ಈಡೇರಲಿದೆ ಅಭಿಮಾನಿಗಳ ಬಹುವರ್ಷದ ಬೇಡಿಕೆ, ‘ವಡ ಚೆನ್ನೈ 2’ ಪಕ್ಕಾ

Vada Chennai: 2018 ರಲ್ಲಿ ಬಿಡುಗಡೆ ಆಗಿದ್ದ ಧನುಶ್ ನಟನೆಯ ‘ವಡ ಚೆನ್ನೈ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಎರಡನೇ ಭಾಗ ಬರಲಿದೆ ಎನ್ನಲಾಗಿತ್ತು. ಆದರೆ ಏಳು ವರ್ಷವಾದರೂ ಸಿನಿಮಾ ಸೆಟ್ಟೇರಿಲ್ಲ. ‘ವಡ ಚೆನ್ನೈ’ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇದೀಗ ನಟ ಧನುಶ್ ‘ವಡ ಚೆನ್ನೈ 2’ ಸಿನಿಮಾದ ಬಗ್ಗೆ ಮಾತನಾಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಈಡೇರಲಿದೆ ಅಭಿಮಾನಿಗಳ ಬಹುವರ್ಷದ ಬೇಡಿಕೆ, ‘ವಡ ಚೆನ್ನೈ 2’ ಪಕ್ಕಾ
Vada Chennai 2

Updated on: Jun 27, 2025 | 3:13 PM

ಧನುಶ್ (Dhanush) ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿರುವ ಕೆಲವು ಸಿನಿಮಾಗಳು ಈಗಾಗಲೇ ಕಲ್ಟ್ ಸಿನಿಮಾ ಸ್ಥಾನವನ್ನು ಪಡೆದಿವೆ. ಅದರಲ್ಲಿಯೂ ಧನುಶ್, ನಿರ್ದೇಶಕ ವೆಟ್ರಿಮಾರನ್ ಜೊತೆ ಸೇರಿ ಮಾಡಿದ ಸಿನಿಮಾಗಳು ಯಾವುದೂ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿಲ್ಲ, ಮಾತ್ರವಲ್ಲದೆ ಧನುಶ್ ಮತ್ತು ವೆಟ್ರಿ ಒಟ್ಟಿಗೆ ಸೇರಿದಾಗಲೆಲ್ಲ ಅತ್ಯದ್ಭುತವಾದ ಸಿನಿಮಾಗಳನ್ನೇ ನೀಡಿದ್ದಾರೆ. ಕೊನೆಯ ಬಾರಿಗೆ ಈ ಜೋಡಿ ಒಟ್ಟಿಗೆ ಮಾಡಿದ ಸಿನಿಮಾ ‘ವಡ ಚೆನ್ನೈ’ ಆ ಸಿನಿಮಾಕ್ಕೆ ತನ್ನದೇ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ‘ವಡ ಚೆನ್ನೈ 2’ ಬರಲಿದೆ ಎಂದು ವೆಟ್ರಿಮಾರನ್ ಘೋಷಿಸಿದ್ದರು. ‘ವಡ ಚೆನ್ನೈ’ ಬಿಡುಗಡೆ ಆಗಿ ಏಳು ವರ್ಷಗಳಾಗಿದ್ದು ಈ ವರೆಗೆ ‘ವಡಾ ಚೆನ್ನೈ 2’ ಸೆಟ್ಟೇರಿಲ್ಲ.

ಆದರೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ‘ವಡ ಚೆನ್ನೈ 2’ ಸಿನಿಮಾ ಬಗ್ಗೆ ಬೇಡಿಕೆ ಇಡುತ್ತಲೇ ಇದ್ದಾರೆ. ‘ವಡ ಚೆನ್ನೈ 2’ ಮಾತ್ರವೇ ಅಲ್ಲದೆ ‘ವಡ ಚೆನ್ನೈ’ ಸಿನಿಮಾದ ಪ್ರೀಕ್ವೆಲ್ ಸಹ ಮಾಡುವುದಾಗಿ ವೆಟ್ರಿಮಾರನ್ ಹೇಳಿದ್ದರು. ಆದರೆ ಅದೂ ಸಹ ಸೆಟ್ಟೇರಿಲ್ಲ. ಆದರೆ ಈಗ ಸ್ವತಃ ನಟ ಧನುಶ್ ಅವರೇ ‘ವಡ ಚೆನ್ನೈ 2’ ಪಕ್ಕ ಎಂದು ಘೋಷಣೆ ಮಾಡಿದ್ದಾರೆ.

ಧನುಶ್ ನಟನೆಯ ‘ಕುಬೇರ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಧನುಶ್, ‘ನೀವೆಲ್ಲ ಬಹಳ ಬೇಡಿಕೆ ಇಟ್ಟಿದ್ದೀರಿ, ಬಹಳ ವರ್ಷಗಳಿಂದ ಕಾಯುತ್ತಲೇ ಇದ್ದೀರಿ, ಆಗಲಿ ಮುಂದಿನ ವರ್ಷ ಪಕ್ಕಾ ಸಿನಿಮಾ ಮಾಡುತ್ತೇವೆ’ ಎಂದಿದ್ದಾರೆ. ಆ ಮೂಲಕ ‘ವಡ ಚೆನ್ನೈ 2’ ಬರುವುದು ಪಕ್ಕಾ ಎಂದಿದ್ದಾರೆ.

ಇದನ್ನೂ ಓದಿ:‘ಕರ್ಣನ್’ ಸಿನಿಮಾ ನಿರ್ದೇಶಕನ ಜೊತೆ ಮತ್ತೆ ಕೈಜೋಡಿಸಿದ ಧನುಶ್

ಅಸಲಿಗೆ ನಿರ್ದೇಶಕ ವೆಟ್ರಿಮಾರನ್ ‘ವಡ ಚೆನ್ನೈ’ ಸಿನಿಮಾದ ಪ್ರೀಕ್ವೆಲ್ ‘ರಾಜನ್ ಆಂಡ್ ವಗೈರೆ’ ಎಂಬ ಸಿನಿಮಾ ಮಾಡಲು ಉದ್ದೇಶಿಸಿ, ‘ವಡ ಚೆನ್ನೈ’ ಸಿನಿಮಾದ ಸಮಯದಲ್ಲಿಯೇ ‘ರಾಜನ್ ಆಂಡ್ ವಗೈರೆ’ ಸಿನಿಮಾದ ಹಲವು ದೃಶ್ಯಗಳನ್ನು ಚಿತ್ರೀಕರಣ ಸಹ ಮಾಡಿದ್ದಾರಂತೆ. ‘ವಡ ಚೆನ್ನೈ 2’ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಆದರೆ ಧನುಶ್ ಹಾಗೂ ವೆಟ್ರಿಮಾರನ್ ನಡುವೆ ಕ್ರಿಯಾತ್ಮಕ ಭಿನ್ನಾಭಿಪ್ರಾಯಗಳು ಮೂಡಿದ ಕಾರಣ ಆ ಎರಡೂ ಸಿನಿಮಾಗಳು ನೆನೆಗುದಿಗೆ ಬಿದ್ದಿವೆ ಎನ್ನಲಾಗುತ್ತಿದೆ.

ಇನ್ನು ವೆಟ್ರಿಮಾರನ್, ಭಾರತದ ಹಾಲಿ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ‘ಆಡುಕುಲಂ’, ‘ವಡ ಚೆನ್ನೈ’, ‘ವಿಡುದಲೈ’, ಆಸ್ಕರ್​ಗೆ ಪ್ರವೇಶ ಪಡೆದಿದ್ದ ‘ವಿಸಾರನೈ’, ‘ಅಸುರನ್’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಸೂರ್ಯ ಜೊತೆಗೆ ‘ವಡಿವಾಸಲ್’ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಆ ಸಿನಿಮಾದ ಚಿತ್ರೀಕರಣ ನಿಂತಿದೆ. ಜೂ ಎನ್​ಟಿಆರ್ ಜೊತೆಗೆ ಒಂದು ಸಿನಿಮಾ, ಸಿಂಬು ಜೊತೆಗೆ ಒಂದು ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ