ಜೈಲಿನಲ್ಲಿ ನರಕಯಾತನೆ, ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ ದರ್ಶನ್
Darshan Thoogudeepa in Jail: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಜೈಲಿನಲ್ಲಿ ಪ್ರತಿದಿನವೂ ಹಿಂಸೆಯಾಗಿ ಪರಿಣಮಿಸಿದೆ. ಬ್ಯಾರಕ್ ಬದಲಾವಣೆ, ಹೆಚ್ಚುವರಿ ಹಾಸಿಗೆ, ದಿಂಬಿಗಾಗಿ ದರ್ಶನ್ ಅಂಗಲಾಚುತ್ತಿದ್ದಾರೆ. ಆದರೆ ಜೈಲಧಿಕಾರಿಗಳು ನಿಯಮ ಪಾಲನೆಯಲ್ಲಿ ಕಟ್ಟುನಿಟ್ಟಾಗಿದ್ದಾರೆ. ಹೀಗಾಗಿ ದರ್ಶನ್ ಇದೀಗ ಮಾನವ ಹಕ್ಕು ಆಯೋಗದ ಮೊರೆ ಹೋಗುವ ನಿರ್ಧಾರ ಮಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವು ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಸಿಗರೇಟು ಸೇರಿದಂತೆ ಕೆಲವು ಸೌಲಭ್ಯಗಳನ್ನು ಅಕ್ರಮವಾಗಿ ಪಡೆದಿದ್ದರು. ಇದೇ ಕಾರಣಕ್ಕೆ ಈಗ ಜೈಲಧಿಕಾರಿಗಳು ಹೆಚ್ಚಿನ ಶಿಸ್ತಿನಿಂದ ದರ್ಶನ್ ಅವರನ್ನು ಇರಿಸಿಕೊಂಡಿದ್ದಾರೆ. ಆದರೆ ಇದು ದರ್ಶನ್ ಸಮಸ್ಯೆಗೆ ಕಾರಣವಾಗಿದೆ. ದರ್ಶನ್, ತಮಗೆ ಜೈಲಿನಲ್ಲಿ ಕೆಲ ಸಾಮಾನ್ಯ ಸೌಕರ್ಯಗಳು ಸಿಗುತ್ತಿಲ್ಲವೆಂದು ದೂರಿದ್ದು, ಜೈಲಧಿಕಾರಿಗಳ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ದೂರಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ನಟ ದರ್ಶನ್, ತಮ್ಮ ‘ಹಕ್ಕು’ಗಳಿಗಾಗಿ ಇದೀಗ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ತಮ್ಮನ್ನು ಬಿಸಿಲು ಚೆನ್ನಾಗಿ ಬರುವ ಬ್ಯಾರಕ್ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಮಾತ್ರವಲ್ಲದೆ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್ಶೀಟ್ಗಳು ಬೇಕೆಂದು ಮನವಿ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಜೈಲು ಅಧೀಕ್ಷಕರು ಅನುಮತಿ ನೀಡಿಲ್ಲ. ಹೀಗಾಗಿ ದರ್ಶನ್ ಪರ ವಕೀಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇತ್ತೀಚೆಗಷ್ಟೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಏರಿದ ಧ್ವನಿಯಲ್ಲಿ ವಾದ-ಪ್ರತಿವಾದಗಳು ನಡೆದಿವೆ. ನ್ಯಾಯಾಲಯವು ಅಕ್ಟೋಬರ್ 09ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ಆದರೆ ನಟ ದರ್ಶನ್, ಇದೀಗ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಮಾನವ ಆಯೋಗಕ್ಕೆ ಪತ್ರ ಬರೆದು ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಲಿದ್ದಾರೆ. ನ್ಯಾಯಾಲಯದಲ್ಲಿ ವಾದ-ಪ್ರತಿವಾದದ ವೇಳೆಯೂ ಸಹ ದರ್ಶನ್ ಪರ ವಕೀಲರು, ಜೈಲಧಿಕಾರಿಗಳು ಅಮಾನವೀಯವಾಗಿ ದರ್ಶನ್ ಜೊತೆಗೆ ನಡೆದುಕೊಳ್ಳುತ್ತಿದ್ದಾರೆ ಎಂದು ವಾದಿಸಿದ್ದರು. ಇದೇ ಕಾರಣಕ್ಕೆ ಈಗ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲು ದರ್ಶನ್ ಮುಂದಾಗಲಿದ್ದಾರೆ.
ಮಾನವ ಹಕ್ಕು ಆಯೋಗವು, ಯಾವುದೇ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ಇದೀಗ ದರ್ಶನ್, ನ್ಯಾಯಾಂಗ ಖೈದಿಗೆ ಇರುವ ಹಕ್ಕುಗಳನ್ನು ಉಳಿಸಿಕೊಡುವಂತೆ ಮಾನವ ಹಕ್ಕು ಆಯೋಗದ ಮೊರೆ ಹೋಗಲಿದ್ದಾರೆ. ಈ ಬಗ್ಗೆ ದರ್ಶನ್ ಅವರು ತಮ್ಮ ವಕೀಲ ಸುನಿಲ್ ಅವರೊಟ್ಟಿಗೆ ಚರ್ಚೆ ಮಾಡಿದ್ದಾರೆ.
ಇತರೆ ಆರೋಪಿಗಳಿಗೂ ಕಂಟಕ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದರ್ಶನ್ ಸೇರಿದಂತೆ ಒಟ್ಟು ಏಳು ಮಂದಿಯ ಜಾಮೀನು ರದ್ದು ಮಾಡಿ ಆದೇಶ ನೀಡಿತ್ತು. ಇದೀಗ ಪೊಲೀಸರು, ಇದೇ ಪ್ರಕರಣದ ಇನ್ನೂ ಐದು ಮಂದಿ ಆರೋಪಿಗಳ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಎ3 ಪವನ್ , ಎ4 ರಾಘವೇಂದ್ರ, ಎ5 ನಂದೀಶ್, ಎ9 ಧನರಾಜ್ ಹಾಗೂ ಎ10 ವಿನಯ್ ಅವರ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆರೋಪಿಗಳು ನೊಟೀಸ್ ಪಡೆಯಲು ಹಿಂದೇಟು ಹಾಕಿದ್ದಾರೆ. ನೊಟೀಸ್ ಪಡೆದು ವಿಚಾರಣೆ ನಡೆದು, ಜಾಮೀನು ರದ್ದಾದರೆ ಮತ್ತೆ ಜೈಲು ಸೇರಬೇಕು ಎನ್ನುವ ಭಯ ಅವರನ್ನು ಕಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Wed, 1 October 25




