಮಾ ಸೆಂಚುರಿ ಬಾರಿಸಲಿದೆ.
1997ರಲ್ಲಿ ‘ಬಾರ್ಡರ್’ ಚಿತ್ರ ರಿಲೀಸ್ ಆಗಿತ್ತು. ಆ ಸಿನಿಮಾದ ಸೀಕ್ವೆಲ್ ಆಗಿ ಈಗ ‘ಬಾರ್ಡರ್ 2’ ತೆರೆಕಂಡಿದೆ. ಅನುರಾಗ್ ಸಿಂಗ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೊಸಾಂಜ್, ಅಹಾನ್ ಶೆಟ್ಟಿ, ಸೋನಂ ಭಾಜ್ವ, ಮೋನಾ ಸಿಂಗ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
1971ರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ಆಧರಿಸಿ ‘ಬಾರ್ಡರ್ 2’ ಸಿನಿಮಾ ಮಾಡಲಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಿರುವುದು ಪ್ಲಸ್ ಪಾಯಿಂಟ್. ಈ ಬಾರಿ ವೀಕೆಂಡ್ ಜೊತೆಗೆ ಗಣರಾಜ್ಯೋತ್ಸವ ಬಂದಿದೆ. ಅಂದರೆ, ಶನಿವಾರ, ಭಾನುವಾರ ಹಾಗೂ ಸೋಮವಾರ ಸತತ ರಜೆ ಸಿಕ್ಕಿದೆ. ಇದರಿಂದ ಚಿತ್ರತಂಡಕ್ಕೆ ಅನುಕೂಲ ಆಗುತ್ತದೆ.
ಇದನ್ನೂ ಓದಿ: Border 2 Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ‘ಬಾರ್ಡರ್ 2’ ಸಿನಿಮಾ
ಈ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆ ಆದಾಗ ವರುಣ್ ಧವನ್ ಅವರನ್ನು ಟ್ರೋಲ್ ಮಾಡಲಾಗಿತ್ತು. ಆದರೆ ವರುಣ್ ಧವನ್ ಅವರ ವೃತ್ತಿ ಜೀವನದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಬಾರ್ಡರ್ 2’ ಪಾತ್ರವಾಗಿದೆ. ಈ ಸಿನಿಮಾದ ಟೋಟಲ್ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.