Roberrt: ‘ರಾಬರ್ಟ್’ ಚಿತ್ರಕ್ಕೆ U/A ಪ್ರಮಾಣಪತ್ರ! ‘ಪೊಗರು’ ಕಿರಿಕ್ ನಂತರ ದರ್ಶನ್ ಚಿತ್ರದಲ್ಲಿ ಸೆನ್ಸಾರ್ ಮಂಡಳಿ ಕಣ್ಣಿಟ್ಟ ಅಂಶಗಳೇನು?
Roberrt Kannada Movie: ‘ಪೊಗರು’ ಸಿನಿಮಾದಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂಬ ಕಾರಣಕ್ಕೆ ವಿವಾದ ಭುಗಿಲೆದ್ದ ಬಳಿಕ ಸಿನಿಮಾಗಳ ಸೆನ್ಸಾರ್ ಪ್ರಕ್ರಿಯೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ‘ರಾಬರ್ಟ್’ ಚಿತ್ರಕ್ಕೆ ಯಾವ ಪ್ರಮಾಣಪತ್ರ ಸಿಗಬಹುದು ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್’ ಮಾ.11ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವ ಪ್ರಮಾಣಪತ್ರ ಸಿಗಬಹುದು ಎಂಬ ಕೌತುಕ ಎಲ್ಲರಲ್ಲೂ ಮನೆ ಮಾಡಿತ್ತು. ಬುಧವಾರ (ಮಾ.3) ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರದಲ್ಲಿನ ಕೆಲವು ಸೂಕ್ಷ್ಮ ವಿಚಾರಗಳಿಗೆ ಕತ್ತರಿಹಾಕಿ, U/A ಪ್ರಮಾಣಪತ್ರ ನೀಡಲಾಗಿದೆ.
ಇತ್ತೀಚೆಗೆ ‘ಪೊಗರು’ ಸಿನಿಮಾಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿಬಂದಿತ್ತು. ಹಾಗಾದರೆ ಸೆನ್ಸಾರ್ ಸದಸ್ಯರು ಅಂಥ ದೃಶ್ಯಗಳಿಗೆ ಯಾಕೆ ಅನುಮತಿ ನೀಡಿದರು ಎಂಬ ಚರ್ಚೆ ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈಗ ‘ರಾಬರ್ಟ್’ ಚಿತ್ರಕ್ಕೆ ಯಾವ ರೀತಿ ಸೆನ್ಸಾರ್ ಮಾಡಲಾಗುತ್ತದೆ ಎಂಬ ಕುತೂಹಲ ಸಹಜವಾಗಿಯೇ ಸಿನಿಪ್ರೇಮಿಗಳ ಮನದಲ್ಲಿ ಮೂಡಿತ್ತು. ಅಷ್ಟಕ್ಕೂ ಈ ಸಿನಿಮಾದಲ್ಲಿ ಕಿರಿಕ್ ಆಗಬಹುದಾದ ಅಂಶಗಳು ಏನಾದರೂ ಇವೆಯೇ? ಈ ಪ್ರಶ್ನೆಗೆ ಸಿನಿಮಾ ರಿಲೀಸ್ ಆದ ಬಳಿಕವೇ ಉತ್ತರ ಸಿಗಬೇಕು.
CENSORED!! #RoberrtGetsUA #RoberrtStormMarch11 @dasadarshan | @TharunSudhir | @umap30071 | @StarAshaBhat | @ArjunJanyaMusic |@aanandaaudio pic.twitter.com/KpJAmdxd1Y
— Umapathy Films (@UmapathyFilms) March 4, 2021
ಸಿನಿಮಾದಲ್ಲಿ ಧಾರ್ಮಿಕ ವಿಚಾರಗಳು ಇದ್ದರಂತೂ ಸೆನ್ಸಾರ್ ಸದಸ್ಯರು ತುಸು ಹೆಚ್ಚಿನ ಕಾಳಜಿ ವಹಿಸಬೇಕಾದ ಪರಿಸ್ಥಿತಿ ಇದೆ. ಸಿನಿಮಾದ ಶೀರ್ಷಿಕೆ ‘ರಾಬರ್ಟ್’. ಆದರೆ ದರ್ಶನ್ ಒಂದು ಹಾಡಿನಲ್ಲಿ ಆಂಜನೇಯನ ವೇಷ ಧರಿಸಿ ಕುಣಿದಿರುವುದರಿಂದ ಕೌತುಕ ಹೆಚ್ಚಿದೆ. ಆ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದುಗಳ ಪವಿತ್ರ ಕ್ಷೇತ್ರ ಕಾಶಿಯಲ್ಲಿ ಈ ಚಿತ್ರದ ಹಲವು ದೃಶ್ಯಗಳ ಶೂಟಿಂಗ್ ಮಾಡಲಾಗಿದೆ. ಇಂಥ ಧಾರ್ಮಿಕ ವಿಚಾರಗಳು ಇರುವ ದೃಶ್ಯಗಳನ್ನು ಸೆನ್ಸಾರ್ ಸದಸ್ಯರು ಕೂಲಂಕಶವಾಗಿ ಪರಿಶೀಲಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಚಿತ್ರದ ಬಿಡುಗಡೆ ನಂತರ ಯಾವುದೇ ವಿವಾದಗಳಿಗೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ಸಂಭಾಷಣೆಯಲ್ಲಿನ ಕೆಲವು ಪದಗಳನ್ನು ಬದಲಾಯಿಸಲು ಸೂಚಿಸಲಾಗಿದೆ ಎನ್ನಲಾಗಿದೆ. ಅವುಗಳಿಗೆ ಚಿತ್ರತಂಡ ಕೂಡ ಒಪ್ಪಿಕೊಂಡಿದೆ.
ದರ್ಶನ್ ಅವರನ್ನು ದೊಡ್ಡಪರದೆಯಲ್ಲಿ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಕಳೆದ ವರ್ಷವೇ ಈ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ ಲಾಕ್ಡೌನ್ ಕಾರಣಕ್ಕೆ ತಡವಾಯಿತು. ತಾವು ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ಹೈಲೈಟ್ ಆಗಿದ್ದ ರಾಬರ್ಟ್ ಎಂಬ ಅತಿಥಿ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ‘ರಾಬರ್ಟ್’ ಚಿತ್ರಕ್ಕೆ ಕಥೆ ಹೆಣೆದಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಆ ಕಾರಣದಿಂದ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ದರ್ಶನ್ಗೆ ಜೋಡಿಯಾಗಿ ಆಶಾ ಭಟ್ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಸಖತ್ ಮೆಚ್ಚುಗೆ ಪಡೆದುಕೊಂಡಿವೆ.
ಇದನ್ನೂ ಓದಿ: Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಲಿರುವ ಐಷಾರಾಮಿ ಕಾರು ಯಾವುದು ಗೊತ್ತಾ?