‘ಲವ್ ಮಾಕ್ಟೆಲ್ 3’: ಕತೆ ಕದ್ದ ಆರೋಪ, ಕೇಸು ಹಾಕ್ತೀನಿ ಎಂದ ಡಾರ್ಲಿಂಗ್ ಕೃಷ್ಣ

Darling Krishna: ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾದ ಮೇಲೆ ಇದೀಗ ಕತೆ ಕದ್ದ ಆರೋಪ ಎದುರಾಗಿದೆ. ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಅವರು ಕೃಷ್ಣ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಡಾರ್ಲಿಂಗ್ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಲವ್ ಮಾಕ್ಟೆಲ್ 3’: ಕತೆ ಕದ್ದ ಆರೋಪ, ಕೇಸು ಹಾಕ್ತೀನಿ ಎಂದ ಡಾರ್ಲಿಂಗ್ ಕೃಷ್ಣ
Darling Krishna

Updated on: Mar 25, 2026 | 1:24 PM

ಡಾರ್ಲಿಂಗ್ ಕೃಷ್ಣ (Darling Krishna), ನಟಿಸಿ, ನಿರ್ಮಿಸಿ, ನಿರ್ದೇಶನವನ್ನೂ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾ ಕಳೆದ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್ 2’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಅಬ್ಬರದ ನಡುವೆಯೂ ಸಹ ‘ಲವ್ ಮಾಕ್ಟೆಲ್ 3’ ಸಿನಿಮಾ ಜನರನ್ನು ಸೆಳೆಯುತ್ತಿದೆ. ಅಪ್ಪ-ಮಗಳ ಬಂಧದ ಬಗ್ಗೆ ಕತೆಯನ್ನು ‘ಲವ್ ಮಾಕ್ಟೆಲ್ 3’ ಸಿನಿಮಾ ಹೊಂದಿದ್ದು, ಸಿನಿಮಾದ ಕತೆಯನ್ನು ಡಾರ್ಲಿಂಗ್ ಕೃಷ್ಣ ಅವರೇ ಬರೆದಿದ್ದಾರೆ. ಆದರೆ ಇತ್ತೀಚೆಗೆ ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೆಂದ್ರ ನಾಯಕ್ ಅವರುಗಳು ಡಾರ್ಲಿಂಗ್ ಕೃಷ್ಣ ಅವರು ನಮ್ಮ ಕತೆ ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಯಧುನಂದನ್ ತಾವು ಗುರು ಹಾಗೂ ರಾಘವೇಂದ್ರ ವಿರುದ್ಧ ಕೇಸು ಹಾಕುವುದಾಗಿ ಹೇಳಿದ್ದಾರೆ.

ತಮ್ಮ ಮೇಲೆ ಬಂದಿರುವ ಕತೆ ಕದ್ದ ಆರೋಪಕ್ಕೆ ಸ್ಪಷ್ಟನೆ ನೀಡಲೆಂದು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರು ಸುದ್ದಿಗೋಷ್ಠಿ ಕರೆದಿದ್ದರು, ಮಾಧ್ಯಮಗಳ ಮುಂದೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಕತೆ ಕದ್ದ ಆರೋಪ ಮಾಡುತ್ತಿರುವ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ವಿರುದ್ಧ ಸಿಟ್ಟು ಹೊರಹಾಕಿದರು. ಅಲ್ಲದೆ ಇಬ್ಬರ ಮೇಲೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

‘ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಸ್ವತಃ ರಾಘವೇಂದ್ರ ನಾಯಕ್ ಹೇಳಿದ್ದಾರೆ, ನನ್ನ ಕತೆಯ ದೃಶ್ಯಗಳನ್ನು ತೆಗೆದುಕೊಂಡಿಲ್ಲ, ಸಂಭಾಷಣೆಗಳನ್ನು ತೆಗೆದುಕೊಂಡಿಲ್ಲ ಎಂದು. ಆದರೆ ಕತೆ ಕದ್ದಿದ್ದಾರೆ ಎನ್ನುತ್ತಿದ್ದಾರೆ. ಅಸಲಿಗೆ ನಮ್ಮ ಸಿನಿಮಾನಲ್ಲಿ ಇರುವ ಕತೆ ಲಕ್ನೋನಲ್ಲಿ ನಿಜವಾಗಿ ನಡೆದಿರುವ ಕತೆ. ಅವರು ಹೇಳಿದ್ದು ಸಹ ಅದೇ ಕತೆ. ಗೋಗಲ್​​ನಲ್ಲಿ ಇರುವ ಕತೆಯನ್ನು ನನಗೆ ಹೇಳಿ, ಈಗ ಕತೆ ಕದ್ದಿದ್ದಾರೆ ಎನ್ನುತ್ತಿದ್ದಾರೆ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.

‘ಇವರು ಮಾಡಿರುವ ಆರೋಪದಿಂದ ಪ್ರೇಕ್ಷಕರು ನಮ್ಮನ್ನು ಅನುಮಾನದಿಂದ ನೋಡುವಂತಾಗಿದೆ. ಸತತ ನಾಲ್ಕು ವರ್ಷ ಶ್ರಮ ಹಾಕಿ ನಾವು ಕತೆ ಬರೆದಿದ್ದೀವಿ. ಮೊದಲಿಗೆ ನಾವು ಕ್ಲೈಮ್ಯಾಕ್ಸ್ ಯೋಚಿಸಿ ಆ ನಂತರವೇ ಚಿತ್ರಕತೆಗೆ ಕೂರೋದು. ನಾವು ನಾಲ್ಕು ವರ್ಷದ ಹಿಂದೆಯೇ ಸಿನಿಮಾದ ಎರಡನೇ ಅರ್ಧ ಯೋಚಿಸಿದ್ದೆವು. ಆದರೆ ಈಗ ಇವರು ಆರೋಪ ಮಾಡಿದ್ದಕ್ಕೆ ಕೆಲವು ಪ್ರೇಕ್ಷಕರು ಕತೆ ಕದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ನಮಗೆ ಅಗೌರವ ತರುವ ವಿಷಯ, ನನಗೆ ವೈಯಕ್ತಿಕವಾಗಿ ಇದರಿಂದ ಬಹಳ ಬೇಸರ ಆಗಿದೆ’ ಎಂದಿದ್ದಾರೆ ಕೃಷ್ಣ.

ಇದನ್ನೂ ಓದಿ:‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’

‘ಸಿನಿಮಾ ಚೆನ್ನಾಗಿ ಆಗುತ್ತಿದೆ, ನಾವು ಸ್ವಲ್ಪ ಲಾಭ ಮಾಡಿಕೊಳ್ಳೋಣ ಎಂದು ಬಂದಿದ್ದರು, ಈಗ ನಮಗೆ ಹೆಸರು ಕೊಡಿ ಸಾಕು ಅಂತಿದ್ದಾರೆ. ಆದರೆ ಇದಕ್ಕೆಲ್ಲ ನಾನು ಬಗ್ಗುವುದಿಲ್ಲ. ಗುರು ದೇಶಪಾಂಡೆ ಎಂಥಹಾ ವ್ಯಕ್ತಿ ಎಂಬುದು ನನಗೆ ಗೊತ್ತು. ಇಂಥಹವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೀನಿ. ಗುರು ದೇಶಪಾಂಡೆ ನನ್ನ ಜೊತೆ ಎರಡು ಸಿನಿಮಾ ಮಾಡಿದ್ದಾರೆ, ಎರಡೂ ಸಹ ರೀಮೇಕ್ ಸಿನಿಮಾ, ಅಂಥಹವರ ಜೊತೆಗೆ ನಾನು ಕತೆ ಯಾಕೆ ಡಿಸ್ಕಸ್ ಮಾಡಲಿ’ ಎಂದಿದ್ದಾರೆ ಕೃಷ್ಣ.

‘ಸಿನಿಮಾ ರಿಲೀಸ್ ಆಗಿ ಚೆನ್ನಾಗಿ ಹೋಗುತ್ತಿತ್ತು, ಕೆಲ ದಿನ ಆದ ಮೇಲೆ ರಾತ್ರಿ 1 ಗಂಟೆಗೆ ನನಗೆ ಕಾಲ್ ಮಾಡಿ, ನನ್ನ ಕತೆ ಎತ್ತಿಬಿಟ್ಟಿದ್ದೀರ ಅಂದರು, ಅದಕ್ಕೆ ನಾನು ಯಾವ ಕತೆ ಎಂದೆ, ನನಗೆ ಇವರು ಲಕ್ನೋದ ಕತೆ ಹೇಳಿದ್ದು ಎರಡು ನಿಮಿಷದಲ್ಲಿ, ಆಗ ಒಂದು ಫೋಟೊ ಸಹ ತೋರಿಸಿದ್ದರು. ಅದಾದ ಮೇಲೆ ಒಂದು ಹಳ್ಳಿ ಕತೆ ಹೇಳಿದ್ದರು. ಇನ್ನೂ ಒಂದು ಕತೆಯನ್ನು ಡೀಟೇಲ್ ಆಗಿ ಹೇಳಿದ್ದರು. ಹಾಗಾಗಿ ನಾನು ಕತೆ ಮರೆತುಹೋಗಿದೆ ಎಂದು ಹೇಳಿದೆ. ಅವರು ಫೋನ್ ಕಟ್ ಮಾಡಿದ ಮೇಲೆ ನಾನು ಅಸ್ಪಷ್ಟ ಕೀವರ್ಡ್ ಹಾಕಿ ಗೂಗಲ್ ಮಾಡಿದಾಗ ನನಗೆ ಆ ಕತೆ ಸಿಕ್ಕಿತು. ಇವರು ಗೂಗಲ್​​ ನಲ್ಲಿ ಸಿಕ್ಕಿದ್ದನ್ನು ಕತೆ ಎಂದು ಹೇಳಿ, ಈಗ ಆ ಕತೆಯನ್ನು ಕದ್ದಿದ್ದೀಯ ಎನ್ನುತ್ತಿದ್ದಾರೆ’ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:23 pm, Wed, 25 March 26

Follow Us