ಇಂದಿನ ಕಾಲಕ್ಕೆ ತಕ್ಕಂತೆ ಸಿನಿಮಾ ಸೆನ್ಸಾರ್ಶಿಪ್ನಲ್ಲಿ ಕೆಲವು ಬದಲಾವಣೆಗಳನ್ನು ತರುವುದು ಅನಿವಾರ್ಯ ಎಂಬ ಅಭಿಪ್ರಾಯ ಆಗಾಗ ಕೇಳಿಬರುತ್ತಲೇ ಇದೆ. ಆ ಸಂಬಂಧ ಸಿನಿಮಾಟೋಗ್ರಾಫ್ ಕಾಯ್ದೆಗೆ ಕೆಲವು ತಿದ್ದುಪಡಿ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ. ತಿದ್ದುಪಡಿಯ ಕರಡು ಪ್ರತಿಯಲ್ಲಿ ಕೆಲವು ಮುಖ್ಯ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಸೆನ್ಸಾರ್ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ, ಪ್ರೇಕ್ಷಕರ ವಯಸ್ಸಿಗೆ ಅನುಗುಣವಾಗಿ ಸೆನ್ಸಾರ್ ಪ್ರಮಾಣಪತ್ರದಲ್ಲಿ ಹೆಚ್ಚಿನ ವರ್ಗೀಕರಣ, ಪೈರಸಿ ತಡಗೆ ಕಠಿಣ ಕ್ರಮ ಮುಂತಾದವು ಇದರಲ್ಲಿ ಪ್ರಮುಖ ಅಂಶಗಳಾಗಿವೆ.
ಸದ್ಯದ ಕಾನೂನಿನ ಪ್ರಕಾರ, ಒಮ್ಮೆ ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡಿದ ಬಳಿಕ ಅದನ್ನು ಮತ್ತೆ ಪ್ರಶ್ನಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಆದರೆ ಸಿನಿಮಾಟೋಗ್ರಾಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಆ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲು ಆಲೋಚಿಸಿದೆ. ಒಮ್ಮೆ ಸೆನ್ಸಾರ್ ಆದ ಚಿತ್ರವು ರಿಲೀಸ್ ಆದ ಬಳಿಕ ಜನರಿಂದ ತೀವ್ರ ಆಕ್ಷೇಪಕ್ಕೆ ಗುರಿಯಾದರೆ ಅಂತಹ ಸಿನಿಮಾವನ್ನು ಮತ್ತೊಮ್ಮೆ ಮರು ಸೆನ್ಸಾರ್ ಮಾಡಲು ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲಿದೆ.
ಇತ್ತೀಚಿನ ದಿನಗಳಲ್ಲಿ ‘ಪೊಗರು’ ಸಿನಿಮಾ ರಿಲೀಸ್ ಆದ ಬಳಿಕ ಬ್ರಾಹ್ಮಣ ಸಮುದಾಯದ ಜನರಿಂದ ಭಾರಿ ವಿರೋಧ ಎದುರಿಸಿತ್ತು. ಈ ಹಿಂದೆ ಕೂಡ ಅಂಥ ಘಟನೆಗಳು ನಡೆದ ಅನೇಕ ಉದಾಹರಣೆಗಳಿವೆ. ಈ ರೀತಿ ಸಂದರ್ಭಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಹೊಸ ತಿದ್ದುಪಡಿಯ ಮೂಲಕ ಮಾರ್ಗಗಳನ್ನು ಕಂಡುಕೊಳ್ಳಲು ಉದ್ದೇಶಿಸಿದೆ.
ಇಷ್ಟು ದಿನ ಯು, ಯು/ಎ ಮತ್ತು ಎ ಪ್ರಮಾಣಪತ್ರಗಳನ್ನು ನೀಡಲಾಗುತ್ತಿತ್ತು. ಯು ಎಂದರೆ ಸಾರ್ವತ್ರಿಕವಾಗಿ ಎಲ್ಲರೂ ವೀಕ್ಷಿಸಬಹುದು. ಯು/ಎ ಎಂದರೆ ಮಕ್ಕಳ ವೀಕ್ಷಣೆಗೆ ಪಾಲಕರ ಸಲಹೆ ಅಗತ್ಯ, ಎ ಎಂದರೆ ವಯಸ್ಕರು ಮಾತ್ರ ವೀಕ್ಷಿಸಬಹುದಾದ ಸಿನಿಮಾ. ಇದರ ಜೊತೆಗೆ ಈಗ ವೀಕ್ಷಕರ ವಯಸ್ಸಿನ ಆಧಾರದ ಮೇಲೆ ಇನ್ನಷ್ಟು ವರ್ಗೀಕರಣ ಮಾಡಲು ತೀರ್ಮಾನಿಸಲಾಗಿದೆ.
ಯು/ಎ7+ (7 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದು), ಯು/ಎ13+ (13 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದು) ಹಾಗೂ ಯು/ಎ16+ (16 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದು) ಎಂಬ ವರ್ಗೀಕರಣವನ್ನು ಸೇರಿಸಲು ನಿರ್ಧರಿಸಲಾಗಿದೆ. ಈ ಎಲ್ಲ ವರ್ಗೀಕರಣಗಳನ್ನು ಓಟಿಟಿ ಸಿನಿಮಾ ಮತ್ತು ವೆಬ್ ಸಿರೀಸ್ಗಳಿಗೂ ಅನ್ವಯಿಸಲು ಚಿಂತಿಸಲಾಗಿದೆ.
ಪೈರಸಿ ತಡೆಗೆ ಹೆಚ್ಚು ಕಠಿಣ ಕ್ರಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಪೈರಸಿ ಮಾಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಮೂರು ಲಕ್ಷಕ್ಕೂ ಅಧಿಕ ದಂಡ ವಿಧಿಸುವ ಬಗ್ಗೆ ಸಿನಿಮಾಟೋಗ್ರಾಫ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಜುಲೈ 2ರವರೆಗೂ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ.
ಇದನ್ನೂ ಓದಿ: