ನಟಿ ಕೀರ್ತಿ ಸುರೇಶ್ (Keethy Suresh) ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿಯರಲ್ಲೊಬ್ಬರು. ಬಾಲನಟಿಯಾಗಿ ಎರಡು ಮೂರು ಸಿನಿಮಾಗಳಲ್ಲಿ ನಟಿಸಿದ ಈ ಮಲಯಾಳಂ (Malayalam) ನಟಿ 2013 ರಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು. ವೃತ್ತಿ ಜೀವನದ ಆರಂಭದಲ್ಲಿ ಅಂದುಕೊಂಡ ಯಶಸ್ಸು ದೊರಕಲಿಲ್ಲ. ನಟಿಗೆ ಯಶಸ್ಸು ತುಸು ತಡವಾಗಿಯೇ ಕೈಹಿಡಿಯಿತು. ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ ಎನಿಸಿಕೊಂಡಿರುವ ಕೀರ್ತಿ ದುಬಾರಿ ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು ಸಹ. ಈಗ ಸಿನಿಮಾಕ್ಕೆ ಮೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆವ ಕೀರ್ತಿ ಸುರೇಶ್ಗೆ ಮೊದಲು ದೊರೆತ ಸಂಬಳ ಎಷ್ಟು ಗೊತ್ತೆ?
ನಟಿ ಕೀರ್ತಿ ಸುರೇಶ್, ಬಾಲ್ಯದಿಂದಲೂ ಸಿನಿಮಾ, ಫ್ಯಾಷನ್, ಡ್ರಾಮಾಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದವರು. ಕೀರ್ತಿಯ ತಾಯಿಯೂ ನಟಿ, ತಂದೆ ಜನಪ್ರಿಯ ಸಿನಿಮಾ ನಿರ್ದೇಶಕರಾಗಿದ್ದರಿಂದ ಮನೆಯಲ್ಲಿಯೂ ಸಿನಿಮಾ ವಾತಾವರಣವೇ ಇತ್ತು. ತಂದೆ-ತಾಯಿಯಂತೆಯೇ ಮಗಳಿಗೂ ಪ್ರದರ್ಶನ ಕಲೆಯ ಬಗ್ಗೆ ಅತೀವ ಆಸಕ್ತಿ. ಸಣ್ಣ ವಯಸ್ಸಿನಲ್ಲಿಯೇ ನಟನೆ ಪ್ರಾರಂಭಿಸಿದರಾದರೂ ಬಾಲನಟಿಯಾಗಿ ನಟಿಸಿದ ಮೂರೂ ಸಿನಿಮಾಗಳಿಗೆ ಅವರ ತಂದೆಯೇ ನಿರ್ದೇಶಕ ಹಾಗಾಗಿ ಸಂಭಾವನೆ ನೇರವಾಗಿ ಅಪ್ಪನ ಕೈ ಸೇರಿತ್ತು.
ಆದರೆ ಕಾಲೇಜು ಕಲಿಯುವಾಗ ಕೀರ್ತಿ ಸುರೇಶ್ ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸಿದ್ದರಂತೆ. ಆ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದಕ್ಕೆ ಕೀರ್ತಿ ಸುರೇಶ್ಗೆ ಐದು ನೂರು ರೂಪಾಯಿಗಳನ್ನು ಸಂಬಳವಾಗಿ ನೀಡಲಾಗಿತ್ತು. ಕೀರ್ತಿ ಸುರೇಶ್ ಹೇಳಿಕೊಂಡಿರುವಂತೆ ಅದೇ ಅವರ ಮೊತ್ತ-ಮೊದಲ ಸಂಭಾವನೆ. ಕಾಲೇಜು ಕಲಿಯುವಾಗಲೇ ಸೆಮಿಸ್ಟರ್ ಬಿಡುವಿನಲ್ಲಿ 2013 ರಲ್ಲಿ ಪ್ರಿಯದರ್ಶನ್ ನಿರ್ದೇಶಿಸಿದ ‘ಗೀತಾಂಜಲಿ’ ಹೆಸರಿನ ಹಾರರ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕೀರ್ತಿ ನಟಿಸಿದರು. ಸಿನಿಮಾ ಸಾಧಾರಣವಾಗಿ ಓಡಿತಾದರೂ ಕೀರ್ತಿ ನಟನೆ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು.
ಇದನ್ನೂ ಓದಿ:ಬಾಲಿವುಡ್ಗೆ ಹಾರಲು ಸಜ್ಜಾದ ಕೀರ್ತಿ ಸುರೇಶ್: ಹೀರೋ ಯಾರು?
ಅದಾದ ಮರುವರ್ಷ ಅಂದರೆ 2014 ರಲ್ಲಿ ‘ರಿಂಗ್ ಮಾಸ್ಟರ್’ ಹೆಸರಿನ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸಿದರು. ಆ ಸಿನಿಮಾದಲ್ಲಿ ಅವರದ್ದು ಕುರುಡಿ ಯುವತಿಯ ಪಾತ್ರ. ಆ ಸಿನಿಮಾ ಹಿಟ್ ಆಯಿತು ಜೊತೆಗೆ ಕೀರ್ತಿ ನಟನೆಗೆ ತುಸು ಪ್ರಶಂಸೆಯೂ ದೊರಕಿತು. ಆದರೆ ಹೆಚ್ಚಿನ ಅವಕಾಶಗಳೇನು ಆ ಸಿನಿಮಾದಿಂದ ದೊರಕಿಲ್ಲ, ವಾರಗೆಯ ನಟಿಯರು ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳಲ್ಲಿ ನಟಿಸುವಾಗಲೂ ಕೀರ್ತಿಗೆ ಸಿಗುತ್ತಿದ್ದಿದ್ದು ವರ್ಷಕ್ಕೆ ಒಂದು ಸಿನಿಮಾ ಅಷ್ಟೆ.
2015ರಲ್ಲಿ ಮೊದಲ ತಮಿಳು ಸಿನಿಮಾ ಒಪ್ಪಿಕೊಂಡು ನಟಿಸಿದರು. ‘ಇದು ಎನ್ನ ಮಾಯಂ’ ಹೆಸರಿನ ಆ ಸಿನಿಮಾ ಫ್ಲಾಪ್ ಆಯಿತಾದರೂ ಆ ಸಿನಿಮಾದ ಬಳಿಕ ಕೀರ್ತಿಗೆ ಹಲವು ಅವಕಾಶಗಳು ಲಭಿಸಲು ಆರಂಭವಾದವು. ತೆಲುಗಿನಲ್ಲಿ ಬಂದ ‘ನೇನು ಶೈಲಜಾ’ ಸಿನಿಮಾ ದೊಡ್ಡ ಹಿಟ್ ಆಯಿತು. ಕೀರ್ತಿ ಸುರೇಶ್ ನಟನೆ ಬಗ್ಗೆ ಬಹುವಾಗಿ ಮೆಚ್ಚುಗೆ ವ್ಯಕ್ತವಾಯಿತು. ಆ ಸಿನಿಮಾದಿಂದ ತೆಲುಗು ಪ್ರೇಕ್ಷಕರಿಗೆ ಕೀರ್ತಿ ಬಹಳ ಹತ್ತಿರವಾದರು. ‘ನೇನು ಶೈಲಜಾ’ ಸಿನಿಮಾ ಬಳಿಕ ಕೀರ್ತಿ ಅದೆಷ್ಟು ಬ್ಯುಸಿ ಆಗಿಬಿಟ್ಟರೆಂದರೆ 2014 ರ ಬಳಿಕ 2021 ರವರೆಗೆ ಒಂದೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಲಾಗಲಿಲ್ಲ. 2023 ರಲ್ಲಿ ಅವರ ನಟನೆ ಮೂರು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿವೆ. ಇನ್ನೂ ನಾಲ್ಲು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಎರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ