‘ಸಲಾರ್’ ಚಿತ್ರೀಕರಣಕ್ಕೆ ಬಳಸಿರುವ ಕ್ಯಾಮೆರಾ ಯಾವುದು? ಬೆಲೆ ಎಷ್ಟು? ವಿಶೇಷತೆಗಳೇನು?

|

Updated on: Dec 14, 2023 | 5:37 PM

Salaar Camera: ‘ಸಲಾರ್’ ಸಿನಿಮಾದ ಚಿತ್ರೀಕರಣಕ್ಕೆ ಬಳಸಾಗಿರುವ ಕ್ಯಾಮೆರಾ ಯಾವುದು ಗೊತ್ತೆ? ಅದರ ಬೆಲೆ, ಆ ಕ್ಯಾಮೆರಾದ ವಿಶೇಷತೆಗಳು ಇನ್ನಿತರೆ ಆಸಕ್ತಿಕರ ಮಾಹಿತಿ ಇಲ್ಲಿದೆ.

‘ಸಲಾರ್’ ಚಿತ್ರೀಕರಣಕ್ಕೆ ಬಳಸಿರುವ ಕ್ಯಾಮೆರಾ ಯಾವುದು? ಬೆಲೆ ಎಷ್ಟು? ವಿಶೇಷತೆಗಳೇನು?
ಸಲಾರ್
Follow us on

ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಈ ವರ್ಷದ ಅತಿ ಹೆಚ್ಚು ಬಜೆಟ್​ನ ಸಿನಿಮಾಗಳಲ್ಲಿ ಒಂದು. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ. ಟ್ರೈಲರ್​ನಲ್ಲಿ ತೋರಿಸಲಾಗಿರುವ ದೃಶ್ಯಗಳ ಜೊತೆಗೆ ಆ ದೃಶ್ಯಗಳ ಶಾರ್ಪ್​ನೆಸ್ (ತೀಕ್ಷ್ಣತೆ) ಸಹ ಗಮನ ಸೆಳೆದಿದೆ. ಯೂಟ್ಯೂಬ್​ನಲ್ಲಿ 4ಕೆ ರೆಸಲ್ಯೂಷನ್ ಆಯ್ಕೆ ಮಾಡಿಕೊಂಡರೆ ದೃಶ್ಯಗಳ ತೀಕ್ಷ್ಣತೆಯ ಆಳ ಅರಿವಾಗುತ್ತದೆ. ಅದಕ್ಕೆ ಕಾರಣ, ಈ ಸಿನಿಮಾದ ಚಿತ್ರೀಕರಣಕ್ಕೆ ಸಿನಿಮಾಟೊಗ್ರಾಫರ್ ಭುವನ್ ಗೌಡ ಬಳಸಿರುವ ಕ್ಯಾಮೆರಾ.

‘ಸಲಾರ್’ ಸಿನಿಮಾದ ಚಿತ್ರೀಕರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅತ್ಯಂತ ದುಬಾರಿ ಕ್ಯಾಮೆರಾ ಅನ್ನು ಭುವನ್ ಗೌಡ ಬಳಸಿದ್ದಾರೆ. ‘ಸಲಾರ್’ ಸಿನಿಮಾವನ್ನು ಆರಿ ಸಂಸ್ಥೆಯ ‘ಅಲೆಕ್ಸಾ 35’ ಬಳಸಿ ಚಿತ್ರೀಕರಣ ಮಾಡಲಾಗಿದೆ. ಆರಿಯ ಈ ಹಿಂದಿನ ಅತ್ಯುತ್ತಮ ಕ್ಯಾಮೆರಾ ಎನ್ನಲಾಗುತ್ತಿದ್ದ ‘ಅಲೆಕ್ಸಾ ಮಿನಿ ಎಲ್​ಎಫ್’ ಗಿಂತಲೂ ಉತ್ತಮವಾದ ಸೆನ್ಸಾರ್, ಕಲರ್ ಗ್ರೇಡಿಂಗ್ ಹೊಂದಿರುವ ಕ್ಯಾಮೆರಾ ಇದಾಗಿದೆ. ಈ ಕ್ಯಾಮೆರಾ ಬಳಸಿ ಕೆಲವು ಹಾಲಿವುಡ್ ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗಿದೆ.

ಅಲೆಕ್ಸಾ 35 ಕ್ಯಾಮೆರಾದ ಬೆಲೆ 65 ಲಕ್ಷಕ್ಕೆ ಆಸು-ಪಾಸಾಗುತ್ತದೆ. ಕ್ಯಾಮೆರಾದ ತರಹೇವಾರಿ ಲೆನ್ಸ್​ಗಳು ಹಾಗೂ ಇನ್ನಿತರೆ ಆಕ್ಸಸ್ಸೆರಿಗಳ ಬೆಲೆಗಳನ್ನೆಲ್ಲ ಒಟ್ಟು ಮಾಡಿದರೆ ಸುಮಾರು 2 ಕೋಟಿ ದಾಟಬಹುದು. ಇಷ್ಟು ದುಬಾರಿ ಕ್ಯಾಮೆರಾನಲ್ಲಿ ‘ಸಲಾರ್’ ಸಿನಿಮಾದ ಚಿತ್ರೀಕರಣವನ್ನು ಭುವನ್ ಗೌಡ ಮಾಡಿದ್ದಾರೆ. ತೆತ್ತಿರುವ ಬೆಲೆಗೆ ತಕ್ಕಂತೆ ಅದ್ಭುತವಾಗಿ ದೃಶ್ಯಗಳು ಮೂಡಿಬಂದಿರುವುದು ಟ್ರೈಲರ್​ನಲ್ಲಿ ಗೋಚರಿಸುತ್ತಿದೆ.

ಇದನ್ನೂ ಓದಿ:‘ಸಲಾರ್’ಗಾಗಿ ಸೆಟ್ ಹಾಕಿದ್ದು ಎಲ್ಲಿ? ಎಷ್ಟು ಬೃಹತ್ ಆಗಿತ್ತು ಆ ಸೆಟ್?

ಅಲೆಕ್ಸಾ 35 ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇನ್ಯಾವುದೇ ಕ್ಯಾಮೆರಾಗಳು ನೀಡದ ಅದ್ಭುತ ಗುಣಮಟ್ಟದ ದೃಶ್ಯಗಳನ್ನು ಅಲೆಕ್ಸಾ 35 ನೀಡುತ್ತದೆ. ಭಿನ್ನ ಬಣ್ಣಗಳನ್ನು ಅವುಗಳು ಇರುವಂತೆಯೇ ಗುರುತಿಸಿ ಬಹುತೇಕ ನಿಖರವಾಗಿ ಸೆರೆ ಹಿಡಿಯುತ್ತದೆ. ಈ ಕ್ಯಾಮೆರಾದಷ್ಟು ನಿಖರವಾಗಿ ಪ್ರಪಂಚದ ಇನ್ಯಾವುದೇ ಕ್ಯಾಮೆರಾ ಬಣ್ಣಗಳನ್ನು ಸೆರೆಹಿಡಿಯುವುದಿಲ್ಲ ಎನ್ನುತ್ತದೆ ‘ಅಲೆಕ್ಸಾ 35’ ತಯಾರಿಸುವ ಆರಿ ಸಂಸ್ಥೆ. ಈ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಿದರೆ ಕಲರ್ ಗ್ರೇಡಿಂಗ್ ಸುಲಭವಾಗುತ್ತದೆ ಮತ್ತು ಹೆಚ್ಚು ಪ್ರಯೋಗಕ್ಕೂ ಅವಕಾಶ ಇರುತ್ತದೆ.

ಬ್ಯಾಗ್​ಗ್ರೌಂಡ್ ಬ್ಲರ್, ಹಿನ್ನೆಲೆಯಲ್ಲಿ ಬೇಕಾದ ಬಣ್ಣದ ಆಯ್ಕೆ ಎಲ್ಲವೂ ಸಾಕಷ್ಟು ಶಾರ್ಪ್ ಆಗಿ ಬರುವಂತೆ ಈ ಕ್ಯಾಮೆರಾ ಶೂಟ್ ಮಾಡುತ್ತದೆ. ಪ್ರಶಾಂತ್ ನೀಲ್​ಗೆ ಕಪ್ಪು ಬಣ್ಣದ ಮೇಲೆ ವಿಶೇಷ ಮೋಹವಿರುವುದು ಗೊತ್ತಿರುವುದೇ. ಈ ಕ್ಯಾಮೆರಾ ಬಳಸಿ ಕಪ್ಪು-ಬಿಳುಪು ನಡುವೆ ಆಟವೇ ಆಡಿದಂತಿದ್ದಾರೆ ಭುವನ್ ಗೌಡ. ‘ಬ್ಯಾಟ್​ಮ್ಯಾನ್’ ಸಿನಿಮಾ ಮಾದರಿಯ ಕಪ್ಪು ಬ್ಲರ್ ಹಿನ್ನೆಲೆಯನ್ನು ಈ ಸಿನಿಮಾದಲ್ಲಿ ಬಳಸಿದ್ದಾರೆ ಎನ್ನಲಾಗುತ್ತಿದೆ. ಭುವನ್ ಗೌಡ ಹೇಳಿರುವಂತೆ, ಈ ಕ್ಯಾಮೆರಾ ಸೆರೆ ಹಿಡಿಯುವ ದೃಶ್ಯಗಳು ಮಲ್ಟಿಪ್ಲೆಕ್ಸ್ ಸ್ಕ್ರೀನ್ ಹಾಗೂ ಸಾಧಾರಣ ಚಿತ್ರಮಂದಿರದ ಸ್ಕ್ರೀನ್​ ಎರಡರಲ್ಲೂ ಅದ್ಭುತವಾಗಿ ಕಾಣುತ್ತದೆ.

ಅಲೆಕ್ಸಾ 35 ಕ್ಯಾಮೆರಾ ಬಳಸಿ ಈಗಾಗಲೇ ಕೆಲವು ಹಾಲಿವುಡ್ ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ. ‘ಸಲಾರ್’ ರೀತಿಯೇ ಕಪ್ಪು ಹಿನ್ನೆಲೆಯುಳ್ಳ ‘ಈಕ್ವಲೈಝರ್ 3’ ಸಿನಿಮಾವನ್ನು ಇದೇ ಕ್ಯಾಮೆರಾದಿಂದ ಚಿತ್ರೀಕರಣ ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆ ಆಗಿರುವ ‘ಪ್ರಿಸಿಲ್ಲಾ’, ‘ಓರ್ಫನ್ ಬ್ಲಾಕ್ ಎಖೋಸ್’ ವೆಬ್ ಸರಣಿ, ‘ಮೇ ಡಿಸೆಂಬರ್’ ಇನ್ನೂ ಕೆಲವು ಸಿನಿಮಾ ಹಾಗೂ ವೆಬ್ ಸರಣಿಗಳನ್ನು ಇದೇ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಲಾಗಿದೆ. ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ