ವರುಣ್ ಧವನ್ (Varun Dhawan) ಹಾಗೂ ಜಾನ್ವಿ ಕಪೂರ್ ನಟನೆಯ ‘ಬವಾಲ್’ ಸಿನಿಮಾ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಚಿತ್ರ ನೇರವಾಗಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ನಡೆದ ಹತ್ಯಾಕಾಂಡದ ಉಲ್ಲೇಖವೂ ಈ ಚಿತ್ರದಲ್ಲಿದೆ. ಆದರೆ, ಇದನ್ನು ಸರಿಯಾಗಿ ಬಳಕೆ ಮಾಡಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಿದೆ. ಇದಕ್ಕೆ ವರುಣ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ. ‘ಆಪನ್ಹೈಮರ್’ ಸಿನಿಮಾದ (Oppenheimer) ದೃಶ್ಯ ಉಲ್ಲೇಖಿಸಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಎರಡನೇ ಮಹಾಯುದ್ಧದ ಸಂದರ್ಭದ ಸಾಕಷ್ಟು ಯಹೂದಿಗಳನ್ನು ಹಿಟ್ಲರ್ ಕೊಲ್ಲಿಸಿದ್ದ. ಮಕ್ಕಳು, ಹೆಂಗಸರು, ವೃದ್ಧರನ್ನು ಬೆತ್ತಲೆಗೊಳಿಸಿ ಗ್ಯಾಸ್ ಚೇಂಬರ್ನಲ್ಲಿ ಕೂಡಿಹಾಕಿ, ಅದರೊಳಗೆ ವಿಷಾನಿಲವನ್ನು ಹರಿಸಿ ಹತ್ಯೆ ಮಾಡಿದ್ದ. ಈ ಹತ್ಯಾಕಾಂಡದ ಕ್ರೂರತೆ ಬಗ್ಗೆ ಅನೇಕ ಸಿನಿಮಾಗಳು ಬಂದು ಹೋಗಿವೆ. ‘ಬವಾಲ್’ ಚಿತ್ರದಲ್ಲೂ ಈ ಬಗ್ಗೆ ಉಲ್ಲೇಖ ಇದೆ. ಆದರೆ, ಅನೇಕರು ಇದನ್ನು ಟೀಕೆ ಮಾಡಿದ್ದರು. ಸೆನ್ಸಿಬಲ್ ಆಗಿ ಅದನ್ನು ಬಳಸಿಲ್ಲ ಎಂದು ಕೆಲವರು ಕಿಡಿಕಾರಿದ್ದರು. ಈ ಬಗ್ಗೆ ವರುಣ್ ಧವನ್ ಮಾತನಾಡಿದ್ದಾರೆ.
‘ನಮ್ಮ ಸಿನಿಮಾದಲ್ಲಿ ಬರುವ ದೃಶ್ಯದ ಬಗ್ಗೆ ಕೆಲವರು ಟ್ರಿಗರ್ ಆಗಿದ್ದಾರೆ. ಆದರೆ, ಇಂಗ್ಲಿಷ್ ಸಿನಿಮಾಗಳನ್ನು ನೋಡುವಾಗ ಈ ಸೆನ್ಸಿಟಿವಿಟಿ ಎಲ್ಲಿ ಹೋಗಿರುತ್ತದೆ? ಅವರಿಗೆ ಎಲ್ಲವನ್ನೂ ಮಾಡುವ ಹಕ್ಕಿದೆ. ಆದರೆ ನಿಮಗೆ ಅದು ಸರಿ ಎನಿಸುತ್ತದೆ’ ಎಂದಿದ್ದಾರೆ ವರುಣ್ ಧವನ್.
‘ಇತ್ತೀಚೆಗೆ ರಿಲೀಸ್ ಒಂದು ಅದ್ಭುತ ಸಿನಿಮಾದ ಸಣ್ಣ ದೃಶ್ಯ ನೋಡಿ ಅನೇಕರು ಟ್ರಿಗರ್ ಆದರು. ನಮ್ಮ ದೇಶ ಹಾಗೂ ನಮ್ಮ ಸಂಸ್ಕೃತಿಗೆ ಆ ವಿಚಾರ ತುಂಬಾನೇ ಮುಖ್ಯವಾದುದು. ಆದರೆ, ಅದು ಅನೇಕರಿಗೆ ಸರಿ ಎನಿಸಿದೆ. ಅವರು ಹೆಚ್ಚು ಸೆನ್ಸಿಬಲ್ ಆಗಿರಬೇಕು ಎಂದು ಅನಿಸುತ್ತಿಲ್ಲವೇ? ನಿಮ್ಮ ಟೀಕೆ ಎಲ್ಲಿ ಹೋಯಿತು’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.
ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾವನ್ನು ಅನೇಕರು ಟೀಕೆ ಮಾಡಿದ್ದರು. ಈ ಚಿತ್ರದಲ್ಲಿ ಯುವತಿಯೊಬ್ಬಳು ಲೈಂಗಿಕ ಕ್ರಿಯೆ ನಡೆಸುವ ವೇಳೆ ಭಗವದ್ಗೀತೆ ಪುಸ್ತಕ ಹಿಡಿದುಕೊಳ್ಳುತ್ತಾಳೆ. ಅನೇಕರು ಇದನ್ನು ಟೀಕೆ ಮಾಡಿದ್ದರು. ಈ ದೃಶ್ಯ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Wed, 26 July 23