ಶಾರುಖ್ ನಟನೆಯ 25 ವರ್ಷದ ಹಳೇ ಸಿನಿಮಾ ಮರು ಬಿಡುಗಡೆ; 25 ರೂ. ಟಿಕೆಟ್: ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್
ಟಿಕೆಟ್ ಬುಕಿಂಗ್ ಓಪನ್ ಆದ 25 ನಿಮಿಷಗಳ ಒಳಗೆ ಸೋಲ್ಡ್ ಔಟ್ ಆಗಿದೆ. ಇದು 25ನೇ ವರ್ಷದ ಸೆಲೆಬ್ರೇಷನ್ ಆದ್ದರಿಂದ ಕೇವಲ 25 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗಿದೆ. ಶಾರುಖ್ ಖಾನ್ ಅಭಿಮಾನಿಗಳು ‘ಕುಚ್ ಕುಚ್ ಹೋತಾ ಹೈ’ ಚಿತ್ರವನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡಲು ಉತ್ಸಾಹ ತೋರಿಸಿದ್ದಾರೆ.
ಕಳೆದ ಮೂರು ದಶಕಗಳಿಂದಲೂ ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ವರ್ಷ ಅವರು ‘ಪಠಾಣ್’ ಮತ್ತು ‘ಜವಾನ್’ ಸಿನಿಮಾದ ಮೂಲಕ ಎರಡು ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಗೊತ್ತೇ ಇದೆ. ಹೊಸ ಸಿನಿಮಾಗಳಷ್ಟೇ ಅಲ್ಲದೇ ಶಾರುಖ್ ಖಾನ್ ನಟನೆಯ ಹಳೇ ಸಿನಿಮಾಗಳು (Shah Rukh Khan Movies) ಕೂಡ ಮೋಡಿ ಮಾಡುವ ಸಾಮರ್ಥ್ಯ ಹೊಂದಿವೆ. ಅದಕ್ಕೆ ಅತ್ಯುತ್ತಮವಾದ ಉದಾಹರಣೆ ಇಲ್ಲಿದೆ. ಬರೋಬ್ಬರಿ 25 ವರ್ಷ ಹಳೆಯದಾದ ‘ಕುಚ್ ಕುಚ್ ಹೋತಾ ಹೈ’ (Kuch Kuch Hota Hai) ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದ್ದು, ಅದರ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
1998ರಲ್ಲಿ ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್ ಹಾಗೂ ರಾಣಿ ಮುಖರ್ಜಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಕರಣ್ ಜೋಹರ್ ನಿರ್ದೇಶನ ಮಾಡಿದ್ದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಆ ಸಿನಿಮಾಗೆ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮರು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ‘ಕುಚ್ ಕುಚ್ ಹೋತಾ ಹೈ’ ಚಿತ್ರ 25 ವರ್ಷಗಳ ಬಳಿಕವೂ ಥಿಯೇಟರ್ನಲ್ಲಿ ಹೌಸ್ಫುಲ್ ಆಗುತ್ತಿರುವುದು ವಿಶೇಷ.
View this post on Instagram
ಅಕ್ಟೋಬರ್ 15ರಂದು ಮುಂಬೈನ ವರ್ಸೋವಾದಲ್ಲಿ ಇರುವ ‘ಪಿವಿಆರ್’ ಮಲ್ಟಿಪ್ಲೆಕ್ಸ್ನಲ್ಲಿ ಈ ಸಿನಿಮಾಗೆ ಎರಡು ಶೋ ನಿಗದಿ ಆಗಿದೆ. ಒಂದು ಪರದೆಯಲ್ಲಿ ಸಂಜೆ 7 ಗಂಟೆಗೆ ಹಾಗೂ ಇನ್ನೊಂದು ಪರದೆಯಲ್ಲಿ ಸಂಜೆ 7.15ಕ್ಕೆ ಶೋ ಇರಲಿದೆ. ಇದರ ಟಿಕೆಟ್ ಬುಕಿಂಗ್ ಓಪನ್ ಆದ 25 ನಿಮಿಷಗಳ ಒಳಗೆ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಅಂದಹಾಗೆ, ಇದು 25ನೇ ವರ್ಷದ ಸೆಲೆಬ್ರೇಷನ್ ಆದ್ದರಿಂದ ಈ ಟಿಕೆಟ್ಗಳನ್ನು ಕೇವಲ 25 ರೂಪಾಯಿಗೆ ಮಾರಾಟ ಮಾಡಲಾಗಿದೆ. ಕಡಿಮೆ ಬೆಲೆಗೆ ಟಿಕೆಟ್ ಲಭ್ಯ ಇರುವುದು ಕೂಡ ಸೋಲ್ಡ್ ಔಟ್ ಆಗಲು ಪ್ರಮುಖ ಕಾರಣ.
ಇದನ್ನೂ ಓದಿ: ‘ಜವಾನ್’ ತಂಡದಲ್ಲಿ ಕಿರಿಕ್? ನಯನತಾರಾ ಮುನಿಸಿಗೆ ಪ್ರತಿಕ್ರಿಯೆ ನೀಡಿದ ಶಾರುಖ್ ಖಾನ್
ಶಾರುಖ್ ಖಾನ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಈ ವರ್ಷ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿಕ್ಕ ಬಳಿಕ ಅವರ ಚಾರ್ಮ್ ಇನ್ನೂ ಹೆಚ್ಚಾಗಿದೆ. ಮತ್ತೆ ಅವರು ಮೊದಲಿನ ಫಾರ್ಮ್ಗೆ ಮರಳಿದ್ದಾರೆ. ಈಗ ಅವರು ರಾಜ್ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ಆ ಹಿನ್ನೆಲೆಯಲ್ಲಿ ಅವರಿಗೆ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಶಾರುಖ್ ಖಾನ್ ಅವರು ಪದೇ ಪದೇ ಸುದ್ದಿ ಆಗುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.