‘ಟಾಕ್ಸಿಕ್’ಗೆ ಹೆದರಲ್ಲ, ಸಿನಿಮಾ ರಿಲೀಸ್ ಮಾಡಿಯೇ ಸಿದ್ಧ: ಹಠಕ್ಕೆ ಬಿದ್ದ ನಟ

Yash's toxic movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದಿನ ವರ್ಷ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ದೊಡ್ಡ ಸಿನಿಮಾಗಳು ‘ಟಾಕ್ಸಿಕ್’ ಜೊತೆಗೆ ಬಾಕ್ಸ್ ಆಫೀಸ್ ಕ್ಲ್ಯಾಷ್ ತಪ್ಪಿಸಿಕೊಳ್ಳಲು ಈಗಿನಿಂದಲೇ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ನಟ, ನನ್ನ ಸಿನಿಮಾವನ್ನು ‘ಟಾಕ್ಸಿಕ್’ ಎದುರೇ ಬಿಡುಗಡೆ ಮಾಡುತ್ತೀನಿ ಎಂದು ಹಠಕ್ಕೆ ಬಿದ್ದಂತಿದೆ.

‘ಟಾಕ್ಸಿಕ್’ಗೆ ಹೆದರಲ್ಲ, ಸಿನಿಮಾ ರಿಲೀಸ್ ಮಾಡಿಯೇ ಸಿದ್ಧ: ಹಠಕ್ಕೆ ಬಿದ್ದ ನಟ
Yash Toxic

Updated on: Nov 05, 2025 | 3:21 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ಬಹಳ ಹಿಂದೆಯೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ‘ಟಾಕ್ಸಿಕ್’ ಸಿನಿಮಾ ಬರುತ್ತಿರುವ ಕಾರಣ ಹಲವು ದೊಡ್ಡ ಸಿನಿಮಾಗಳೇ ಪಕ್ಕಕ್ಕೆ ಸರಿದುಕೊಂಡಿದ್ದು, ‘ಟಾಕ್ಸಿಕ್’ ಜೊತೆಗೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗದಂತೆ ಎಚ್ಚರಿಕೆ ವಹಿಸುತ್ತಿವೆ. ಆದರೆ ಇಲ್ಲೊಬ್ಬ ನಟ, ‘ಟಾಕ್ಸಿಕ್’ ಜೊತೆಗೇ ಸಿನಿಮಾ ಬಿಡುಗಡೆ ಮಾಡಿಯೇ ಸಿದ್ಧ ಎಂದು ಹಠಕ್ಕೆ ಬಿದ್ದಿದ್ದಾರೆ.

ಅಡವಿ ಶೇಷ್ ತೆಲುಗಿನ ಜನಪ್ರಿಯ ನಟ. ‘ಮೇಜರ್’, ‘ಗೂಡಚಾರಿ’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ಅಡವಿ ಶೇಷ್ ನಟಿಸಿದ್ದಾರೆ. ಇದೀಗ ಅಡವಿ ಶೇಷ್ ‘ಡಕೈಟ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಮೃಣಾಲ್ ಠಾಕೂರ್ ಈ ಸಿನಿಮಾದ ನಾಯಕಿ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿಲನ್. ಈ ಸಿನಿಮಾ ಸಹ ‘ಟಾಕ್ಸಿಕ್’ ಜೊತೆಗೆ ಮಾರ್ಚ್ 19 ರಂದೇ ತೆರೆಗೆ ಬರಲಿದೆಯಂತೆ. ಯುಗಾದಿ, ಗುಡಿ ಪಡ್ವಾ ಮತ್ತು ಈದ್ ಹಬ್ಬಗಳು ಅದೇ ಸಮಯದಲ್ಲಿ ಇರುವ ಕಾರಣ ‘ಡಕೈಟ್’ ಸಿನಿಮಾ ಸಹ ಅದೇ ಸಮಯದಲ್ಲಿ ತೆರೆಗೆ ಬರಲು ಸಜ್ಜಾಗಿದೆ.

‘ಟಾಕ್ಸಿಕ್’ ಸಿನಿಮಾದ ಜೊತೆಗೆ ಬಿಡುಗಡೆ ಆಗುವುದರಿಂದ ಸಿನಿಮಾಕ್ಕೆ ಸಮಸ್ಯೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅಡವಿ ಶೇಷ್, ‘ನಮಗೆ ‘ಟಾಕ್ಸಿಕ್’ ಬಗ್ಗೆ ಭಯ ಇಲ್ಲ. ನಾನು ಅಂಡರ್​ಡಾಗ್ ಆಗಿಯೇ ಗೆದ್ದುಕೊಂಡು ಬಂದವನು. ಜನರಿಗೆ ಸರ್ಪ್ರೈಸ್ ನೀಡುತ್ತಲೇ ಬಂದಿದ್ದೇನೆ. ಅಲ್ಲದೆ, 2018ರ ನೆನಪು ನನಗೆ ಚೆನ್ನಾಗಿ ಇದೆ, ‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಶಾರುಖ್ ಖಾನ್ ನಟನೆಯ ‘ಜೀರೊ’ ಸಿನಿಮಾದ ಎದುರು ಬಿಡುಗಡೆ ಆಗಿತ್ತು, ಸಿನಿಮಾ ವ್ಯಾಕರಣವನ್ನೇ ಬದಲಾಯಿಸಿತು’ ಎಂದಿದ್ದಾರೆ. ಆ ಮೂಲಕ ತಾವು ‘ಟಾಕ್ಸಿಕ್’ ಎದುರು ಬಿಡುಗಡೆ ಮಾಡಿ ಸಿನಿಮಾ ಗೆಲ್ಲಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ಹೇಗಿತ್ತು ನೋಡಿ ಯಶ್ ಮಗ ಯಥರ್ವ್ ಬರ್ತ್​ಡೇ ಸೆಲೆಬ್ರೇಷನ್; ಇಲ್ಲಿದೆ ವಿಡಿಯೋ

ಮಾತು ಮುಂದುವರೆಸಿ, ‘ಒಟ್ಟಿಗೆ ಸಿನಿಮಾಗಳು ಬಿಡುಗಡೆ ಆದರೆ ಸಿನಿಮಾಗಳು ಸೋಲುತ್ತವೆ ಎಂಬುದು ಸುಳ್ಳು. ‘ಲಗಾನ್’ ಹಾಗೂ ‘ಗದರ್’ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗಿದ್ದವು. ಎರಡೂ ಸಹ ಬ್ಲಾಕ್ ಬಸ್ಟರ್ ಸಿನಿಮಾಗಳಾದವು. ಈ ಬಾಕ್ಸ್ ಆಫೀಸ್ ಕ್ಲ್ಯಾಶ್ ಎನ್ನುವುದು ಮೀಡಿಯಾ ಸೃಷ್ಟಿ ಅಷ್ಟೆ. ಜನರಿಗೆ ಅದರ ಪರಿವೆಯೇ ಇಲ್ಲ. ಜನರಿಗೆ ಬೇಕಾಗಿರುವುದು ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದಷ್ಟೆ. ಸಿನಿಮಾ ಯಾವುದಾದರೇನು ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ’ ಎಂದಿದ್ದಾರೆ.

‘ಡಕೈಟ್’ ಸಿನಿಮಾನಲ್ಲಿ ಅಡವಿ ಶೇಷ್, ಮೃಣಾಲ್ ಠಾಕೂರ್ ಮತ್ತು ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಗಮನ ಸೆಳೆದಿದೆ. ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆ ಆಗಿದ್ದರು, ಆದರೆ ಅವರ ಬದಲಿಗೆ ಮೃಣಾಲ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯ್ತು. ಸಿನಿಮಾದ ಚಿತ್ರೀಕರಣದ ವೇಳೆ ಅಡವಿ ಶೇಷ್​​ಗೆ ಗಾಯವಾದ ಕಾರಣ ಸಿನಿಮಾದ ಚಿತ್ರೀಕರಣ ತಡವಾಗಿತ್ತು. ಹಾಗಾಗಿ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Wed, 5 November 25