ವಿವೇಕ್ ಅಗ್ನಿಹೋತ್ರಿ ಅವರಿಗೆ ಇಂದು (ನವೆಂಬರ್ 10) ಜನ್ಮದಿನದ ಸಂಭ್ರಮ. ಒಂದು ವರ್ಗದ ಜನರು ಅವರನ್ನು ಇಷ್ಟಪಡುತ್ತಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಬರುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ರಿಲೀಸ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಜನಪ್ರಿಯತೆ ಹೆಚ್ಚಿತು. ಅವರ ಅಭಿಮಾನಿ ಬಳಗ ಮೊದಲಿಗಿಂತ ಹಿರಿದಾಗಿದೆ. ಅವರು ಇಷ್ಟು ದೊಡ್ಡ ಜನಪ್ರಿಯತೆ ಪಡೆಯಲು ಹಲವು ವರ್ಷ ತೆಗೆದುಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ವಿವೇಕ್ ಅಗ್ನಿಹೋತ್ರಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2005ರಲ್ಲಿ. ‘ಚಾಕೋಲೇಟ್’ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ. ಇದು ಇಂಗ್ಲಿಷ್ನ ‘ದಿ ಯೂಷ್ಯುವಲ್ ಸಸ್ಪೆಕ್ಟ್’ ಚಿತ್ರದ ರಿಮೇಕ್. ಅನಿಲ್ ಕಪೂರ್, ಸುನೀಲ್ ಶೆಟ್ಟಿ, ಇರ್ಫಾನ್ ಖಾನ್, ಇಮ್ರಾನ್ ಹಷ್ಮಿ ಸೇರಿ ಅನೇಕರು ಈ ಚಿತ್ರದಲ್ಲಿ ನಟಿಸಿದ್ದರು. ಇಷ್ಟೊಂದು ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿತು.
‘ಚಾಕೋಲೇಟ್’ ಸಿನಿಮಾ ರಿಲೀಸ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರು ‘ಧನ್ ಧನಾ ಧನ್ ಗೋಲ್’, ‘ಹೇಟ್ ಸ್ಟೋರಿ’, ‘ಜಿದ್’ ಸೇರಿ ಹಲವು ಸಿನಿಮಾ ನಿರ್ದೇಶನ ಮಾಡಿದರು. 2012ರಲ್ಲಿ ಬಂದ ‘ಹೇಟ್ ಸ್ಟೋರಿ’ ಸಿನಿಮಾ ಸಖತ್ ಬೋಲ್ಡ್ ಆಗಿದೆ ಎಂದು ಅನೇಕರು ಅವರನ್ನು ಟೀಕಿಸಿದರು. ಈ ಟೀಕೆಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.
‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ಗೂ ಮೊದಲು ‘ದಿ ತಾಶ್ಕೆಂಟ್ ಫೈಲ್ಸ್- ಹೂ ಕಿಲ್ಡ್ ಶಾಸ್ತ್ರಿ’ ಸಿನಿಮಾ ನಿರ್ದೇಶನ ಮಾಡಿದರು. ಈ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿತು. 2022ರಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಭರ್ಜರಿ ಜನಪ್ರಿಯತೆ ಪಡೆಯಲು ಅವರು ಬರೋಬ್ಬರಿ 17 ವರ್ಷ ಪಡೆದರು.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್ ಸೇರಿ ಅನೇಕರು ನಟಿಸಿದ್ದರು. 90ರ ದಶಕದಲ್ಲಿ ಕಾಶ್ಮಿರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರ ರಿಲೀಸ್ ಆದ ವಾರ ಸಾಧಾರಣ ಗಳಿಕೆ ಮಾಡಿತ್ತು. ಆದರೆ, ದಿನ ಕಳೆದಂತೆ ಸಿನಿಮಾಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಯಿತು. ಈ ಚಿತ್ರ ಭಾರತದಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಗಳಕೆ ಮಾಡಿತು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರದಲ್ಲಿ ನಾನಾ ಪಾಟೇಕರ್, ಪಲ್ಲವಿ ಜೋಶಿ, ಸಪ್ತಮಿ ಗೌಡ ಮೊದಲಾದವರು ನಟಿಸಿದ್ದಾರೆ. 15 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಗಳಿಕೆ ಮಾಡಿದ್ದು ಕೇವಲ 9 ಕೋಟಿ ರೂಪಾಯಿ. ಇದರಿಂದ ನಿರ್ಮಾಪಕಿ ಪಲ್ಲವಿ ಜೋಶಿ ನಷ್ಟ ಅನುಭವಿಸಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಭಾರತ ವ್ಯಾಕ್ಸಿನ್ ತಯಾರಿಸಿದ ಕಥೆಯನ್ನು ಇದು ಒಳಗೊಂಡಿದೆ.
‘ದಿ ದೆಲ್ಲಿ ಫೈಲ್ಸ್’ ಸಿನಿಮಾನ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಇಂದು ಹೊಸ ಅಪ್ಡೇಟ್ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈ ಸಿನಿಮಾ ಕೂಡ ನೈಜ ಘಟನೆಗಳನ್ನು ಆಧರಿಸಿದೆ. ‘ದಿ ಕಾಶ್ಮೀರ್ ಫೈಲ್ಸ್ 2’ ಸಿನಿಮಾ ಮಾಡುವ ಆಲೋಚಯಲ್ಲಿಯೂ ಅವರಿದ್ದಾರೆ.
ಇದನ್ನೂ ಓದಿ: ‘ಶಾರುಖ್ ಇದಕ್ಕಿಂತಲೂ ಉತ್ತಮವಾಗಿ ನಟಿಸುವ ತಾಕತ್ತನ್ನು ಹೊಂದಿದ್ದಾರೆ’: ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ಅವರು ವಿವಾದಗಳ ಮೂಲಕವೂ ಆಗಾಗ ಸುದ್ದಿ ಆಗುತ್ತಾರೆ. ಅವರು ಬಿಜೆಪಿ ಪರ ಸಿನಿಮಾ ಮಾಡುತ್ತಾರೆ ಎನ್ನುವ ಆರೋಪ ಇದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರೊಪೋಗಾಂಡ ಸಿನಿಮಾ ಎಂದು ಅನೇಕರು ಕರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:05 am, Fri, 10 November 23