ತೆಲುಗಿನ ಯೂಟ್ಯೂಬರ್ಗಳು ಒಂದಲ್ಲ ಒಂದು ವಿವಾದಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಪರಸ್ಪರ ಬೀದಿ ಜಗಳ ಮಾಡಿಕೊಳ್ಳುವುದು, ವಿಡಿಯೋಗಾಗಿ ಮೋಸ ಮಾಡುವುದು, ಬೆದರಿಕೆ ಹಾಕುವುದು, ವಿಡಿಯೋಗಳಲ್ಲಿ ಅವಾಚ್ಯ ಶಬ್ದಗಳನ್ನು ಪರಸ್ಪರರ ಬಗ್ಗೆ ಬಳಸುವುದು, ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡುವುದು ಹೀಗೆ ಹಲವು ಪ್ರಕರಣಗಳಲ್ಲಿ ತೆಲುಗಿನ ಕೆಲ ಯೂಟ್ಯೂಬರ್ಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ಒಬ್ಬ ತೆಲುಗು ಯೂಟ್ಯೂಬರ್ ಅಂತೂ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಇದೀಗ ತೆಲುಗಿನ ಜನಪ್ರಿಯ ಯೂಟ್ಯೂಬರ್ ಒಬ್ಬನ ಮೇಲೆ ಪ್ರಕರಣ ದಾಖಲಾಗಿರುವುದಲ್ಲದೆ ಟಾಲಿವುಡ್ನಲ್ಲಿ ಯೂಟ್ಯೂಬರ್ ಮಾಡಿರುವ ಕಮೆಂಟ್ ಬಗ್ಗೆ ತೀವ್ರ ಆಕ್ಷೇಪ ಕೇಳಿ ಬಂದಿದೆ.
ಹಿಂದಿಯ ಬಹು ಜನಪ್ರಿಯ ಯೂಟ್ಯೂಬರ್ ತನ್ಮಯ್ ಭಟ್, ‘ಮೀಮ್ ರಿವ್ಯೂ’ ಹೆಸರಿನ ಫಾರ್ಮ್ಯಾಟ್ ಒಂದನ್ನು ಪ್ರಾರಂಭಿಸಿ ಅದರ ಮೇಲೆ ವಿಡಿಯೋಗಳನ್ನು ಮಾಡಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಗೆಳೆಯರನ್ನು ವಿಡಿಯೋ ಕಾನ್ಫರೆನ್ಸ್ನಲ್ಲಿ ಇರಿಸಿಕೊಂಡು ಒಂದೊಂದೇ ಮೀಮ್ಗಳನ್ನು ನೋಡುತ್ತಾ ಆ ಮೀಮ್ಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ವ್ಯಕ್ತಪಡಿಸುವ ಕಾರ್ಯಕ್ರಮವದು.
ಇದನ್ನೂ ಓದಿ:ದುಬೈ ಯೂಟ್ಯೂಬರ್ ಜೊತೆ ‘ಗಂಗೆ ಬಾರೆ ತುಂಗೆ ಬಾರೆ’ ನಟಿಯ ನಿಶ್ಚಿತಾರ್ಥ?
ಅದೇ ಮಾದರಿಯನ್ನು ಕೆಲವು ಪ್ರಾದೇಶಿಕ ಭಾಷೆಯ ಯೂಟ್ಯೂಬರ್ಗಳು ಸಹ ಬಳಸುತ್ತಿದ್ದು, ತೆಲುಗಿನ ಯೂಟ್ಯೂಬರ್ ಪ್ರಣೀತ್ ಹನುಮಂತು ಎಂಬಾತನೂ ಸಹ ತನ್ನ ಕೆಲವು ಗೆಳೆಯರೊಟ್ಟಿಗೆ ಮೀಮ್ ರಿವ್ಯೂ ಮಾಡುತ್ತಿದ್ದ. ಇತ್ತೀಚೆಗಿನ ವಿಡಿಯೋ ಒಂದರಲ್ಲಿ ಪ್ರಣೀತ್, ತಂದೆ-ಮಗಳ ವಿಡಿಯೋ ಒಂದನ್ನು ಪ್ರದರ್ಶಿಸಿ, ಆ ವಿಡಿಯೋ ಬಗ್ಗೆ ತೀರ ಕೆಟ್ಟದಾಗಿ ವಿಶೇಷವಾಗಿ ತಂದೆ-ಮಗಳ ಬಗ್ಗೆ ಲೈಂಗಿಕತೆ ಜೋಕುಗಳನ್ನು ಮಾಡಿದ್ದ. ಪ್ರಣೀತ್ನ ಆ ವಿಡಿಯೋ ವೈರಲ್ ಆಗಿದ್ದು, ಪ್ರಣೀತ್ ಹನುಮಂತು ಹಾಗೂ ಆತನ ಗೆಳೆಯರ ಈ ವಿಕೃತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ತೆಲುಗಿನ ನಟರಾದ ಸಾಯಿ ಧರಂ ತೇಜ್, ಪವನ್ ಕಲ್ಯಾಣ್ ಪತ್ನಿ ರೇಣು ದೇಸಾಯಿ, ಮಂಚು ಮನೋಜ್, ನಾರಾ ರೋಹಿತ್ ಇನ್ನಿತರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಣಿತ್ ಹನುಮಂತು ಅನ್ನು ತನ್ನ ಸಿನಿಮಾದಲ್ಲಿ ಹಾಕಿಕೊಂಡಿದ್ದ ನಟ ಸುಧೀರ್ ಬಾಬು, ತಾನು ಪ್ರಣೀತ್ನನ್ನು ಸಿನಿಮಾದಲ್ಲಿ ಹಾಕಿಕೊಂಡಿರುವುದಕ್ಕೆ ಕ್ಷಮಾಪಣೆಯನ್ನೂ ಸಹ ಕೇಳಿದ್ದಾರೆ. ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಎದುರಾಗುತ್ತಿದ್ದಂತೆ ಪ್ರಣೀತ್ ಕ್ಷಮಾಪಣೆ ಕೇಳಿದ್ದಾರೆ. ಆದರೆ ಪ್ರಣೀತ್ ಹಾಗೂ ಆತನ ಗೆಳೆಯರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.