
ಸಿನಿಮಾ ನಟ, ನಟಿಯರು ತೆರೆಯ ಮೇಲೆ ಸರ್ವಗುಣ ಸಂಪನ್ನರಂತೆ ಕಾಣಿಸಿಕೊಳ್ಳುತ್ತಾರೆ. ಬಡವರಿಗೆ ಸಹಾಯ ಮಾಡುವುದು, ದಮನಿತರಿಗೆ ರಕ್ಷಣೆ ನೀಡುವುದು ಮಾನವೀಯ ಮೌಲ್ಯಗಳ ಬೋಧನೆ ಮಾಡುವುದು ಇತರೆ, ಇತರೆ. ಆದರೆ ನಿಜ ಜೀವನದಲ್ಲಿ ಹಲವಾರು ನಟ-ನಟಿಯರು ಇದಕ್ಕೆ ವಿರುದ್ಧ. ಡಿಂಪಲ್ ಹಯಾತಿ, ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ನಟಿ. ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಟಿಯ ವಿರುದ್ಧ ಪ್ರಕರಣವೊಂದು ದಾಖಲಾಗಿದ್ದು, ಹೀನ ಕೃತ್ಯಯೊಂದನ್ನು ಡಿಂಪಲ್ ಎಸಗಿದ್ದಾರೆಂಬ ಆರೋಪ ಎದುರಾಗಿದೆ.
ಡಿಂಪಲ್ ಹಯಾತಿ ತಮ್ಮ ಪತಿ ಡೇವಿಡ್ ಜೊತೆಗೆ ಹೈದರಾಬಾದ್ನ ಶೈಖ್ಪೇಟ್ನಲ್ಲಿರುವ ವೆಸ್ಟ್ವೂಡ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ. ಸಿನಿಮಾ ತಾರೆಯರು ಮನೆಗೆಲಸಕ್ಕೆ ಬಡ ನೌಕರರನ್ನು ನೇಮಿಸಿಕೊಳ್ಳುವುದು ಸಾಮಾನ್ಯ. ಕೆಲವು ಸಂಸ್ಥೆಗಳು ಸೆಲೆಬ್ರಿಟಿಗಳಿಗೆ, ಶ್ರೀಮಂತರಿಗೆ ಮನೆಗೆಲಸದವರನ್ನು ನೇಮಿಸಿ ಕೊಡುತ್ತಾರೆ. ಅಂತೆಯೇ ಡಿಂಪಲ್ ಹಯಾತಿ ಮನೆಯಲ್ಲಿ ಪ್ರಿಯಾಂಕಾ ಬಿದರ್ ಹೆಸರಿನ ಯುವತಿಯೊಬ್ಬಾಕೆ ಕೆಲಸಕ್ಕೆ ಸೇರಿಕೊಂಡಿದ್ದರು.
ಇದೀಗ ಈ ಮನೆಗೆಲಸದ ಮಹಿಳೆ ಮೇಲೆ ಡಿಂಪಲ್ ಹಯಾತಿ ಮತ್ತು ಆಕೆಯ ಪತಿ ಡೇವಿಡ್ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು ದಾಖಲಾಗಿದೆ. ಪ್ರಿಯಾಂಕಾ, ಫಿಲಂನಗರ್ ಪೊಲೀಸ್ ಠಾಣೆಯಲ್ಲಿ ಡಿಂಫಲ್ ಹಯಾತಿ ಮತ್ತು ಡೇವಿಡ್ ವಿರುದ್ಧ ದೂರು ದಾಖಲಿಸಿದ್ದು, ಡಿಂಪಲ್ ಹಯಾತಿ ಮತ್ತು ಡೇವಿಡ್ ತಮ್ಮ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಣ್ಣ ಮದುವೆ: ‘ಉಪಾಧ್ಯಕ್ಷ’ ಸಿನಿಮಾ ನಟಿ ಮಲೈಕಾಗೆ ಸಖತ್ ಖುಷಿ
ಡಿಂಪಲ್ ಹಯಾತಿ ಮತ್ತು ಡೇವಿಡ್ ಮನೆಯಲ್ಲಿ ಕೆಲಸ ಆರಂಭಿಸಿದಾಗಿನಿಂದಲೂ ಇಬ್ಬರೂ ಸಹ ತಮ್ಮೊಟ್ಟಿಗೆ ಬಲು ತುಚ್ಛವಾಗಿ ನಡೆದುಕೊಳ್ಳುತ್ತಿದ್ದರು. ವಿನಾಕಾರಣ ಕೆಟ್ಟ ಭಾಷೆ ಬಳಸಿ ಬೈಯ್ಯುತ್ತಿದ್ದರು. ‘ನಿನ್ನ ಜೀವನ ನನ್ನ ಶೂಗೆ ಸಹ ಸಮ ಅಲ್ಲ’ ಎಂದೆಲ್ಲ ಹೇಳುತ್ತಿದ್ದರು. ಸರಿಯಾಗಿ ಊಟ ಕೊಡುತ್ತಿರಲಿಲ್ಲ. ವಿಶ್ರಾಂತಿಗೆ ಸಮಯ ಕೊಡುತ್ತಿರಲಿಲ್ಲ’ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಅವರ ನಾಯಿ ಬೊಗಳಿದ ವಿಷಯಕ್ಕೆ ಜಗಳ ಮಾಡಿದರು. ಕೆಟ್ಟ ಮಾತುಗಳಲ್ಲಿ ಬೈದರು, ನಾನು ಅವರು ಬೈಯ್ಯುತ್ತಿದ್ದಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಮುಂದಾದಾಗ ಡೇವಿಡ್ ನನ್ನಿಂದ ಮೊಬೈಲ್ ಕಿತ್ತುಕೊಂಡು ನೆಲಕ್ಕೆ ಒಗೆದು ಒಡೆದುಹಾಕಿದರು. ಬಳಿಕ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದರು. ನನ್ನ ಬಟ್ಟೆ ಸಹ ಹರಿದರು’ ಎಂದಿದ್ದಾರೆ.
ಪ್ರಿಯಾಂಕಾ ನೀಡಿರುವ ದೂರಿನಂತೆ ಫಿಲಂನಗರ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ 74, 79, 351(2), 324(2) ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಶೀಘ್ರವೇ ಡಿಂಪಲ್ ಹಯಾತಿ ಮತ್ತು ಡೇವಿಡ್ ಅವರನ್ನು ವಿಚಾರಣೆ ನಡೆಸಲಿದ್ದಾರೆ.
ಡಿಂಪಲ್ ಹಯಾತಿ, ವಿಜಯವಾಡ ಮೂಲದ ಡಿಂಪಲ್ ಹಯಾತಿ 2017 ರಲ್ಲಿ ‘ಗಲ್ಫ್’ ತೆಲುಗು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ‘ದೇವಿ 2’, ‘ಗೋಲ್ಕೊಂಡ ಗಣೇಶ್’, ರವಿತೇಜ ನಟನೆಯ ‘ಖಿಲಾಡಿ’, ಗೋಪಿಚಂದ್ ನಟನೆಯ ‘ರಾಮಬಾಣಂ’, ಧನುಶ್ ನಟನೆಯ ಹಿಂದಿ ಸಿನಿಮಾ ‘ಅತರಂಗಿ ರೇ’ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ