ಕೊರೊನಾ ವೈರಸ್ ಕಾರಣದಿಂದ ಜನರು ಎದುರಿಸುತ್ತಿರುವ ಕಷ್ಟ ಒಂದೆರಡಲ್ಲ. ಎಲ್ಲರ ಬದುಕಿನಲ್ಲಿ ಅನಿಶ್ಚಿತತೆ ಆವರಿಸಿದೆ. ಮುಂದೇನು ಎಂಬ ಗೊಂದಲದಲ್ಲೇ ಕಾಲ ಕಳೆಯುವಂತಾಗಿದೆ. ಕೊವಿಡ್ (Covid 19) ಸೋಂಕು ತಗುಲಿದರೆ ಆತ್ಮೀಯರಿಂದಲೂ ದೂರ ಇರಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ. ಪ್ರೀತಿಪಾತ್ರರ ಅಂತಿಮ ಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬಾಲಿವುಡ್ನ (Bollywood) ಖ್ಯಾತ ಗಾಯಕ ವಿಶಾಲ್ ದದ್ಲಾನಿ (Vishal Dadlani) ಅವರಿಗೆ ಅಕ್ಷರಶಃ ಇಂಥ ಸ್ಥಿತಿ ಬಂದಿದೆ. ಅವರ ತಂದೆ ಮೃತರಾಗಿದ್ದಾರೆ. ಆದರೆ ಕೊನೇ ಗಳಿಗೆಯಲ್ಲಿ ಅಪ್ಪನ ಜೊತೆ ಇರಲು ವಿಶಾಲ್ ದದ್ಲಾನಿ ಅವರಿಗೆ ಸಾಧ್ಯವಾಗಿಲ್ಲ. ಕಳೆದ ಕೆಲವು ದಿನಗಳಿಂದ ಕೊವಿಡ್ ಪಾಸಿಟಿವ್ (Corona Positive) ಆಗಿರುವ ಅವರು ತಮ್ಮವರಿಂದಲೇ ದೂರ ಉಳಿದುಕೊಂಡು ನೋವು ಅನುಭವಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ನೂರಾರು ಗೀತೆಗಳನ್ನು ಹಾಡಿ ಫೇಮಸ್ ಆಗಿದ್ದಾರೆ ವಿಶಾಲ್ ದದ್ಲಾನಿ. ಶುಕ್ರವಾರ (ಜ.7) ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ಕಾರಣದಿಂದ ಅವರು ಎಲ್ಲರಿಂದ ಐಸೋಲೇಟ್ ಆಗಿದ್ದರು. ಕಳೆದ ಕೆಲವು ದಿನಗಳಿಂದ ಅವರ ತಂದೆ ಮೋತಿ ದದ್ಲಾನಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಮೋತಿ ದದ್ಲಾನಿ ನಿಧನರಾಗಿದ್ದಾರೆ. ಅಪ್ಪನ ಕೊನೇ ಕ್ಷಣಗಳಲ್ಲಿ ಜೊತೆಗಿರಲು ವಿಶಾಲ್ಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ಕಳೆದ ರಾತ್ರಿ ಅತ್ಯುತ್ತಮ ವ್ಯಕ್ತಿಯನ್ನು ಕಳೆದುಕೊಂಡೆ. ಬದುಕಿನಲ್ಲಿ ಇವರಿಗಿಂತ ಒಳ್ಳೆಯ ತಂದೆಯನ್ನು, ಒಳ್ಳೆಯ ಗುರುವನ್ನು ನಾನು ಬಯಸಲು ಸಾಧ್ಯವಿಲ್ಲ. ನನ್ನಲ್ಲಿ ಇರುವ ಎಲ್ಲ ಒಳ್ಳೆಯತನಗಳು ಅವರ ಪ್ರತಿಬಿಂಬವೇ ಆಗಿದೆ. ಕಳೆದ 3-4 ದಿನಗಳಿಂದ ಅವರು ಐಸಿಯುನಲ್ಲಿ ಇದ್ದರು. ಕೊವಿಡ್ ಕಾರಣದಿಂದ ನಾನು ನಿನ್ನೆಯಿಂದ ಅವರ ಬಳಿ ಹೋಗಲು ಆಗಿರಲಿಲ್ಲ. ನನ್ನ ತಾಯಿಯ ಅತಿ ಕಷ್ಟದ ಸಂದರ್ಭದಲ್ಲಿ ನಾನು ಅವರೊಂದಿಗೆ ಇರಲಾಗಲಿಲ್ಲ. ಇದು ನ್ಯಾಯವಲ್ಲ. ಅಪ್ಪ ಇಲ್ಲದೇ ಈ ಪ್ರಪಂಚದಲ್ಲಿ ಹೇಗೆ ಬದುಕಬೇಕೋ ತಿಳಿದಿಲ್ಲ. ನಾನು ಸಂಪೂರ್ಣವಾಗಿ ಕಳೆದುಹೋಗಿದ್ದೇನೆ’ ಎಂದು ವಿಶಾಲ್ ದದ್ಲಾನಿ ಪೋಸ್ಟ್ ಮಾಡಿದ್ದಾರೆ.
ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ ಕಂಡು ಎಲ್ಲರೂ ಮರುಕು ವ್ಯಕ್ತಪಡಿಸಿದ್ದಾರೆ. ಅಗಲಿದ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಮೆಂಟ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್ನ ಅನೇಕರಿಗೆ ಕೊವಿಡ್ ಪಾಸಿಟಿವ್ ಆಗಿದೆ.
ದೇಶಾದ್ಯಂತ ಕೊರೊನಾ ಮೂರನೇ ಅಲೆ ಶುರುವಾಗಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅನೇಕ ಕಡೆಗಳಲ್ಲಿ ಕಠಿಣ ನಿಯಮಗಳನ್ನು ಹೇರಲಾಗಿದೆ. ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಸಹ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ:
ಕೊರೊನಾ ನೆಗೆಟಿವ್ ಆಗುತ್ತಿದ್ದಂತೆಯೇ ಪಾರ್ಟಿ ಶುರು ಮಾಡಿಕೊಂಡ ಕರೀನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್
Published On - 1:17 pm, Sat, 8 January 22