ಇದು ‘ಜಸ್ಟ್ ಪಾಸ್’ ಆದವರ ಕಾಲೇಜು; ಇದಕ್ಕೆ ರಂಗಾಯಣ ರಘು ಪ್ರಿನ್ಸಿಪಾಲ್
ಶ್ರೀ ಮಹದೇವ್ ಮತ್ತು ಪ್ರಣತಿ ಅವರು ‘ಜಸ್ಟ್ ಪಾಸ್’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ರಂಗಾಯಣ ರಘು, ಗೋವಿಂದೇ ಗೌಡ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಟೀಸರ್ಗೆ ಮೆಚ್ಚುಗೆ ಸಿಕ್ಕಿರುವುದಕ್ಕೆ ಚಿತ್ರತಂಡಕ್ಕೆ ಖುಷಿ ಆಗಿದೆ.
ನಟ ಶ್ರೀ ಮಹದೇವ್ (Shri Mahadev) ಅವರು ಸ್ಯಾಂಡಲ್ವುಡ್ನಲ್ಲಿ ಕೆಲವು ಗಮನಾರ್ಹ ಸಿನಿಮಾಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕಾಲೇಜು ಕಥೆಗಳಿಗೆ ಹೆಚ್ಚು ಸೂಕ್ತ ಆಗುವಂತೆ ಇರುವ ಅವರು ಈಗಾಗಲೇ ‘ಹೊಂದಿಸಿ ಬರೆಯಿರಿ’, ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈಗ ಅವರು ಮತ್ತೊಂದು ಕಾಲೇಜು ಕಥೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಜಸ್ಟ್ ಪಾಸ್’ (Just Pass) ಎಂಬುದು ಈ ಸಿನಿಮಾದ ಹೆಸರು. ‘ರಾಯ್ಸ್ ಎಂಟರ್ಟೈನ್ಮೆಂಟ್’ ಮೂಲಕ ಕೆ.ವಿ. ಶಶಿಧರ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕೆ.ಎಂ. ರಘು ಅವರು ನಿರ್ದೇಶನ ಮಾಡುತ್ತಿದ್ದಾರೆ.
ಶ್ರೀ ಮಹದೇವ್ ಮತ್ತು ಪ್ರಣತಿ ಅವರು ‘ಜಸ್ಟ್ ಪಾಸ್’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ‘ಎ2 ಮ್ಯೂಸಿಕ್’ ಮೂಲಕ ರಿಲೀಸ್ ಆಗಿರುವ ಈ ಟೀಸರ್ಗೆ ಜನಮೆಚ್ಚುಗೆ ಸಿಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಸಂತಸವನ್ನು ಹಂಚಿಕೊಳ್ಳಲು ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ಸಿನಿಮಾ ಶುರುವಾಗಿದ್ದು ಹೇಗೆ ಎಂಬುದನ್ನು ನಿರ್ದೇಶಕ ರಘು ತಿಳಿಸಿದ್ದಾರೆ. ‘ನಾನು ನಮ್ಮೂರ ಜಾತ್ರೆಗೆ ಹೋಗಿದ್ದೆ. ಸ್ನೇಹಿತರೊಬ್ಬರು ಕರೆ ಮಾಡಿ, ‘ನಿರ್ಮಾಪಕ ಶಶಿಧರ್ ಒಂದು ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ. ಕಥೆ ಹೇಳು ಬಾ’ ಅಂತ ಮೈಸೂರಿಗೆ ಕರೆದರು. ನಾನು ಹೋಗಿ ಕಥೆ ಹೇಳಿದೆ. ಅದನ್ನು ಇಷ್ಟಪಟ್ಟು ಶಶಿಧರ್ ಅವರು ನಿರ್ಮಾಣ ಆರಂಭಿಸಿದರು’ ಎಂದಿದ್ದಾರೆ ರಘು. ‘ಹೆಚ್ಚು ಅಂಕ ತೆಗೆದವರಿಗೆ ಒಂದು ಕಾಲೇಜು ಇರುವ ರೀತಿಯೇ, ಇದು ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಗಳಿಗಾಗಿ ಸ್ಥಾಪಿತವಾದ ಕಾಲೇಜು. ಕ್ಯಾಂಪಸ್ನಲ್ಲೇ ಹೆಚ್ಚು ಶೂಟಿಂಗ್ ನಡೆಯುತ್ತದೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದಂತೆ ನಿರ್ಮಾಣ ಮಾಡಿದ್ದಾರೆ’ ಎಂದು ಕೆ.ಎಂ.ರಘು ಹೇಳಿದ್ದಾರೆ.
ಇದನ್ನೂ ಓದಿ: ಕಡಲೆ ಕಾಯಿ ಪರಿಷೆಯಲ್ಲಿ ಎಂಜಾಯ್ ಮಾಡಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು
‘ಜಸ್ಟ್ ಪಾಸ್’ ಸಿನಿಮಾದಲ್ಲಿ ಶ್ರೀ ಮಹದೇವ್ ಅವರು ಅರ್ಜುನ ಎಂಬ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಟ ರಂಗಾಯಣ ರಘು ಅವರು ಪ್ರಾಂಶುಪಾಲರ ಪಾತ್ರ ಮಾಡಿದ್ದಾರೆ. ಗೋವಿಂದೇ ಗೌಡ ಕೂಡ ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಜೊತೆ ಸೇರಿ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸುಜಯ್ ಕುಮಾರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ನಿರ್ಮಾಪಕ ಕೆ.ವಿ. ಶಶಿಧರ್ ಅವರಿಗೆ ನಟನಾಗಬೇಕು ಎಂಬ ಆಸೆ ಇತ್ತು. ಆದರೆ ಅವರಿಗೆ ಅವಕಾಶ ಸಿಗಲಿಲ್ಲ. ಬಳಿಕ ಅವರು ಬೇರೆ ಬಿಸ್ನೆಸ್ ಆರಂಭಿಸಿದ್ದರು. ಈಗ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಜನವರಿ ಕೊನೆ ವಾರದಲ್ಲಿ ‘ಜಸ್ಟ್ ಪಾಸ್’ ಸಿನಿಮಾವನ್ನು ಬಿಡುಗಡೆ ಮಾಡುವ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.