ಇತ್ತೀಚೆಗೆ ಶಾರುಖ್ ಖಾನ್ (Shah Rukh Khan) ಅವರಿಗೆ ಕೊಲೆ ಬೆದರಿಕೆ ಬಂತು. ಈ ಕಾರಣಕ್ಕೆ ಅವರಿಗೆ Y+ ಕೆಟಗರಿ ಭದ್ರತೆಯನ್ನು ಸರ್ಕಾರ ಒದಗಿಸಿದೆ. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್, ಕಂಗನಾ ರಣಾವತ್ ಸೇರಿ ಅನೇಕರಿಗೆ ಉನ್ನತ ಶ್ರೇಣಿಯ ಭದ್ರತೆ ಒದಗಿಸಲಾಗುತ್ತಿದೆ. ಹಾಗಾದರೆ ಈ ರೀತಿಯ ಭದ್ರತೆಯನ್ನು ಯಾರು ಯಾರಿಗೆ ನೀಡಲಾಗಿದೆ? ಈ ಭದ್ರತೆಯ ಅರ್ಥವೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಒಟ್ಟೂ ಆರು ವಿಧದ ಭದ್ರತೆಯನ್ನು ಸರ್ಕಾರ ನೀಡುತ್ತದೆ. SPG, Z+, Z, Y+, Y ಹಾಗೂ X ರೀತಿಯ ಭದ್ರತೆ ಇದೆ. ಎಸ್ಪಿಜಿ ಭದ್ರತೆ ಪ್ರಧಾನ ಮಂತ್ರಿಗೆ ಮಾತ್ರ ನೀಡಲಾಗುತ್ತದೆ. ಝಡ್ ಪ್ಲಸ್ ಸೆಕ್ಯೂರಿಟಿಯಲ್ಲಿ 10+ ಎನ್ಎಸ್ಜಿ ಕಮಾಂಡೋಗಳು ಸೇರಿದಂತೆ ಒಟ್ಟೂ 55 ಸಿಬ್ಬಂದಿ ಭದ್ರತೆಗೆ ಇರುತ್ತಾರೆ. ಝಡ್ ಕೆಟಗರಿಯಲ್ಲಿ 4 ಎನ್ಎಸ್ಜಿ, 4 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟೂ 22 ಸಿಬ್ಬಂದಿ ಭದ್ರತೆಗೆ ಇರುತ್ತಾರೆ. ವೈ+ನಲ್ಲಿ 11 ಭದ್ರತಾ ಸಿಬ್ಬಂದಿ, ವೈ ಕೆಟೆಗರಿಯಲ್ಲಿ 8 ಸಿಬ್ಬಂದಿ ಹಾಗೂ ಎಕ್ಸ್ ವಿಭಾಗದಲ್ಲಿ 2 ಭದ್ರತಾ ಸಿಬ್ಬಂದಿ ಇರುತ್ತಾರೆ.
ಚಿತ್ರರಂಗದಲ್ಲಿ ಅನೇಕರಿಗೆ ಕೊಲೆ ಬೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಸೆಕ್ಯುರಿಟಿ ನೀಡುತ್ತಿದೆ. ಅವರು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದ ಬೆನ್ನಲ್ಲೇ ಅವರಿಗೆ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಅವರಿಗೆ ವೈ+ ಕೆಟಗರಿ ಭದ್ರತೆ ನೀಡಲಾಗಿದೆ. ಅಂದರೆ, ಅವರ ರಕ್ಷಣೆಗೆ 11 ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಅವರ ಜೊತೆ ಹಾಗೂ ಮನ್ನತ್ನಲ್ಲಿ ಭದ್ರತಾ ಸಿಬ್ಬಂದಿ ಇರುತ್ತಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕಂಡಿತು. ಈ ವೇಳೆ ಅನುಪಮ್ ಖೇರ್ಗೆ ಎಕ್ಸ್ ಕೆಟಗರಿಯ ಭದ್ರತೆ ಒದಗಿಸಲಾಯಿತು. ಸದ್ಯ, ಕನ್ನಡದ ‘ಘೋಸ್ಟ್’ ಸಿನಿಮಾ ರಿಲೀಸ್ಗಾಗಿ ಅವರು ಕಾದಿದ್ದಾರೆ. ಶಿವರಾಜ್ಕುಮಾರ್ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರನ್ನು ಕೊಂದೇ ತೀರುವುದಾಗಿ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ. ಸಲ್ಮಾನ್ ಖಾನ್ ಕೃಷ್ಣ ಮೃಗ ಕೊಂದ ಪ್ರಕರಣದಲ್ಲಿ ಬಿಷ್ಣೋಯ್ ಗ್ಯಾಂಗ್ನವರು ಇನ್ನೂ ದ್ವೇಷ ಇಟ್ಟುಕೊಂಡಿದ್ದಾರೆ. ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣ ಮೃಗ ಪೂಜನೀಯ ಮೃಗ. ಅದನ್ನು ಕೊಂದಿದ್ದರಿಂದ ಸಲ್ಮಾನ್ ಮೇಲೆ ದ್ವೇಷ ಬೆಳೆದಿದೆ. ಸಲ್ಲುಗೆ ಕೊಲೆ ಬೆದರಿಕೆ ಬಂದಿರುವುದರಿಂದ ವೈ+ ಭಧ್ರತೆ ನೀಡಲಾಗಿದೆ. ಬುಲೆಟ್ ಪ್ರೂಫ್ ಕಾರನ್ನು ಕೂಡ ಅವರು ಖರೀದಿ ಮಾಡಿದ್ದಾರೆ.
ಕಂಗನಾ ರಣಾವತ್ ಅವರು ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರು ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ್ದರು.ಈ ಹೇಳಿಕೆ ಶಿವಸೇನೆಯ ಕೋಪಕ್ಕೆ ಕಾರಣ ಆಗಿತ್ತು. ಅವರಿಗೆ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ವೈ+ ಕೆಟಗರಿ ಭದ್ರತೆ ನೀಡಲಾಯಿತು.
ಅಕ್ಷಯ್ ಕುಮಾರ್ ಅವರಿಗೆ ವೈ ಕೆಟಗರಿ ಭದ್ರತೆಯನ್ನು ಸರ್ಕಾರ ನೀಡಿದೆ. ಅವರಿಗೆ ಕೊಲೆ ಬೆದರಿಕೆ ಬಂದಿದ್ದರಿಂದ ಅವರಿಗೆ ಭದ್ರತೆ ಒದಗಿಸಲಾಯಿತು.
ನಟ ಅಮಿತಾಭ್ ಬಚ್ಚನ್ ಅವರು ಇತ್ತೀಚೆಗೆ 81ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಅವರಿಗೂ ಸರ್ಕಾರ ಭದ್ರತೆ ಒದಗಿಸಿದೆ. ಈ ಮೊದಲು ಅವರಿಗೆ ಎಕ್ಸ್ ವರ್ಗದ ಭದ್ರತೆ ನೀಡಲಾಗುತ್ತಿತ್ತು. ಇದನ್ನು ಈಗ ವೈ ಕೆಟಗರಿಗೆ ಬದಲಾಯಿಸಲಾಗಿದೆ.
ಇದನ್ನೂ ಓದಿ: : ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಬಜೆಟ್ ಎಷ್ಟು? ಮುಚ್ಚುಮರೆ ಇಲ್ಲದೇ ಲೆಕ್ಕ ನೀಡಿದ ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡುವ ಮೂಲಕ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದರು. ಈ ಚಿತ್ರವನ್ನು ಅನೇಕರು ಟೀಕಿಸಿದರು. ಹೀಗಾಗಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಯಿತು. ಭದ್ರತಾ ಸಿಬ್ಬಂದಿಯ ಜೊತೆ ವಾಕಿಂಗ್ ಮಾಡಿದ್ದರು ವಿವೇಕ್. ಇದನ್ನು ನೋಡಿ ಅನೇಕರು ಟೀಕಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Fri, 13 October 23