‘ಅನಿಮಲ್’ ಸಿನಿಮಾದ ವಿಲನ್ ಮುಸ್ಲಿಂ ಯಾಕೆ? ನಿರ್ದೇಶಕ ಸಂದೀಪ್ ಕೊಟ್ಟ ಉತ್ತರ

|

Updated on: Dec 22, 2023 | 6:00 PM

Animal: ‘ಅನಿಮಲ್’ ಸಿನಿಮಾ ಟೀಕೆ, ವಿಮರ್ಶೆಗಳಿಗೆ ಒಳಗಾಗಿಯೂ ಭಾರಿ ದೊಡ್ಡ ಹಿಟ್ ಆಗಿದೆ. ಪುರುಷಾಹಂಕಾರ, ಸ್ತ್ರೀದ್ವೇಷವನ್ನು ಪ್ರಮೋಟ್ ಮಾಡಲಾಗಿದೆ ಎಂಬ ಆರೋಪ ಸಿನಿಮಾದ ಮೇಲಿದೆ. ಜೊತೆಗೆ ಸಿನಿಮಾದ ವಿಲನ್ ಅನ್ನು ಮುಸ್ಲಿಂ ವ್ಯಕ್ತಿಯನ್ನಾಗಿಸುವ ಮೂಲಕ ಮುಸ್ಲೀಮರನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕ ಸಂದೀಪ್ ಪ್ರತಿಕ್ರಿಯಿಸಿದ್ದಾರೆ.

‘ಅನಿಮಲ್’ ಸಿನಿಮಾದ ವಿಲನ್ ಮುಸ್ಲಿಂ ಯಾಕೆ? ನಿರ್ದೇಶಕ ಸಂದೀಪ್ ಕೊಟ್ಟ ಉತ್ತರ
ಅನಿಮಲ್
Follow us on

ರಣ್​ಬೀರ್ ಕಪೂರ್ (Ranbir Kapoor)-ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿರುವ ‘ಅನಿಮಲ್’ ಸಿನಿಮಾ ದೊಡ್ಡ ಹಿಟ್ ಎನಿಸಿಕೊಂಡಿದೆ. ಸಿನಿಮಾ ಬಗ್ಗೆ ಹಲವು ಪ್ರಶ್ನೆಗಳು, ಟೀಕೆಗಳು ಎದ್ದಿವೆಯಾದರೂ ದೊಡ್ಡ ಪ್ರಮಾಣದ ಜನರಿಗೆ ಸಿನಿಮಾ ಇಷ್ಟವಾಗಿದೆ ಎಂಬುದಕ್ಕೆ ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ಸಾಕ್ಷಿ. ‘ಅನಿಮಲ್’ ಸಿನಿಮಾದಲ್ಲಿ ಹಿಂಸೆ ಹೆಚ್ಚಿದೆ, ಮಹಿಳೆಯರ ಬಗ್ಗೆ ಅಗೌರವವಿದೆ, ಪುರುಷ ಅಹಂಕಾರವನ್ನು ಮೆರೆಸಲಾಗದೆ, ಮಹಿಳಾ ದೌರ್ಜನ್ಯವನ್ನು ಪ್ರಮೋಟ್ ಮಾಡುತ್ತಿದೆ ಎಂಬ ಹಲವು ಆರೋಪಗಳು ಸಿನಿಮಾ ಮೇಲಿವೆ. ಇದರ ಜೊತೆಗೆ ಸಿನಿಮಾದಲ್ಲಿ ವಿಲನ್ ಅನ್ನು ಮುಸ್ಲಿಂ ವ್ಯಕ್ತಿಯಾಗಿ ಮಾಡಿ, ಮುಸ್ಲೀಮರು ಕೆಟ್ಟವರು ಎಂದು ಬಿಂಬಿಸುವ ಪ್ರಯತ್ನವನ್ನು ನಿರ್ದೇಶಕ ಮಾಡಿದ್ದಾರೆ ಎಂದು ಸಹ ಆರೋಪಿಸಲಾಗಿದೆ. ಈ ಬಗ್ಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಉತ್ತರ ನೀಡಿದ್ದಾರೆ.

ಸಿನಿಮಾದಲ್ಲಿ ಖಳನಾಯಕನನ್ನು ಮುಸ್ಲಿಂ ವ್ಯಕ್ತಿ ಮಾಡಿರುವುದಕ್ಕೆ ಕಾರಣವಿದೆ. ನಾವು ಸಮಾಜದಲ್ಲಿ ನೋಡುತ್ತಿರುತ್ತೇವೆ, ಜನ ಕ್ರಿಶ್ಚಿಯಾನಿಟಿಗೆ, ಇಸ್ಲಾಂಗೆ ಮತಾಂತರವಾಗುವುದು ಆದರೆ ಹಿಂದೂ ಧರ್ಮಕ್ಕೆ ಮತಾಂತರ ಆಗುವುದು ಕಡಿಮೆ. ಅಲ್ಲದೆ ಇಸ್ಲಾಂನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇದೆ. ಹೀಗಿರುವಾಗ ಇದೇ ಕಾರಣಕ್ಕೆ ಒಂದೇ ಮುಖಚರ್ಯೆ ಇರದ ಹಲವು ನಟರನ್ನು ಖಳನಟನ ಪಾತ್ರದ ಭಾವ-ಭಾಮೈದರಾಗಿ ತೋರಿಸಬಹುದು ಎಂಬ ಕಾರಣಕ್ಕೆ ನಾನು ವಿಲನ್ ಅನ್ನು ಮುಸ್ಲಿಂ ವ್ಯಕ್ತಿ ಮಾಡಿದೆ. ಅದರ ಹೊರತಾಗಿ ಮುಸ್ಲೀಮ್ ವ್ಯಕ್ತಿಗಳನ್ನು ಕೆಟ್ಟದಾಗಿ ಬಿಂಬಿಸುವ ಕಾರಣದಿಂದ ಅಲ್ಲ ಎಂದಿದ್ದಾರೆ.

ಸಿನಿಮಾದಲ್ಲಿ ರಶ್ಮಿಕಾ ಹಾಗೂ ರಣ್​ಬೀರ್ ಪಾತ್ರಗಳು ಅಂತರ್ಜಾತೀಯ ವಿವಾಹ ಆಗುವ ಬಗ್ಗೆಯೂ ಕೆಲವರು ಅಪಸ್ವರ ಎತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂದೀಪ್ ರೆಡ್ಡಿ ವಂಗಾ, ‘‘ದೆಹಲಿಯಲ್ಲಿ ಹಲವು ತಮಿಳು ಹಾಗೂ ತೆಲುಗು ಕುಟುಂಬಗಳು ನೆಲೆಗೊಂಡಿರುವುದನ್ನು ನಾನು ನೋಡಿದ್ದೇನೆ. ಅಲ್ಲದೆ ವೈಯಕ್ತಿಕವಾಗಿ ನನಗೂ ಅಂತರ್​ ಧರ್ಮೀಯ, ಅಂತರ್ ಜಾತೀಯ ವಿವಾಹಗಳ ಬಗ್ಗೆ ಒಲವಿದೆ ಹಾಗಾಗಿ ಕತೆಯನ್ನು ಹಾಗೆ ಮಾಡಿದ್ದೇನೆ’’ ಎಂದಿದ್ದಾರೆ.

ಇದನ್ನೂ ಓದಿ:ತಣ್ಣಗಾಯ್ತು ‘ಅನಿಮಲ್​’ ಅಬ್ಬರ; ಸಾವಿರ ಕೋಟಿ ರೂಪಾಯಿ ಗಳಿಸುವ ಆಸೆ ಈಡೇರಲೇ ಇಲ್ಲ

ಆ ಸಿನಿಮಾದಲ್ಲಿ ಕುಟುಂಬ ಸದಸ್ಯರ ಎದುರೇ ರಣ್​ಬೀರ್ ಹಾಗೂ ರಶ್ಮಿಕಾ ಗಾಢವಾಗಿ ಚುಂಬಿಸುವ ದೃಶ್ಯವೂ ಇದೆ. ಈ ಬಗ್ಗೆ ಮಾತನಾಡಿರುವ ಸಂದೀಪ್ ರೆಡ್ಡಿ ವಂಗಾ, ‘‘ಆ ಸೀನ್​ ಬರುವಾಗ ಹಿನ್ನೆಲೆಯಲ್ಲಿ ರಾಕ್ ಸಂಗೀತ ಕೇಳುತ್ತಿರುತ್ತದೆ. ಆ ಸಂಗೀತದಲ್ಲಿ ಒಂದು ರೀತಿಯ ಡೋಂಟ್ ಕೇರ್ ಭಾವವಿದೆ. ಎರಡೂ ಪಾತ್ರಗಳು ಪರಸ್ಪರ ಮುತ್ತಿಡುವ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಗೊಳಿಸುತ್ತಿದ್ದಾರೆ. ನಿಮ್ಮನ್ನು ನಾವು ಕೇರ್ ಮಾಡುವುದಿಲ್ಲ ಎನ್ನುವ ಭಾವವೂ ಆ ಮುತ್ತಿನಲ್ಲಿದೆ’’ ಎಂದಿದ್ದಾರೆ.

‘ಅನಿಮಲ್’ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆ ಆಗಿತ್ತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ನಾಯಕಿಯರಾಗಿ ನಟಿಸಿದ್ದಾರೆ. ಅನಿಲ್ ಕಪೂರ್, ಶಕ್ತಿ ಕಪೂರ್ ಸೇರಿದಂತೆ ಇತರೆ ಕೆಲವು ಹಿರಿಯ ನಟರು ಸಹ ಇದ್ದಾರೆ. ಸಿನಿಮಾವು ವಿಮರ್ಶೆ, ಟೀಕೆಗಳ ನಡುವೆಯೂ ಭಾರಿ ದೊಡ್ಡ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ