ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ವೆಟ್ಟೈಯನ್’ ಸಿನಿಮಾ ಇಂದು (ಅಕ್ಟೋಬರ್ 10) ಬಿಡುಗಡೆ ಆಗಿದೆ. ‘ಲೈಕಾ ಪ್ರೊಡಕ್ಷನ್ಸ್’ ನಿರ್ಮಾಣದ ಈ ಸಿನಿಮಾಗೆ ಟಿಜೆ ಜ್ಞಾನವೇಲ್ ಅವರು ನಿರ್ದೇಶನ ಮಾಡಿದ್ದಾರೆ. ತಮಿಳುನಾಡಿನಲ್ಲಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೇ ರಜನಿಕಾಂತ್ ಕುಟುಂಬದವರು ಕೂಡ ಮೊದಲ ದಿನವೇ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಚ್ಚರಿ ಏನೆಂದರೆ, ನಟ ಧನುಷ್ ಮತ್ತು ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಒಂದೇ ಚಿತ್ರಮಂದಿರದಲ್ಲಿ ‘ವೆಟ್ಟೈಯನ್’ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.
ರಜನಿಕಾಂತ್ ಅವರ ಅಪ್ಪಟ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡಿಕೊಳ್ಳುವುದಿಲ್ಲ. ಅಭಿಮಾನಿಗಳ ಜೊತೆಯಲ್ಲಿ ಕುಳಿತು ಧನುಷ್ ಕೂಡ ‘ವೆಟ್ಟೈಯನ್’ ಸಿನಿಮಾ ವೀಕ್ಷಿಸಿದ್ದಾರೆ. ಅದೇ ಚಿತ್ರಮಂದಿರದಲ್ಲಿ ರಜನಿಕಾಂತ್ ಪತ್ನಿ ಲತಾ, ಮಕ್ಕಳಾದ ಐಶ್ವರ್ಯಾ, ಸೌಂದರ್ಯಾ, ಮೊಮ್ಮೊಕ್ಕಳಾದ ಯಾತ್ರ ಮತ್ತು ಲಿಂಗ ಅವರು ಸಿನಿಮಾ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
2004ರಲ್ಲಿ ಧನುಷ್ ಮತ್ತು ಐಶ್ವರ್ಯಾ ಅವರು ಮದುವೆ ಆಗಿದ್ದರು. ಆದರೆ 2022ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದರು. 18 ವರ್ಷಗಳ ದಾಂಪತ್ಯದ ಬಳಿಕ ಅವರು ಬೇರೆ ಬೇರೆ ಆಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು. ಧನುಷ್ ಅವರು ಡಿವೋರ್ಸ್ ನೀಡಿ ರಜನಿಕಾಂತ್ ಅವರ ಕುಟುಂಬದಿಂದ ದೂರಾಗಿದ್ದರೂ ಕೂಡ ರಜನಿ ಮೇಲೆ ಅವರಿಗೆ ಇರುವ ಗೌರವ, ಅಭಿಮಾನಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಮೊದಲ ದಿನ ಅವರು ‘ವೆಟ್ಟೈಯನ್’ ಚಿತ್ರವನ್ನು ಕಣ್ತುಂಬಿಕೊಂಡಿರುವುದೇ ಈ ಮಾತಿಗೆ ಸಾಕ್ಷಿ.
ಇದನ್ನೂ ಓದಿ: Vettaiyan twitter review: ರಜನಿ ಖಾತೆಗೆ ಮತ್ತೊಂದು ಬ್ಲಾಕ್ ಬಸ್ಟರ್, ಭರವಸೆ ಉಳಿಸಿಕೊಂಡ ಜ್ಞಾನವೇಲು
ಅದ್ದೂರಿ ಬಜೆಟ್ನಲ್ಲಿ ‘ವೆಟ್ಟೈಯನ್’ ಸಿನಿಮಾ ಮೂಡಿಬಂದಿದೆ. ಈ ಮೊದಲು ‘ಜೈ ಭೀಮ್’ ಚಿತ್ರಕ್ಕೆ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಟಿಜೆ ಜ್ಞಾನವೇಲ್ ಅವರ ನಿರ್ದೇಶನದಲ್ಲಿ ‘ವೆಟ್ಟೈಯನ್’ ಸಿದ್ಧವಾಗಿದೆ. ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.