ಸಿನಿಮಾ ರಂಗದಲ್ಲಿ ಕೆಲವು ಲೆಕ್ಕಾಚಾರಗಳನ್ನು ಗುಟ್ಟಾಗಿ ಇಡಲಾಗುತ್ತಿದೆ. ತಮ್ಮ ಸಿನಿಮಾದ ಬಜೆಟ್ ಎಷ್ಟು ಎಂದು ಕೆಲವು ನಿರ್ಮಾಪಕರು ಬಿಟ್ಟುಕೊಡುವುದಿಲ್ಲ. ಆದರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಆ ರೀತಿ ಅಲ್ಲ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಅವರು ಆಗಾಗ ಉತ್ತರ ನೀಡುತ್ತಾರೆ. ಪ್ರಸ್ತುತ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದ ಕೆಲಸಗಳಲ್ಲಿ ವಿವೇಕ್ ಅಗ್ನಿಹೋತ್ರಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಬಜೆಟ್ ಎಷ್ಟು ಎಂಬುದನ್ನು ಕೂಡ ಅವರು ಬಹಿರಂಗ ಪಡಿಸಿದ್ದಾರೆ. ಅಚ್ಚರಿ ಎಂದರೆ, ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾಗಿಂತಲೂ ಕಡಿಮೆ ಹಣದಲ್ಲಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸಿದ್ಧವಾಗುತ್ತಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 12 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಆಗಿತ್ತು. ಆ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಆಯಿತು. ಆ ಚಿತ್ರದಿಂದ ವಿವೇಕ್ ಅಗ್ನಿಹೋತ್ರಿ ಅವರ ಜನಪ್ರಿಯತೆ ಹೆಚ್ಚಿತು. ಹಾಗಿದ್ದರೂ ಕೂಡ ಅವರು ತಮ್ಮ ಮುಂದಿನ ಸಿನಿಮಾಗೆ ದುಂದು ವೆಚ್ಚ ಮಾಡುತ್ತಿಲ್ಲ. ಕೇವಲ 10 ಕೋಟಿ ರೂಪಾಯಿ ಬಜೆಟ್ನಲ್ಲಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Jawan: ‘ತಾಕತ್ತಿದ್ದರೆ ಜವಾನ್ ಎದುರು ನಿಮ್ಮ ಸಿನಿಮಾ ರಿಲೀಸ್ ಮಾಡಿ’: ವಿವೇಕ್ ಅಗ್ನಿಹೋತ್ರಿಗೆ ನೇರ ಸವಾಲು
ಸಾಮಾನ್ಯವಾಗಿ ಒಂದು ಸಿನಿಮಾ ಗೆದ್ದು, ಅದರ ಸೀಕ್ವೆಲ್ ನಿರ್ಮಾಣ ಆಗುವಾಗ ಡಬಲ್ ಬಜೆಟ್ ಹಾಕಲಾಗುತ್ತದೆ. ಆದರೆ ವಿವೇಕ್ ಅಗ್ನಿಹೋತ್ರಿ ಅವರು ಆ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಜೆಟ್ನಲ್ಲಿ ನಿರ್ಮಾಣ ಮಾಡಬೇಕು ಎಂಬುದು ಅವರ ಗುರಿ. ಕಂಟೆಂಟ್ ಚೆನ್ನಾಗಿ ಇದ್ದರೆ ಖಂಡಿತವಾಗಿಯೂ ಸಿನಿಮಾಗೆ ಜನರ ಬೆಂಬಲ ಸಿಗುತ್ತದೆ. ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡಿದರೆ ಬಾಕ್ಸ್ ಆಫೀಸ್ನ ಟೆನ್ಷನ್ ಇರುವುದಿಲ್ಲ. ಅದೇ ಸೂತ್ರವನ್ನು ವಿವೇಕ್ ಅಗ್ನಿಹೋತ್ರಿ ಅವರು ಫಾಲೋ ಮಾಡುತ್ತಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ರೀತಿಯೇ ನೈಜ ಘಟನೆಯನ್ನು ಆಧರಿಸಿ ‘ದಿ ವ್ಯಾಕ್ಸಿನ್ ವಾರ್’ ಚಿತ್ರ ಮೂಡಿಬರುತ್ತಿದೆ. ಕೊರೊನಾ ಹರಡಿದ್ದ ಸಂದರ್ಭದಲ್ಲಿ ಭಾರತವು ಆ ಮಹಾಮಾರಿಯ ವಿರುದ್ಧ ಹೋರಾಡಿದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಈ ಚಿತ್ರದಲ್ಲಿ ಕನ್ನಡದ ನಟಿ ಸಪ್ತಮಿ ಗೌಡ ಅವರು ನಟಿಸುತ್ತಿದ್ದಾರೆ ಎಂಬುದು ವಿಶೇಷ. ಈ ವರ್ಷ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಈ ಚಿತ್ರ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.