ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿಗೆ ತೆಲುಗು, ಹಿಂದಿ ಚಿತ್ರರಂಗದಿಂದ ಒಂದರ ಹಿಂದೊಂದು ಆಫರ್ಗಳು ಬರುತ್ತಲೇ ಇವೆ. ‘ಹನುಮ್ಯಾನ್’ ಸಿನಿಮಾ ನಿರ್ದೇಶಿಸಿ ಸೂಪರ್ ಹಿಟ್ ನೀಡಿರುವ ಪ್ರಶಾಂತ್ ವರ್ಮಾ ಅವರ ಮುಂದಿನ ತೆಲುಗು ಸಿನಿಮಾ ‘ಜೈ ಹನುಮಾನ್’ನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಕಿರು ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಅದರ ಬೆನ್ನಲ್ಲೆ ರಿಷಬ್ ಶೆಟ್ಟಿ ಸೇರಿದಂತೆ ಚಿತ್ರತಂಡದ ವಿರುದ್ಧ ದೂರು ಸಹ ದಾಖಲಾಗಿದೆ.
‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಆಂಜನೇಯ ಸ್ವಾಮಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ರಿಷಬ್ ಶೆಟ್ಟಿ ಉದ್ದನೆಯ ಗಡ್ಡ ಬಿಟ್ಟುಕೊಂಡು, ಉದ್ದನೆಯ ಕೂದಲು ಬಿಟ್ಟುಕೊಂಡು ಶ್ರೀರಾಮನ ಮೂರ್ತಿಯನ್ನು ಅಪ್ಪಿಕೊಂಡಿರುವ ಚಿತ್ರ ಇದೆ. ಟೀಸರ್ನಲ್ಲೂ ಬಹುತೇಕ ಇದೇ ಇತ್ತು. ಈ ಹಿಂದೆ ಭಾರತೀಯ ಚಿತ್ರರಂಗದಲ್ಲಿ ನಿರ್ಮಿಸಲಾಗಿರುವ ಎಲ್ಲ ಪೌರಾಣಿಕ ಸಿನಿಮಾಗಳಲ್ಲಿ ಹನುಮಂತನ ಪಾತ್ರವನ್ನು ತೋರಿಸಿದ್ದಕ್ಕಿಂತಲೂ ಭಿನ್ನವಾಗಿ ‘ಜೈ ಹನುಮಾನ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ಬಳಿಕ ತೆಲುಗಿನ ರಾಣಾ ದಗ್ಗುಬಾಟಿ ಶೋಗೆ ಬಂದ ಮತ್ತೋರ್ವ ಕನ್ನಡಿಗ
ಹನುಮಂತನ ಮುಖವನ್ನೇ ‘ಜೈ ಹನುಮಾನ್’ ಸಿನಿಮಾದಲ್ಲಿ ಬದಲಾಯಿಸಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಹನುಮಂತನ ಮುಖ ವಾನರ ಮುಖವನ್ನು ಹೋಲುತ್ತದೆ. ಆದರೆ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ಮುಖವನ್ನು ಸಾಮಾನ್ಯ ಮನುಷ್ಯನ ಮುಖದಂತೆಯೇ ತೋರಿಸಲಾಗಿದೆ. ವಾನರನ ರೀತಿ ಹನುಮಂತನನ್ನು ತೋರಿಸಿಲ್ಲ ಇದೇ ಕಾರಣಕ್ಕೆ ಈಗ ವಕೀಲ ತಿರುಮಲ ರಾವ್ ಎಂಬುವರು ನಾಂಪಲ್ಲಿ ನ್ಯಾಯಾಲಯದಲ್ಲಿ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ, ರಿಷಬ್ ಶೆಟ್ಟಿ, ಸಿನಿಮಾದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ.
ಹನುಮಂತನ ಮುಖವನ್ನೇ ಬದಲಾಯಿಸುವ ಮೂಲಕ, ಹನುಮನ ಪಾತ್ರವನ್ನು ತಿದ್ದುವ ಕೆಲಸ ಮಾಡಲಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುವ ಕಾರ್ಯ ಇದಾಗಿದ್ದು, ಶೀಘ್ರವೇ ಸಿನಿಮಾದ ಪೋಸ್ಟರ್, ಟೀಸರ್ಗಳನ್ನು ಹಿಂಪಡೆಯುವಂತೆ ಆದೇಶಿಸಬೇಕೆಂದು ವಕೀಲ ತಿರುಮಲ ವರ್ಮಾ ಅರ್ಜಿ ದಾಖಲಿಸಿದ್ದಾರೆ. ರಿಷಬ್ ಶೆಟ್ಟಿಯ ‘ಜೈ ಹನುಮಾನ್’ ಸಿನಿಮಾ ರಾಮಾಯಣದ ನಂತರದ ಕತೆಯನ್ನು ಒಳಗೊಂಡಿದೆಯಂತೆ. ರಾಮನಿಗೆ ಹನುಮಂತ ನೀಡಿರುವ ಪ್ರತಿಜ್ಞೆಯ ಕತೆ ಇದಾಗಿದೆಯಂತೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ