ಕೊರೊನಾ ವೈರಸ್ ಮಹಾಮಾರಿಯ ಮರಣ ಮೃದಂಗ ಮುಂದುವರಿದಿದೆ. ಸಿನಿಮಾ ಕೆಲಸಗಳ ಸಲುವಾಗಿ ಸದಾ ಕಾಲ ಹೊರಗಡೆ ಇರುವ ಸೆಲೆಬ್ರಿಟಿಗಳಿಗೆ ಕೊವಿಡ್ ಕಾಟ ಕೊಡುತ್ತಿದೆ. ಮರಾಠಿ ಚಿತ್ರರಂಗದ ಖ್ಯಾತ ನಟಿ ಅಭಿಲಾಷಾ ಪಾಟಿಲ್ ಅವರು ಕೊರೊನಾದಿಂದ ಮೃತರಾಗಿದ್ದಾರೆ ಪತಿ ಮತ್ತು ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಟನೆಯ ಛಿಛೋರೆ ಚಿತ್ರದಲ್ಲಿ ಅಭಿಲಾಷಾ ಅಭಿನಯಿಸಿದ್ದರು. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ಅಭಿಲಾಷಾ ಅವರು ಬನಾರಸ್ನಲ್ಲಿ ಶೂಟಿಂಗ್ ಮಾಡುತ್ತಿದ್ದರು. ಅಲ್ಲಿಂದ ಹಿಂದಿರುಗಿ ಬಂದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೊವಿಡ್ ಪಾಸಿಟಿವ್ ಎಂಬುದು ತಿಳಿದುಬಂತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಅವರು ಮೇ 4ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಿಧನರಾದರು ಎಂದು ಅವರ ಸ್ನೇಹಿತ ಕುಶಾಲ್ ತಿಳಿಸಿದ್ದಾರೆ.
ಅಭಿಲಾಷಾ ಅವರ ನಿಧನದ ಸುದ್ದಿ ಕೇಳಿ ಚಿತ್ರರಂಗದ ಅನೇಕರಿಗೆ ನೋವುಂಟಾಗಿದೆ. ಅಭಿಲಾಷಾ ನಟಿಸಿದ್ದ ಪರ್ವಾಸ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಶಶಾಂಕ್ ಉದಪುರಕರ್ ಅವರು ಕಂಬನಿ ಮಿಡಿದ್ದಾರೆ. ‘ಅಭಿಲಾಷಾ ಅವರು ತುಂಬ ಪರಿಶ್ರಮ ಪಡುವಂತಹ ಕಲಾವಿದೆ ಆಗಿದ್ದರು. ಎನರ್ಜಿಟಿಕ್ ಆಗಿದ್ದರು. ನೋವು ತೋಡಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಶಶಾಂಕ್ ಹೇಳಿದ್ದಾರೆ.
ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್ಗೆ ಬಲಿಯಾದರು. ತಮಿಳು ನಟ ಪಾಂಡು ಅವರು ಮೇ 6ರಂದು ನಿಧನರಾದರು. ಕಾಲಿವುಡ್ ನಿರ್ದೇಶಕ ಕೆ.ವಿ. ಆನಂದ್, ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್. ಮಂಜುನಾಥ್, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್, ಪೋಸ್ಟರ್ ಡಿಸೈನರ್ ಮಸ್ತಾನ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಮುಂತಾದವರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ.
ಇದನ್ನೂ ಓದಿ:
ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ
Renuka Sharma Death: ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ