
ಸಿನಿಮಾ ತಂಡಗಳಿಗೂ ಸೆನ್ಸಾರ್ ಮಂಡಳಿ ನಡುವೆ ಕಿತ್ತಾಟ ಇದ್ದೇ ಇದೆ. ಸೆನ್ಸಾರ್ ಮಂಡಳಿ ಮಾಡವು ತಪ್ಪುಗಳಿಗೆ ಸಿನಿಮಾ ತಂಡಗಳು ತೊಂದರೆ ಅನುಭವಿಸಬೇಕಾಗುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈಗ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗಬಹುದು. ಇದಕ್ಕೆ ಕಾರಣವೂ ಇದೆ. ಸೆನ್ಸಾರ್ ಮಂಡಳಿ ತನ್ನ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಇದು ಸಿನಿಮಾ ತಂಡಕ್ಕ ದೊಡ್ಡ ಶಾಕ್ ಕೊಟ್ಟಿದೆ.
ಸಿನಿಮಾ ಪ್ರಮಾಣಪತ್ರಕ್ಕಾಗಿ ಕೊನೆ ಕ್ಷಣದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಈಗ ಬ್ರೇಕ್ ಬಿದ್ದಿದೆ. ಸಿನಿಮಾದ ರಿಲೀಸ್ ಡೇಟ್ ಹತ್ತಿರ ಬಂದಿದೆ ಎಂಬ ಕಾರಣಕ್ಕೆ ಇನ್ಮುಂದೆ ಯಾರಿಗೂ ಯಾವುದೇ ವಿನಾಯಿತಿ ಸಿಗುವುದಿಲ್ಲ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ತೆಗೆದುಕೊಂಡಿರುವ ಈ ಕಟ್ಟುನಿಟ್ಟಿನ ನಿರ್ಧಾರದಿಂದಾಗಿ ಇನ್ಮುಂದೆ ಚಿತ್ರತಂಡಗಳು ಶಿಸ್ತಿನಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಸಿಬಿಎಫ್‌ಸಿ ಸಿಇಒ ರಾಜೇಂದ್ರ ಸಿಂಗ್ ಅವರು ಈ ಹೊಸ ಆದೇಶಕ್ಕೆ ಸಹಿ ಹಾಕಿದ್ದಾರೆ. ಇನ್ಮುಂದೆ ಸಿನಿಮಾದ ಸಂಪೂರ್ಣ ಕೆಲಸಗಳು ಮುಗಿದ ನಂತರವೇ ಸೆನ್ಸಾರ್‌ಗೆ ಅರ್ಜಿ ಸಲ್ಲಿಸಬೇಕು. ಅರ್ಧ ಸಂಕಲನವಾದ ಅಥವಾ ರಫ್ ಕಟ್ ಸಿನಿಮಾಗಳನ್ನು ಬೋರ್ಡ್ ಸ್ವೀಕರಿಸುವುದಿಲ್ಲ. ಚಿತ್ರದ ಪೂರ್ಣ ಆವೃತ್ತಿಯನ್ನು ಮಾತ್ರ ಪರಿಶೀಲನೆಗೆ ತರಬೇಕು ಎಂದು ಸೂಚಿಸಲಾಗಿದೆ.
ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಧ್ವನಿ ಸಂಪೂರ್ಣವಾಗಿ ಮುಗಿದಿರಬೇಕು. ಗ್ರಾಫಿಕ್ಸ್ ಮತ್ತು ವಿಶುವಲ್ ಎಫೆಕ್ಟ್ಸ್ ಕೆಲಸಗಳು ಪೂರ್ಣಗೊಂಡಿರಬೇಕು. ಸಿನಿಮಾದ ಸಬ್‌ಟೈಟಲ್ಸ್ ಸಹ ಸಿದ್ಧವಾಗಿರಬೇಕು. ತಾತ್ಕಾಲಿಕ ಮ್ಯೂಸಿಕ್ ಇರುವ ಸಿನಿಮಾಗಳನ್ನು ಸೆನ್ಸಾರ್ ಮಂಡಳಿ ನೇರವಾಗಿ ತಿರಸ್ಕರಿಸಲಿದೆ.
ಮೊದಲೇ ರಿಲೀಸ್ ಡೇಟ್ ಘೋಷಣೆ ಮಾಡಿದ್ದೇವೆ ಎಂದು ಚಿತ್ರತಂಡಗಳು ವಿಶೇಷ ಸವಲತ್ತು ಕೇಳುವಂತಿಲ್ಲ. ಪ್ರಚಾರದ ಕೆಲಸಗಳು ಅಥವಾ ಪ್ರೀಮಿಯರ್ ಶೋ ನೆಪ ಒಡ್ಡಿ ಸೆನ್ಸಾರ್ ಪ್ರಕ್ರಿಯೆಯನ್ನು ಬೇಗ ಮುಗಿಸಲು ಸಾಧ್ಯವಿಲ್ಲ. ಬೋರ್ಡ್ ಅಧಿಕೃತವಾಗಿ ಅನುಮೋದನೆ ಕೊಟ್ಟ ಬಳಿಕವೇ ಸಿನಿಮಾದ ಟೈಟಲ್ ಅಧಿಕೃತ ಎಂದು ಪರಿಗಣಿಸಲು ಸೂಚಿಸಲಾಗಿದೆ. ಯಾವುದಾದರೂ ವಿವಾದಾತ್ಮಕ ಟೈಟಲ್ ಇದ್ದರೆ ಅದನ್ನು ಬದಲಿಸುವಂತೆ ಬೋರ್ಡ್ ಸೂಚಿಸಬಹುದು.
ಇದನ್ನೂ ಓದಿ: ‘ಟಾಕ್ಸಿಕ್ ಚಿತ್ರದಲ್ಲಿ ಅತಿಯಾದ ಹಿಂಸೆ’; ಸೆನ್ಸಾರ್ ಮಂಡಳಿ ವಿರುದ್ಧ ಅಣ್ಣಾಮಲೈ ಕಿಡಿ
ದೊಡ್ಡ ಬಜೆಟ್ ಸಿನಿಮಾಗಳಿಗೆ ಈ ಹೊಸ ನಿಯಮದಿಂದ ದೊಡ್ಡ ಮಟ್ಟದ ಸವಾಲು ಎದುರಾಗಲಿದೆ. ರಿಲೀಸ್ ದಿನ ಹತ್ತಿರ ಬಂದರೂ ಸಿಜಿಐ ಮತ್ತು ಕಲರಿಂಗ್ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇನ್ಮುಂದೆ ಅಂತಹ ಚಿತ್ರತಂಡಗಳು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಬಹಳ ಬೇಗನೆ ಮುಗಿಸಬೇಕಾಗುತ್ತದೆ. ಇದರಿಂದ ಚಿತ್ರಮಂದಿರಗಳ ಮಾಲೀಕರಿಗೆ ಮತ್ತು ಪ್ರೇಕ್ಷಕರಿಗೆ ಪ್ರದರ್ಶನ ರದ್ದಾಗುವ ಚಿಂತೆ ಇನ್ಮುಂದೆ ತಪ್ಪಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.