AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿಯಾದ ಬಳಿಕ ‘ದಳಪತಿ’ ವಿಜಯ್​ಗೆ ಮೊದಲ ಜನ್ಮದಿನ; ನಟನ ಆಸ್ತಿ ಎಷ್ಟು?

Thalapathy Vijay Birthday: ಮುಖ್ಯಮಂತ್ರಿ ವಿಜಯ್ ತಮ್ಮ ಮೊದಲ ಹುಟ್ಟುಹಬ್ಬವನ್ನು ಸಿಎಂ ಆಗಿ ಆಚರಿಸಿಕೊಳ್ಳುತ್ತಿದ್ದಾರೆ. ನಟನಾಗಿ ಅಧಿಪತ್ಯ ಸಾಧಿಸಿ, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ಇವರು, ಭಾರತೀಯ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯರಲ್ಲೊಬ್ಬರು. 500 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ ವಿಜಯ್, ಐಷಾರಾಮಿ ಕಾರುಗಳು, ಹಾಲಿವುಡ್ ಶೈಲಿಯ ಬಂಗ್ಲೆ ಹೊಂದಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ‘ದಳಪತಿ’ ವಿಜಯ್​ಗೆ ಮೊದಲ ಜನ್ಮದಿನ; ನಟನ ಆಸ್ತಿ ಎಷ್ಟು?
ವಿಜಯ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 22, 2026 | 10:32 AM

Share

ಕಾಲಿವುಡ್ ಚಿತ್ರರಂಗದಲ್ಲಿ ಅಧಿಪತ್ಯ ಸ್ಥಾಪಿಸಿ, ಇತ್ತೀಚೆಗಷ್ಟೇ ತಮಿಳುನಾಡಿನ ಗದ್ದುಗೆ ಏರಿದ ಜನಪ್ರಿಯ ನಟ, ಪ್ರಸ್ತುತ ಸಿಎಂ ವಿಜಯ್ ಅವರು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ ಇದಾಗಿರುವುದರಿಂದ ಇಡೀ ರಾಜ್ಯಾದ್ಯಂತ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಇದೇ ಸುದಿನದ ಅಂಗವಾಗಿ ‘ಜನ ನಾಯಗನ್’ ರಿಲೀಸ್ ಬಗ್ಗೆ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಗಳಿಕೆಯಲ್ಲಿ ವಿಜಯ್ ನಂಬರ್ ಒನ್

ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಡಿಮ್ಯಾಂಡ್ ಹೊಂದಿರುವ ಅಗ್ರ ಐದು ತಾರೆಯರ ಪಟ್ಟಿಯಲ್ಲಿ ವಿಜಯ್ ಮುಂಚೂಣಿಯಲ್ಲಿದ್ದಾರೆ. ವರ್ಷಕ್ಕೆ ಕೇವಲ ಒಂದೆರಡು ಪ್ರಾಜೆಕ್ಟ್‌ಗಳಿಗೆ ಮಾತ್ರ ಸಹಿ ಹಾಕುವ ಇವರು, ಪ್ರತಿ ಸಿನಿಮಾಗೆ ನೂರು ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಚಾರ್ಜ್ ಮಾಡುತ್ತಾರೆ. ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕಲೆಕ್ಷನ್ ಮಾಡುವುದು ಇವರಿಗೆ ಸಲೀಸಾಗಿದ್ದು, ನಿರ್ಮಾಪಕರು ಕೂಡ ಇವರ ತಾರಾಮೌಲ್ಯಕ್ಕೆ ತಕ್ಕಂತೆ ಹಣ ಹೂಡಲು ಹಿಂದೆಮುಂದೆ ನೋಡುವುದಿಲ್ಲ.

ಸದ್ಯದ ಲೆಕ್ಕಾಚಾರಗಳ ಪ್ರಕಾರ ಇವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 500 ಕೋಟಿ ರೂಪಾಯಿಗಳನ್ನು ದಾಟುತ್ತದೆ. ಕೇವಲ ಬಣ್ಣದ ಪ್ರಪಂಚ ಮಾತ್ರವಲ್ಲದೆ ಬೇರೆ ಬೇರೆ ಬಿಸಿನೆಸ್‌ಗಳಲ್ಲೂ ಹೂಡಿಕೆ ಮಾಡಿರುವ ಇವರ ವಾರ್ಷಿಕ ಸಂಪಾದನೆ 300 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ. ತಾವು ಗಳಿಸುವ ಕೋಟ್ಯಂತರ ರೂಪಾಯಿಗಳಲ್ಲಿ ದೊಡ್ಡ ಮೊತ್ತವನ್ನು ಸಾಮಾಜಿಕ ಸೇವೆಗಳಿಗಾಗಿ ವಿನಿಯೋಗಿಸುತ್ತಾರೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ನಿಧಿ ಸ್ಥಾಪಿಸಿರುವ ಇವರು, ಅಂಗವಿಕಲ ಹಾಗೂ ಪ್ರತಿಭಾವಂತ ಮಕ್ಕಳಿಗೆ ಆಸರೆಯಾಗಿದ್ದಾರೆ. ಜನರ ಮೇಲಿರುವ ಇದೇ ಕಾಳಜಿ ಇಂದು ಅವರನ್ನು ಸಿಎಂ ಕುರ್ಚಿಯವರೆಗೆ ತಂದು ನಿಲ್ಲಿಸಿದೆ.

ಗ್ಯಾರೇಜ್‌ನಲ್ಲಿವೆ ದುಬಾರಿ ಕಾರುಗಳು

ವೈಯಕ್ತಿಕ ಜೀವನದಲ್ಲಿ ಸಾದಾಸೀದಾ ಉಡುಪು ಧರಿಸಿ, ಸರಳ ಊಟ ಇಷ್ಟಪಡುವ ವಿಜಯ್ ಅವರಿಗೆ ಐಷಾರಾಮಿ ಕಾರುಗಳ ಕ್ರೇಜ್ ಹೆಚ್ಚಿದೆ. ಇವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್, ಬಿಎಂಡಬ್ಲು 5 ಸೀರೀಸ್, ಫೋರ್ಡ್ ಮಸ್ತಾಂಗ್ ಹಾಗೂ ಆಡಿ ಎ8 ನಂತಹ ಅತ್ಯಂತ ದುಬಾರಿ ಬ್ರ್ಯಾಂಡ್‌ಗಳ ಕಾರುಗಳಿವೆ. ಈ ಹಿಂದೆ ಇವರ ರೋಲ್ಸ್ ರಾಯ್ಸ್ ಕಾರಿನ ತೆರಿಗೆ ವಿನಾಯಿತಿ ವಿಚಾರದಲ್ಲಿ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು ಭಾರಿ ಚರ್ಚೆಯಾಗಿತ್ತು. ಇದರ ಜೊತೆಗೆ ಬಿಎಂಡಬ್ಲು 7 ಸೀರೀಸ್, ಎಕ್ಸ್ 6, ಬೆಂಜ್ ಜಿಎಲ್‌ಎ, ವೋಲ್ವೋ ಎಕ್ಸ್‌ಸಿ 90 ಹಾಗೂ ಇನ್ನೋವಾ ವೆಲ್‌ಫೈರ್ ವಾಹನಗಳೂ ಇವರ ಬಳಿ ಇವೆ.

ಚೆನ್ನೈನಲ್ಲಿದೆ ಹಾಲಿವುಡ್ ಶೈಲಿಯ ಬಂಗ್ಲೆ

ಚೆನ್ನೈನ ಕಾಸುವರೈನ್ ಡ್ರೈವ್ ರಸ್ತೆಯಲ್ಲಿ ವಿಜಯ್ ಅವರಿಗೆ ಸೇರಿದ ಸುಂದರವಾದ ಸಮುದ್ರ ತೀರದ ಬಂಗ್ಲೆ ಇದೆ. ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರ ಬೀಚ್ ಸೈಡ್ ಮನೆಯಿಂದ ಪ್ರೇರಣೆ ಪಡೆದು ವಿಜಯ್ ಈ ಐಷಾರಾಮಿ ನಿವಾಸವನ್ನು ವಿನ್ಯಾಸಗೊಳಿಸಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲೂ ಭಾರಿ ಹೂಡಿಕೆ ಮಾಡಿರುವ ಇವರ ಇದೇ ನಿವಾಸದ ಮೇಲೆ 2020ರ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಮಾಡಲು ಬಿಡಲ್ಲ: ವಾಟಾಳ್ ಕ್ಯಾತೆ

‘ಜನ ನಾಯಗನ್’ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ತಮ್ಮ ನೆಚ್ಚಿನ ನಟ ಹಾಗೂ ಪ್ರೀತಿಯ ಮುಖ್ಯಮಂತ್ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಚಿತ್ರದ ಹೊಸ ಅಪ್‌ಡೇಟ್ ನೋಡಲು ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಕಾಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us