
ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಾಳೆ (ಜನವರಿ 09) ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿ ಪ್ರಮಾಣ ಪತ್ರ ಸಿಗದ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ‘ಜನ ನಾಯಗನ್’ ಎದುರಾಗಿ ಶಿವಕಾರ್ತಿಕೇಯನ್, ಶ್ರೀಲೀಲಾ ನಟನೆಯ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಗುತ್ತಿತ್ತು. ಆದರೆ ಈಗ ಅದೂ ಸಹ ಸಂಕಷ್ಟದಲ್ಲಿ ಸಿಲುಕಿದೆ. ಸಿನಿಮಾಕ್ಕೆ ಬರೋಬ್ಬರಿ 23 ಕಟ್ಗಳನ್ನು ಸಿಬಿಎಫ್ಸಿ ಸೂಚಿಸಿದ್ದು, ‘ಪರಾಶಕ್ತಿ’ ನಿರ್ಮಾಪಕರು ಸಿಬಿಎಫ್ಸಿ ವಿರುದ್ಧ ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆ ಇದೆ.
ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ನಟಿಸಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನ ಮಾಡಿರುವ ‘ಪರಾಶಕ್ತಿ’ ಸಿನಿಮಾ ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯ ಕತೆಯನ್ನು ಹೊಂದಿದ್ದು, ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಲಿಕ್ಕಿತ್ತು, ಆದರೆ ಸಿನಿಮಾಕ್ಕೆ ಇದೀಗ ಸಿಬಿಎಫ್ಸಿ ಸಮಸ್ಯೆ ಎದುರಾಗಿದೆ. ವಿಶೇಷವೆಂದರೆ ಜನವರಿ 09 ರಂದು ಬಿಡುಗಡೆ ಆಗಲಿದ್ದ ‘ಜನ ನಾಯಗನ್’ ಸಿನಿಮಾಕ್ಕೂ ಸಿಬಿಎಫ್ಸಿ ಸಮಸ್ಯೆ ಎದುರಾಗಿದೆ. ಈಗ ‘ಪರಾಶಕ್ತಿ’ ಸಿನಿಮಾಕ್ಕೂ ಸಿಬಿಎಫ್ಸಿ ಕಠಿಣ ನಿಯಮಗಳನ್ನು ಹೇರಿದೆ.
‘ಪರಾಶಕ್ತಿ’ ಸಿನಿಮಾಕ್ಕೆ ಸಿಬಿಎಫ್ಸಿ ಬರೋಬ್ಬರಿ 23 ಕಟ್ಗಳನ್ನು ಸೂಚಿಸಿದೆಯಂತೆ. ಇದು ಸಿನಿಮಾ ತಂಡಕ್ಕೆ ಆಘಾತ ತಂದಿದೆ. ಹಿಂದಿ ವಿರೋಧಿ ಚಳವಳಿಯ ಬಗ್ಗೆ ಸಿನಿಮಾ ಆಗಿರುವ ಕಾರಣ ಸಹಜವಾಗಿಯೇ ಸಿನಿಮಾನಲ್ಲಿ ರಾಜಕೀಯ ಅಂಶವೂ ಇದ್ದು, ಇದು ಸಿಬಿಎಫ್ಸಿಯ ಅವಕೃಪೆಗೆ ಕಾರಣವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ‘ಸೂರರೈ ಪೋಟ್ರು’ ಸಿನಿಮಾ ನಿರ್ದೇಶಿಸಿರುವ ಸುಧಾ ಕೊಂಗರಗೆ ಇದು ಸಹನೀಯವಾಗಿಲ್ಲ ಎನ್ನಲಾಗುತ್ತಿದ್ದು, ಚಿತ್ರತಂಡ ಸಿಬಿಎಫ್ಸಿಯ ನಿರ್ಣಯಕ್ಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.
ಇದನ್ನೂ ಓದಿ:ವಿಜಯ್ ಹಿಟ್ ಸಾಂಗ್ನ ಕೆಟ್ಟದಾಗಿ ಹಾಡಿ ಟ್ರೋಲ್ ಆದ ಮಮಿತಾ ಬೈಜು
‘ಪರಾಶಕ್ತಿ’ ಸಿನಿಮಾದ ನಿರ್ಮಾಪಕರು ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯ ಮುಖಂಡರುಗಳಿಗೆ ಆಪ್ತರಾಗಿದ್ದು, ಡಿಎಂಕೆಗೆ ವಿಪಕ್ಷವಾಗಿ ಉದಯವಾಗುತ್ತಿರುವ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಎದುರು ರಾಜಕೀಯ ದಾಳವಾಗಿ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಮಾಡಲಾಗುತ್ತಿದ್ದೆ ಎಂದೇ ನಂಬಲಾಗಿತ್ತು. ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡದೇ ಇರುವಲ್ಲಿ ಡಿಎಂಕೆಯ ಕೈವಾಡವೂ ಇದೆ ಎನ್ನಲಾಗಿತ್ತು. ಆದರೆ ಈಗ ಸ್ವತಃ ‘ಪರಾಶಕ್ತಿ’ ಸಿನಿಮಾಕ್ಕೂ ಸಹ ಸಿಬಿಎಫ್ಸಿ 23 ಕಟ್ಗಳನ್ನು ಸೂಚಿಸಿದ್ದು, ಚಿತ್ರತಂಡಕ್ಕೆ ಆಘಾತ ನೀಡಿದೆ.
‘ಪರಾಶಕ್ತಿ’ ಸಿನಿಮಾ ಶಿವಕಾರ್ತಿಕೇಯನ್ ಅವರ 25ನೇ ಸಿನಿಮಾ ಆಗಿದ್ದು, ಶ್ರೀಲೀಲಾಗೆ ಇದು ಮೊದಲ ತಮಿಳು ಸಿನಿಮಾ ಆಗಿದೆ. ಸಿನಿಮಾವನ್ನು 125 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದ್ದು, ಸಿನಿಮಾದ ಮೇಲೆ ಶಿವಕಾರ್ತಿಕೇಯನ್ಗೆ ಭಾರಿ ನಿರೀಕ್ಷೆ ಇತ್ತು. ಆದರೆ ಈಗ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ