ರಜನೀಕಾಂತ್ ‘ವೆಟ್ಟೈಯಾನ್’ ಸಿನಿಮಾದ ವಿರುದ್ಧ ದೂರು ದಾಖಲು

|

Updated on: Oct 04, 2024 | 10:58 AM

Rajinikanth Movie: ರಜನೀಕಾಂತ್, ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್ ಇನ್ನಿತರರು ನಟಿಸಿರುವ ‘ವೆಟ್ಟೈಯಾನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ, ಆದರೆ ಇದೀಗ ಸಿನಿಮಾದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ರಜನೀಕಾಂತ್ ‘ವೆಟ್ಟೈಯಾನ್’ ಸಿನಿಮಾದ ವಿರುದ್ಧ ದೂರು ದಾಖಲು
Follow us on

ರಜನೀಕಾಂತ್ ನಿನ್ನೆಯಷ್ಟೆ ಚೆನ್ನೈನ ಅಪೋಲೊ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ. ಇದರ ಬೆನ್ನಲ್ಲೆ ಬಿಡುಗಡೆಗೆ ತಯಾರಾಗಿರುವ ರಜನೀಕಾಂತ್​ರ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ಪ್ರಕರಣ ದಾಖಲಾಗಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿ ಕೇಳಿ ಬರುವ ಕೆಲ ಸಂಭಾಷಣೆಗಳ ವಿರುದ್ಧ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದು, ಸಿನಿಮಾದಲ್ಲಿ ಬಳಸಲಾಗಿರುವ ಕೆಲವು ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಲನಿವೇಲುಸ್ವಾಮಿ ಎಂಬುವರು ಹೈಕೋರ್ಟ್​ನ ಮಧುರೈ ಬೆಂಚ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ‘ವೆಟ್ಟೆಯಾನ್’ ಸಿನಿಮಾದಲ್ಲಿ ಬಳಸಲಾಗಿರುವ ಎನ್​ಕೌಂಟರ್ ಕುರಿತಾದ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಸಿನಿಮಾದ ಟ್ರೈಲರ್​ನಲ್ಲಿ ನಾಯಕ ಎನ್​ಕೌಂಟರ್ ಕುರಿತಾಗಿ ಹೀರೋಯಿಕ್ ಸಂಭಾಷಣೆಗಳನ್ನು ಹೇಳುವ ದೃಶ್ಯಗಳಿವೆ. ಈ ದೃಶ್ಯಗಳು ಹಾಗೂ ಸಂಭಾಷಣೆಗಳ ಬಗ್ಗೆ ಪಲನಿವೇಲುಸ್ವಾಮಿ ಆಕ್ಷೇಪ ಎತ್ತಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಿಂದ ರಜನೀಕಾಂತ್ ಡಿಸ್​ಚಾರ್ಜ್, ವಿಶ್ರಾಂತಿಗೆ ಸೂಚನೆ

‘ಸಿನಿಮಾದಲ್ಲಿ ಅಕ್ರಮ ಚಟುವಟಿಕೆಯಾದ ಎನ್​ಕೌಂಟರ್​ಗೆ ಒತ್ತು ನೀಡುವ, ಎನ್​ಕೌಂಟರ್​ ಅನ್ನು ಸರಿಯೆಂದು ವಾದಿಸುವ ಸಂಭಾಷಣೆಗಳಿವೆ. ಇದು ಸಮಾಜಕ್ಕೆ ಮಾರಕವಾಗಿದ್ದು, ಈ ಸಿನಿಮಾ ಬಿಡುಗಡೆ ಆದರೆ ಜನರ ಮನಸ್ಸಿನಲ್ಲಿ ಎನ್​ಕೌಂಟರ್​ಗಳು ಸರಿಯೆಂಬ ಭಾವನೆ ಜನರ ಮನಸಿನಲ್ಲಿ ಮೂಡಲಿದೆ. ಹಾಗಾಗಿ ಈ ಸಿನಿಮಾದಲ್ಲಿರುವ ಎನ್​ಕೌಂಟರ್ ಕುರಿತಾದ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ನಿರ್ಮಾಣಸಂಸ್ಥೆಗೆ ಸೂಚಿಸಬೇಕು, ಇಲ್ಲವಾದರೆ ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, ಸಿಬಿಎಫ್​ಸಿ ಹಾಗೂ ಸಿನಿಮಾ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ ಹೌಸ್​ಗೆ ನೊಟೀಸ್​ ಜಾರಿ ಮಾಡಿದೆ. ಆದರೆ ಸಿನಿಮಾದ ಬಿಡುಗಡೆ ಮೇಲೆ ತಾತ್ಕಾಲಿಕ ತಡೆ ನೀಡಲು ಪೀಠವು ನಿರಾಕರಿಸಿದೆ. ಸಿಬಿಎಫ್​ಸಿ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್​ನ ಪ್ರತಿಕ್ರಿಯೆ ಬಂದ ಬಳಿಕ ಈ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.

‘ವೆಟ್ಟೈಯಾನ್’ ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಪಾತ್ರಧಾರಿಯಾಗಿ ನಟಿಸಿದ್ದು, ಅವರು ಎನ್​ಕೌಂಟರ್​ ಸ್ಪೆಷಲಿಸ್ಟ್ ಆಗಿರುತ್ತಾರೆ. ಅಪರಾಧಿಗಳನ್ನು ಗುಂಡಿಕ್ಕಿ ಕೊಲ್ಲುವುದು ಅವರ ಕೆಲಸ, ವಕೀಲರ ಪಾತ್ರದಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್ ಈ ಎನ್​ಕೌಂಟರ್​ಗಳನ್ನು ವಿರೋಧಿಸುತ್ತಾರೆ. ಆಗ ರಜನೀಕಾಂತ್, ಎನ್​ಕೌಂಟರ್​ ಒಳ್ಳೆಯದು ಎಂಬರ್ಥದ ಡೈಲಾಗ್​ಗಳನ್ನು ಹೇಳಿರುವ ದೃಶ್ಯಗಳು ಟ್ರೈಲರ್​ನಲ್ಲಿವೆ. ಸಿನಿಮಾವನ್ನು ಜ್ಞಾನವೇಲು ನಿರ್ದೇಶನ ಮಾಡಿದ್ದು, ಸಿನಿಮಾ ಅಕ್ಟೋಬರ್ 10ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ