‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಲ್ಲಿ ಬಿಗ್ ಬಾಸ್ ಮೋಕ್ಷಿತಾ, ಭರತ್ ಕುಮಾರ್, ರಿಯಾ
‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾಗೆ ಸುನಾದ ಗೌತಮ್ ಅವರು ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ 6 ಹಾಡುಗಳು ಇರಲಿವೆ. ಭರತ್ ಕುಮಾರ್, ಮೋಕ್ಷಿತಾ ಪೈ, ರಿಯಾ ಸಚ್‌ದೇವ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸುನೀಲ್ ನರಸಿಂಹಮೂರ್ತಿ ಅವರು ಛಾಯಗ್ರಹಣ, ಎಂ. ಲಕ್ಷ್ಮಣರಾವ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಲಿದ್ದಾರೆ.

‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದವರಿಗೆ ಸಿನಿಮಾ ಅವಕಾಶಗಳು ಕೂಡ ಸಿಗುತ್ತವೆ. ನಟಿ ಮೋಕ್ಷಿತಾ ಪೈ (Mokshita Pai) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಸ್ಪರ್ಧಿ ಆಗಿದ್ದರು. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ (Rukmini Radha Krishna) ಎಂಬುದು ಈ ಸಿನಿಮಾದ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಈ ಸಿನಿಮಾದಲ್ಲಿ ಭರತ್ ಕುಮಾರ್ (Bharath Kumar) ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಮೋಕ್ಷಿತಾ ಪೈ ಜೊತೆ ರಿಯಾ ಸಚ್‌ದೇವ್ ಕೂಡ ನಾಯಕಿ ಆಗಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ಪ್ರಾಣ್ ಸುವರ್ಣ ಅವರು ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಪ್ರಾಣ್ ಸುವರ್ಣ ಅವರು ಆ್ಯಕ್ಟೀವ್ ಆಗಿದ್ದಾರೆ. ಸಹ-ನಿರ್ದೇಶಕನಾಗಿ ಮತ್ತು ಬರಹಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಸ್ವತಂತ್ರ ನಿರ್ದೇಶಕನಾಗಿ ಪ್ರಾಣ್ ಸುವರ್ಣ ಅವರ ಚೊಚ್ಚಲ ಸಿನಿಮಾ ‘ರುಕ್ಮಿಣಿ ರಾಧಾಕೃಷ್ಣ’.
ನಟ ಭರತ್ ಕುಮಾರ್ ಅವರು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರೋ ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗ ಅವರು ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಮೋಕ್ಷಿತಾ ಪೈ ಮತ್ತು ರಿಯಾ ಸಚ್‌ದೇವ್ ಅವರು ಅಭಿನಯಿಸಲಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ಕುಮಾರಕೃಪದ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯಿತು.
ಮುಹೂರ್ತದ ವೇಳೆ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಮೊದಲ ದೃಶ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಆರ್. ನರಸಿಂಹಲು ಅವರು ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಆರ್. ಹನುಮಂತರಾಜು ಅವರ ಕ್ಯಾಮೆರಾ ಸ್ವಿಚ್ ಆನ್ ಮಾಡಿ ಶುಭ ಕೋರಿದರು. ಈ ಸಿನಿಮಾಗೆ 60 ದಿನಗಳ ಶೂಟಿಂಗ್ ಪ್ಲ್ಯಾನ್ ಮಾಡಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂ 2ನೇ ಹಂತದಲ್ಲಿ ಕುಂಭಕೋಣಂನಲ್ಲಿ ಶೂಟಿಂಗ್ ನಡೆಯಲಿದೆ.
ಇದನ್ನೂ ಓದಿ: ರಾಧೆಯಾದ ನಟಿ ಮೋಕ್ಷಿತಾ ಪೈ; ಇಲ್ಲಿದೆ ಚಂದದ ವಿಡಿಯೋ
‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಲ್ಲಿ ತ್ರಿಕೋನ ಪ್ರೇಮಕತೆ ಇರಲಿದೆ. ಶ್ರೀಕೃಷ್ಣ, ರಾಧಾ, ರುಕ್ಮಿಣಿಯ ಪ್ರೇಮಕಥೆ ಇಟ್ಟುಕೊಂಡು ಈಗಿನ ಕಾಲದ ಯುವಕರ ಟ್ರಯಾಂಗಲ್ ಲವ್ ಸ್ಟೋರಿಯನ್ನು ಹೇಳಲಿದ್ದಾರೆ ನಿರ್ದೇಶಕರು. ಶಿಲ್ಪಾ ಶ್ರೀನಿವಾಸ್ ಅರ್ಪಿಸುವ ಈ ಸಿನಿಮಾವನ್ನು ‘ಪೆನ್ ಡ್ರೈವ್’ ಸಿನಿಮಾದ ನಿರ್ಮಾಪಕ ಎನ್. ಹನುಮಂತರಾಜು ಮತ್ತು ಎನ್ .ಎಚ್. ಉಮೇಶ್ ಚಂದ್ ನಿರ್ಮಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




