ಅಂದು ಬಿಕಿನಿ, ಇಂದು ಗನ್; ‘ವಾರ್ 2’ ಸಿನಿಮಾದಲ್ಲಿ ಕಿಯಾರಾ ಹೊಸ ಅವತಾರ
ಭಾರಿ ನಿರೀಕ್ಷೆ ಸೃಷ್ಟಿ ಮಾಡಿರುವ ‘ವಾರ್ 2’ ಸಿನಿಮಾದ ಬಿಡುಗಡೆಗೆ 50 ದಿನ ಬಾಕಿ ಇದೆ. ಈಗಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಹೊಸ ಪೋಸ್ಟರ್ ರಿಲೀಸ್ ಆಗಿದೆ. ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ, ಜೂನಿಯರ್ ಎನ್ಟಿಆರ್ ಅವರ ಈ ಪೋಸ್ಟರ್ಗಳು ವೈರಲ್ ಆಗುತ್ತಿವೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ವಾರ್ 2’ (War 2) ಚಿತ್ರ ಕೂಡ ಇದೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಹೆಚ್ಚು ಹೈಪ್ ಕ್ರಿಯೇಟ್ ಮಾಡಿದೆ. ಜೂನಿಯರ್ ಎನ್ಟಿಆರ್ (Jr NTR), ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಬಿಡುಗಡೆಯಾದ ಟೀಸರ್ ಗಮನ ಸೆಳೆದಿತ್ತು. ಈಗ ಎಲ್ಲ ಪಾತ್ರಗಳ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಕಿಯಾರಾ ಅಡ್ವಾಣಿ (Kiara Advani) ಅವರು ಗನ್ ಹಿಡಿದು ಪೋಸ್ ನೀಡಿದ್ದಾರೆ. ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಪೋಸ್ಟರ್ ವೈರಲ್ ಆಗಿದೆ.
‘ವಾರ್ 2’ ಸಿನಿಮಾ ಟೀಸರ್ ಬಿಡುಗಡೆ ಆದಾಗ ಕಿಯಾರಾ ಅಡ್ವಾಣಿ ಅವರು ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದರು. ಅವರನ್ನು ಹಾಟ್ ಅವತಾರದಲ್ಲಿ ನೋಡಿ ಎಲ್ಲರೂ ಹುಬ್ಬೇರಿಸಿದ್ದರು. ಹಾಗಂತ ಈ ಸಿನಿಮಾದಲ್ಲಿ ಅವರು ಕೇವಲ ಗ್ಲಾಮರ್ ಗೊಂಬೆ ರೀತಿ ಕಾಣಿಸಿಕೊಳ್ಳುತ್ತಾರಾ ಎಂಬ ಅನುಮಾನ ಇತ್ತು. ಆದರೆ ಅವರು ಗನ್ ಹಿಡಿದು ಆ್ಯಕ್ಷನ್ ದೃಶ್ಯಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ಪೋಸ್ಟರ್ ಸಾಕ್ಷಿ ಒದಗಿಸುತ್ತಿದೆ.
ಆಗಸ್ಟ್ 14ರಂದು ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅವರು ಈ ಚಿತ್ರದಲ್ಲಿ ಮುಖಾಮುಖಿ ಆಗಲಿದ್ದಾರೆ. ಅದರ ಝಲಕ್ ಈಗಾಗಲೇ ಟೀಸರ್ನಲ್ಲಿ ತೋರಿಸಲಾಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ನಟಿ ಕಿಯಾರಾ ಬಿಕಿನಿ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ರಾಮ್ ಗೋಪಾಲ್ ವರ್ಮಾ
ಇದು ಪಕ್ಕಾ ಆ್ಯಕ್ಷನ್ ಸಿನಿಮಾ. ಹಾಗಾಗಿಯೇ ಹೊಸ ಪೋಸ್ಟರ್ನಲ್ಲಿ ಜೂನಿಯರ್ ಎನ್ಟಿಆರ್, ಕಿಯಾರಾ ಅಡ್ವಾಣಿ ಮತ್ತು ಹೃತಿಕ್ ರೋಷನ್ ಅವರು ಯುದ್ಧಕ್ಕೆ ಸಜ್ಜಾಗಿ ನಿಂತವರಂತೆ ಕಾಣಿಸಿಕೊಂಡಿದ್ದಾರೆ. ‘ವಾರ್ 2’ ಬಿಡುಗಡೆ ಆಗಲು ಇನ್ನು 50 ದಿನಗಳ ಮಾತ್ರ ಬಾಕಿ ಇವೆ. ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ ‘ವಾರ್’ ಸಿನಿಮಾ 2019ರಲ್ಲಿ ತೆರೆಕಂಡಿತ್ತು. ಅದರ ಸೀಕ್ವೆಲ್ ಆಗಿ ‘ವಾರ್ 2’ ಬರುತ್ತಿದೆ. ಈ ಸಿನಿಮಾಗೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಸ್ಟಾರ್ ನಟರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








