ವೈದ್ಯರನ್ನು ರಾಕ್ಷಸರು, ಕಳ್ಳರು ಎಂದ ನಟ ಸುನೀಲ್ ಪಾಲ್ ವಿರುದ್ಧ ಎಫ್ಐಆರ್
ಈಗಲೂ ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಈ ಕಷ್ಟದ ಸಂದರ್ಭದಲ್ಲಿ ಬಡಜನರು ನೋವು ಅನುಭವಿಸುವಂತೆ ಮಾಡಲಾಗಿದೆ. ಕೇವಲ ಶೇ.10ರಷ್ಟು ವೈದ್ಯರು ಮಾತ್ರ ಜನರ ಸೇವೆ ಮಾಡುತ್ತಿದ್ದಾರೆ ಎಂದು ಸುನೀಲ್ ಪಾಲ್ ಹೇಳಿದ್ದಾರೆ.
ಕೊರೊನಾ ಹಾವಳಿಗೆ ದೇಶದ ಜನರು ತತ್ತರಿಸಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಆಸ್ಪತ್ರೆಯ ಎದುರು ಸೋಂಕಿತರ ಕುಟುಂಬದವರ ಆಕ್ರಂದನ ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ ಖ್ಯಾತ ಹಾಸ್ಯ ನಟ ಸುನೀಲ್ ಪಾಲ್ ಅವರು ವೈದ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಲವೇ ದಿನಗಳ ಹಿಂದೆ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ವೈದ್ಯರನ್ನು ಕಳ್ಳರು ಮತ್ತು ರಾಕ್ಷಸರು ಎಂದು ಸುನೀಲ್ ಪಾಲ್ ಹೇಳಿದ್ದರು.
ಸುನೀಲ್ ಪಾಲ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಡಾ. ಸುಷ್ಮಿತಾ ಭಟ್ನಾಗರ್ ಅವರು ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಶೇ.90ರಷ್ಟು ವೈದ್ಯರು ಕಳ್ಳರು. ಅವರೆಲ್ಲ ಕೊವಿಡ್ ಸಂದರ್ಭವನ್ನು ತಮ್ಮ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಿಕಿತ್ಸೆ ನೆಪದಲ್ಲಿ ಬಡವರನ್ನು ಲೂಟಿ ಮಾಡುತ್ತಿದ್ದಾರೆ. ಎಲ್ಲ ವೈದ್ಯರು ರಾಕ್ಷಸರ ವೇಷ ಧರಿಸಿದ್ದಾರೆ. ಅಂಥ ಬಟ್ಟೆ (PPE kit) ಧರಿಸಿ, ಜನರನ್ನು ಹೆದರಿಸಿ ಸಾಯಿಸುತ್ತಾರೆ. ಅಲ್ಲದೇ ಮಾನವರ ಅಂಗಾಗ ಕಳ್ಳತನದಲ್ಲೂ ವೈದ್ಯರು ತೊಡಗಿಕೊಂಡಿದ್ದಾರೆ’ ಎಂದು ವಿಡಿಯೋದಲ್ಲಿ ಸುನೀಲ್ ಹೇಳಿದ್ದಾರೆ ಎಂದು ತಮ್ಮ ದೂರಿನಲ್ಲಿ ಸುಷ್ಮಿತಾ ಭಟ್ನಾಗರ್ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಸುನೀಲ್ ಪಾಲ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಂಗ್ರಹ ಮಾಡಲಾಗುತ್ತಿದೆ. ಬಳಿಕ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿವೆ. ಆದರೆ ಈ ಎಲ್ಲ ಆರೋಪಗಳನ್ನು ಸುನೀಲ್ ಪಾಲ್ ತಳ್ಳಿ ಹಾಕಿದ್ದಾರೆ.
‘ನಾನು ಇನ್ನೊಂದು ವಿಡಿಯೋ ಕೂಡ ಪೋಸ್ಟ್ ಮಾಡಿದ್ದೆ. ಯಾರಿಗಾದರೂ ನೋವಾಗಿದ್ದರೆ ಅದರಲ್ಲಿ ಕ್ಷಮೆ ಕೇಳಿದ್ದೆ. ಈಗಲೂ ನಾನು ನನ್ನ ಹೇಳಿಕೆ ಬದ್ಧನಾಗಿದ್ದೇನೆ. ಈ ಕಷ್ಟದ ಸಂದರ್ಭದಲ್ಲಿ ಬಡಜನರು ನೋವು ಅನುಭವಿಸುವಂತೆ ಮಾಡಲಾಗಿದೆ. ಕೇವಲ ಶೇ.10ರಷ್ಟು ವೈದ್ಯರು ಮಾತ್ರ ಜನರ ಸೇವೆ ಮಾಡುತ್ತಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ವೈದ್ಯರಿಗೆ ನನ್ನ ಮಾತಿನಿಂದ ನೋವಾಗುವುದಿಲ್ಲ. ಇಲ್ಲಿಯವರೆಗೆ ಪೊಲೀಸರಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ’ ಎಂದು ಸುನೀಲ್ ಪಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ