ರಶ್ಮಿಕಾಗೆ ಶುಭ ಹಾರೈಸಿದ ಶಿವಣ್ಣ, ನಟಿಯ ಪ್ರತಿಕ್ರಿಯೆ ಏನಿತ್ತು?
Rashmika Mandanna-Shiva Rajkumar: ಸಿನಿಮಾ ರಂಗದಲ್ಲಿ ಹೊಸ ರೀತಿಯ ಪ್ರಯತ್ನಗಳನ್ನು, ಪ್ರತಿಭಾವಂತರನ್ನು ಯಾವ ಹಂಗೂ ಇಟ್ಟುಕೊಳ್ಳದೆ ಬೆಂಬಲಿಸುತ್ತಲೇ ಬಂದಿದ್ದಾರೆ ಶಿವರಾಜ್ ಕುಮಾರ್. ಇದೀಗ ರಶ್ಮಿಕಾ ಮಂದಣ್ಣ ಅವರ ಹೊಸ ಪ್ರಯತ್ನಕ್ಕೂ ಶಿವರಾಜ್ ಕುಮಾರ್ ಅವರು ಶುಭಾಶಯಗಳನ್ನು ಕೋರಿದ್ದಾರೆ. ಶಿವರಾಜ್ ಕುಮಾರ್ ಅವರ ಸಂದೇಶಕ್ಕೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಸಿನಿಮಾ ಯಾವುದು?

ನಟಿ ರಶ್ಮಿಕಾ ಮಂದಣ್ಣ (Rashmika Mandanna) ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕೆಲ ವರ್ಷಗಳ ವರೆಗೆ ಕೇವಲ ಮರ ಸುತ್ತುವ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಿದ್ದರು. ರಶ್ಮಿಕಾರ ಪ್ರತಿಭೆಗೆ ಅಂಥಹುದೇ ಪಾತ್ರಗಳು ಒಂದರ ಹಿಂದೆ ಒಂದರಂತೆ ಸಿಗುತ್ತಿದ್ದವು. ಆದರೆ ಚಿತ್ರರಂಗದಲ್ಲಿ ಸಮಯ ಕಳೆದಂತೆ, ಅನುಭವ ಒಗ್ಗೂಡಿದಂತೆ ನಟಿಯ ನಟನಾ ಪ್ರತಿಭೆ ಹೆಚ್ಚುತ್ತಿದ್ದು, ಇತ್ತೀಚೆಗೆ ತುಸು ಸವಾಲು ಎನ್ನಬಹುದಾದ, ಭಿನ್ನ ರೀತಿಯ ಪಾತ್ರಗಳು ದೊರೆಯುತ್ತಿದ್ದು, ರಶ್ಮಿಕಾ ಸಹ ತಮ್ಮ ಕಂಫರ್ಟ್ ಜೋನ್ ಬಿಟ್ಟು ಹೊಸ ರೀತಿಯ ಪಾತ್ರಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.
ಇದೀಗ ರಶ್ಮಿಕಾ ಮಂದಣ್ಣ ‘ಮೈಸಾ’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಸಿನಿಮಾದ ಪೋಸ್ಟರ್ ನೋಡಿದರೆ ಇದು ಸಾಮಾನ್ಯ ಸಿನಿಮಾ ಅಲ್ಲ ಎಂಬುದು ಗೊತ್ತಾಗುತ್ತಿದೆ. ಪೋಸ್ಟರ್ನಲ್ಲಿ ರಶ್ಮಿಕಾರ ಮುಖಕ್ಕೆಲ್ಲ ರಕ್ತ ಮೆತ್ತಿದೆ, ಮುಖ ಅಲ್ಲಲ್ಲಿ ಕಪ್ಪಿಟ್ಟಿದೆ. ಮೂಗಿಗೆ ಧರಿಸಿರುವ ದೊಡ್ಡ ಮೂಗುತಿ ವೀರ ನಾರಿಯನ್ನು ನೆನಪಿಸುತ್ತಿದೆ. ಕೈಯಲ್ಲಿ ಆಯುಧವೊಂದು ಕಾಣುತ್ತಿದೆ. ಒಟ್ಟಾರೆಯಾಗಿ ಅನ್ಯಾಯಕ್ಕೊಳಗಾಗಿ ಅದರ ವಿರುದ್ಧ ಸಿಡಿದೆದ್ದಿರುವ ಮಹಿಳೆಯ ಭಾವ ಆ ಪೋಸ್ಟರ್ನಲ್ಲಿದೆ.
ರಶ್ಮಿಕಾರ ಈ ಹೊಸ ಪ್ರಯತ್ನಕ್ಕೆ ಹಲವಾರು ನಟ, ನಟಿಯರು ಶುಭ ಕೋರಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ಸಹ ರಶ್ಮಿಕಾ ಮಂದಣ್ಣಗೆ ‘ಮೈಸಾ’ ಸಿನಿಮಾಕ್ಕಾಗಿ ಶುಭ ಹಾರೈಸಿದ್ದಾರೆ. ಭಿನ್ನವಾದ ಪ್ರಯತ್ನಗಳನ್ನು, ಪ್ರತಿಭಾವಂತರನ್ನು ಯಾವ ಹಂಗೂ ಇಟ್ಟುಕೊಳ್ಳದೆ ಬೆಂಬಲಿಸುತ್ತಲೇ ಬಂದಿದ್ದಾರೆ ಶಿವರಾಜ್ ಕುಮಾರ್. ಅದರಂತೆ ಕನ್ನಡದ ಮಣ್ಣಿನವರೇ ಆದ ರಶ್ಮಿಕಾ, ಹೊಸ ಸಾಹಸಕ್ಕೆ ಕೈ ಹಾಕಿದ್ದು, ಸಹಜವಾಗಿಯೇ ಶಿವರಾಜ್ ಕುಮಾರ್ ಅವರು ರಶ್ಮಿಕಾ ಅವರಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:ಫಸ್ಟ್ ಲವ್, ಫಸ್ಟ್ ಕಾರ್; ಎಲ್ಲಾ ಮೊದಲುಗಳ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ
ಶಿವರಾಜ್ ಕುಮಾರ್ ಅವರ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ, ‘ಶಿವಣ್ಣ ಸರ್, ಈ ನಿಮ್ಮ ಸಂದೇಶಕ್ಕೆ ಬಹಳ ಧನ್ಯವಾದಗಳು. ನಿಮ್ಮ ಸಂದೇಶದಿಂದ ಹೆಮ್ಮೆಯ ಭಾವ ಉಕ್ಕಿ ಬಂತು’ ಎಂದಿದ್ದಾರೆ. ಜೊತೆಗೆ ಭಾವುಕತೆ ವ್ಯಕ್ತಪಡಿಸುವ ಇಮೋಜಿಗಳನ್ನು ಸಂದೇಶದಲ್ಲಿ ಬಳಸಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ಮೈಸಾ’ ಸಿನಿಮಾವನ್ನು ರವೀಂದ್ರ ಪುಲ್ಲೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಅಜಯ್ ಮತ್ತು ಅನಿಲ್ ಸಯ್ಯಪುರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಪ್ರಸ್ತುತ ಎರಡು ಹಿಂದಿ ಸಿನಿಮಾ ಮೂರು ತೆಲುಗು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಇವುಗಳ ಜೊತೆಗೆ ಈಗ ‘ಮೈಸಾ’ ಸಹ ಸೇರಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




