‘ಕಾಟೇರ’ ಸಿನಿಮಾದ ಹಲವು ಗುಟ್ಟುಗಳ ಬಿಚ್ಚಿಟ್ಟ ದರ್ಶನ್
Darshan: ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್, ತಮ್ಮ ಸಿನಿಮಾದ ಕೆಲವು ಗುಟ್ಟುಗಳನ್ನು ಬಿಟ್ಟುಕೊಟ್ಟರು.
ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿ ಇಂದು (ಡಿಸೆಂಬರ್ 14) ರಂದು ನಡೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್, ಸಿನಿಮಾದ ಬಗ್ಗೆ ಹಲವು ಗುಟ್ಟುಗಳನ್ನು ಬಿಟ್ಟುಕೊಟ್ಟರು. ಸಿನಿಮಾದಲ್ಲಿನ ತಮ್ಮ ಪಾತ್ರ, ಸಿನಿಮಾದಲ್ಲಿರುವ ಫೈಟ್, ಹಾಡು, ಶ್ರುತಿ, ಕುಮಾರ್ ಗೋವಿಂದ್ ಅವರ ಪಾತ್ರಗಳು, ಸಿನಿಮಾದ ಥೀಮ್ ಇನ್ನೂ ಹಲವು ವಿಷಗಳ ಬಗ್ಗೆ ದರ್ಶನ್ ಮಾತನಾಡಿದರು.
‘‘ಎಲ್ಲರೂ ತಮ್ಮ ಸಿನಿಮಾ ವಿಶೇಷ ಎನ್ನುತ್ತಾರೆ. ಆದರೆ ನಮ್ಮ ‘ಕಾಟೇರ’ ಸಿನಿಮಾ ನಿಜವಾಗಿಯೂ ಭಿನ್ನ. ಕಮರ್ಶಿಯಲ್ ಅಂಶಗಳಿಗಿಂತಲೂ ಕಂಟೆಂಟ್ಗೆ ಹೆಚ್ಚು ಆದ್ಯತೆ ನೀಡಿದ್ದೇವೆ, ದರ್ಶನ್ ಸಿನಿಮಾ ಎಂದರೆ ಓಪನಿಂಗ್ ಸಾಂಗ್ ಅಥವಾ ಫೈಟ್ನಲ್ಲಿ ಎಂಟ್ರಿ ತಗೋತಾನೆ ಅಂದುಕೊಂಡಿರುತ್ತಾರೆ. ಆದರೆ ಈ ಸಿನಿಮಾದಲ್ಲಿ ಮೊದಲ ಹಾಡು ಬರುವುದು 20 ನಿಮಿಷ ಆದಮೇಲೆ, ಮೊದಲ ಫೈಟ್ ನೋಡಲು ಬರೋಬ್ಬರಿ 40 ನಿಮಿಷ ಕಾಯಬೇಕು. ಈ ಹಿಂದಿನ ನನ್ನ ಕಮರ್ಶಿಯಲ್ ಸಿನಿಮಾಗಳ ಮಾದರಿಯಲ್ಲಿ ಈ ಸಿನಿಮಾ ಮಾಡಿಲ್ಲ ಅನ್ನುವುದಕ್ಕೆ ಇದೇ ಉದಾಹರಣೆ’’ ಎಂದರು ದರ್ಶನ್.
ಸಿನಿಮಾದ ಫೈಟ್ಗಳಲ್ಲಿಯೂ ಭಿನ್ನತೆ ಇರುವ ಬಗ್ಗೆ ಒಗಟಿನ ರೀತಿಯಲ್ಲಿಯೇ ಮಾತನಾಡಿದ ದರ್ಶನ್, ‘‘ರಾಮ್-ಲಕ್ಷ್ಮಣ್ ಅವರು ಈ ಸಿನಿಮಾಕ್ಕೆ ಫೈಟ್ ಕೊರಿಯಾಗ್ರಫಿ ಮಾಡಿದ್ದಾರೆ. ಸಿನಿಮಾದಲ್ಲಿ ನಾವು ಇಟ್ಟಿರುವುದು ಮೂರೇ ಫೈಟ್ ಸೀನ್. ಮೊದಲ ಫೈಟ್ನಲ್ಲಿ ಎರಡೂ ಕೈ ಇರುತ್ತೆ, ಎರಡನೇ ಫೈಟ್ನಲ್ಲಿ ಒಂದು ಕೈ ಇರುತ್ತೆ, ಮೂರನೇ ಫೈಟ್ನಲ್ಲಿ ಎರಡೂ ಕೈ ಇರೊಲ್ಲ. ಯೋಚನೆ ಮಾಡಿ ಅವನು ಹೇಗೆ ಫೈಟ್ ಮಾಡಿರಬಹುದೆಂದು’’ ಎಂದು ತಲೆಗೆ ಹುಳ ಬಿಟ್ಟರು.
ಇದನ್ನೂ ಓದಿ:ಯಶ್, ದರ್ಶನ್ ಕೆಸಿಸಿ ಆಡುತ್ತಿಲ್ಲವೇಕೆ: ಸುದೀಪ್ ಕೊಟ್ಟರು ಸೂಕ್ತ ಉತ್ತರ
‘‘ಭಿನ್ನವಾದ ಕತೆಗಳನ್ನು ನನಗೆ ಒಪ್ಪಿಸುವುದು ಬಹಳ ಕಷ್ಟ, ಆದರೆ ತರುಣ್ ನನ್ನನ್ನು ಒಪ್ಪಿಸಿದ. ಮಾತ್ರವಲ್ಲ ರಾಕ್ಲೈನ್ ಅವರನ್ನೂ ಸಹ ಒಪ್ಪಿಸಿದ. ನನಗೆ ಒಂದೇ ಸಿಟಿಂಗ್ನಲ್ಲಿ ಎರಡು ಗಂಟೆಯಲ್ಲಿ ಕತೆ ಹೇಳಿ ಓಕೆ ಮಾಡಿಸಿದ. ಸಿನಿಮಾ ಮಾಡುವಾಗಲೂ ಅಷ್ಟೆ ಜಾಗೃತೆಯಾಗಿ, ಶಿಸ್ತಾಗಿ ಸಿನಿಮಾ ಮಾಡಿದ. ರಾಕ್ಲೈನ್ ಅವರು ಸಹ ಇಂಥಹಾ ಭಿನ್ನ ಸಬ್ಜೆಕ್ಟ್ ಅನ್ನು ಒಪ್ಪಿ ಅವರು ಮಾಡಿರುವ ಧೈರ್ಯಕ್ಕೆ ಮೆಚ್ಚುಗೆ ಸಲ್ಲಲೇ ಬೇಕು. ಇದು ನನ್ನ ಹಾಗೂ ಅವರ ಎರಡನೇ ಸಿನಿಮಾ. ಈ ಸಿನಿಮಾದ ರಷಸ್ ನೋಡಿ, ನನ್ನನ್ನು ಬಾಚಿ ತಬ್ಬಿಕೊಂಡರು’’ ಎಂದರು ದರ್ಶನ್.
‘‘ಸಿನಿಮಾದ ಚಿತ್ರೀಕರಣ ಮುಗಿಯುವುದು ತುಸು ತಡವಾಯ್ತು, ಅದಕ್ಕೆ ಕಲಾವಿದರ ಡೇಟ್ಸ್ ಇನ್ನಿತರೆ ಕಾರಣವಲ್ಲ ಬದಲಿಗೆ ಎರಡು ಹಳ್ಳಿಗಳ ಸೆಟ್ ನಿರ್ಮಾಣ ಮಾಡಬೇಕಿತ್ತು, ಒಂದು ಹಳ್ಳಿಯ ಸೆಟ್ ಅನ್ನೇ ಬದಲಾಯಿಸಿ ಚಿತ್ರೀಕರಣ ಮಾಡಿ ಎಂದು ಹೇಳಿದೆ ಆದರೆ ರಾಕ್ಲೈನ್ ಒಪ್ಪಲಿಲ್ಲ, ಬದಲಿಗೆ ಸಮಯ ತೆಗೆದುಕೊಂಡು ಎರಡು ಹಳ್ಳಿಗಳ ಸೆಟ್ ನಿರ್ಮಿಸಿದರು. ಸೆಟ್ ನಿರ್ಮಾಣವಾಗುವವರೆಗೆ ನಾನು ಮನೆಯಲ್ಲಿ ಖಾಲಿ ಕೂರಬೇಕಾಯ್ತು, ಆಗ ಬೇಸರವಾಗಿತ್ತು, ಆದರೆ ಸೆಟ್ಗೆ ಬಂದು ನಿರ್ಮಾಣ ಮಾಡಿರುವ ಸೆಟ್ ನೋಡಿದಾಗ ನಿಜಕ್ಕೂ ಖುಷಿಯಾಯ್ತು’’ ಎಂದರು.
ಸಿನಿಮಾದಲ್ಲಿ ನಟಿಸಿರುವ ಶ್ರುತಿ, ಕುಮಾರ್ ಗೋವಿಂದ್, ಅವಿನಾಶ್, ನಾಯಕಿ ರಾಧನಾ ಎಲ್ಲರ ಪ್ರತಿಭೆ, ಸಿನಿಮಾ ಪ್ರೀತಿಯನ್ನು ಕೊಂಡಾಡಿದ ನಟ ದರ್ಶನ್, ಸಿನಿಮಾಕ್ಕೆ ಕೆಲಸ ಮಾಡಿರುವ ತಂತ್ರಜ್ಞರ ಹೆಸರುಗಳನ್ನು ಹೇಳಿ ಧನ್ಯವಾದಗಳನ್ನು ತಿಳಿಸಿದರು. ಒಟ್ಟಾರೆಯಾಗಿ ‘ಕಾಟೇರ’ ಸಿನಿಮಾ ಒಂದು ‘ಟೀಂ ಎಫರ್ಟ್’ ಸಿನಿಮಾವನ್ನು ಡಿಸೆಂಬರ್ 29ರಂದು ಬಿಡುಗಡೆ ಮಾಡುತ್ತಿದ್ದೇವೆ, ಸಿನಿಮಾದ ಟ್ರೈಲರ್ ಅನ್ನು ಇದೇ ತಿಂಗಳು 16ರಂದು ಹುಬ್ಬಳ್ಳಿಯಲ್ಲಿ ತೆರೆಗೆ ತರಲಿದ್ದೇವೆ’’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:28 pm, Thu, 14 December 23