ಯಶ್, ದರ್ಶನ್ ಕೆಸಿಸಿ ಆಡುತ್ತಿಲ್ಲವೇಕೆ: ಸುದೀಪ್ ಕೊಟ್ಟರು ಸೂಕ್ತ ಉತ್ತರ

Kichcha Sudeep: ಸುದೀಪ್ ನೇತೃತ್ವದಲ್ಲಿ ಕೆಸಿಸಿ ನಾಲ್ಕನೇ ಸೀಸನ್ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ದರ್ಶನ್, ಯಶ್ ಹಾಗೂ ಶೆಟ್ಟಿ ಗ್ಯಾಂಗ್ ಏಕೆ ಭಾಗಿಯಾಗಿಲ್ಲ ಎಂಬ ಬಗ್ಗೆ ಸುದೀಪ್ ಉತ್ತರಿಸಿದ್ದಾರೆ.

ಯಶ್, ದರ್ಶನ್ ಕೆಸಿಸಿ ಆಡುತ್ತಿಲ್ಲವೇಕೆ: ಸುದೀಪ್ ಕೊಟ್ಟರು ಸೂಕ್ತ ಉತ್ತರ
Follow us
|

Updated on: Dec 13, 2023 | 9:45 PM

ಸುದೀಪ್ (Sudeep) ಮತ್ತೊಮ್ಮೆ ಕ್ರಿಕೆಟ್ (Cricket) ಕಿಟ್ ತೊಟ್ಟು ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಅವರ ಪ್ರೀತಿಯ ಕೆಸಿಸಿಯನ್ನು ಮತ್ತೊಮ್ಮೆ ತಂದಿದ್ದಾರೆ. ಕೆಲವೇ ದಿನಗಳಲ್ಲಿ ಕೆಸಿಸಿ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದೆ. ಈ ಕುರಿತು ಇಂದು (ಡಿಸೆಂಬರ್ 13) ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಗಳ ಬಗ್ಗೆ, ತಂಡಗಳ ಬಗ್ಗೆ ಮಾಹಿತಿ ನೀಡಿದರು. ಈ ಬಾರಿಯ ಕೆಸಿಸಿಯಲ್ಲಿನ ಭಿನ್ನತೆಗಳ ಬಗ್ಗೆಯೂ ಸುದೀಪ್ ಮಾತನಾಡಿದರು. ಈ ಸಮಯದಲ್ಲಿ ದರ್ಶನ್, ಯಶ್, ಶೆಟ್ಟಿ ಗ್ಯಾಂಗ್ ಯಾಕೆ ಆಡುತ್ತಿಲ್ಲ, ಅವರನ್ನೇಕೆ ತಂಡಗಳಲ್ಲಿ ಸೇರಿಸಿಕೊಂಡಿಲ್ಲ ಎಂಬ ಪ್ರಶ್ನೆಯೊಂದು ಬಂತು.

ರಿಷಬ್, ರಕ್ಷಿತ್, ರಾಜ್ ಶೆಟ್ಟಿ ಅವರುಗಳು ಏಕೆ ಆಡುತ್ತಿಲ್ಲ ಎಂಬ ಬಗ್ಗೆ ಮಾತನಾಡಿದ ಸುದೀಪ್, ‘‘ಅವರು ಆಡುವುದಿಲ್ಲ, ರಿಷಬ್ ಶೆಟ್ಟರನ್ನು ಕೇಳಿದರೆ, ಸಾರ್ ನಾನು ಆಡಲ್ಲ, ಗ್ರೌಂಡ್​ಗೆ ಬೇಕಾದರೆ ಬರ್ತೀನಿ ಅಂತಾರೆ, ಅದೇ ರಾಜ್ ಶೆಟ್ಟರು, ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ಆಡಿದ್ದರಲ್ಲ ಕ್ರಿಕೆಟ್ ಆ ಥರದ ಕ್ರಿಕೆಟ್ ಬೇಕಾದರೆ ಆಡ್ತೀನಿ ಅಂತಾರೆ. ಇನ್ನು ರಕ್ಷಿತ್ ಶೆಟ್ಟಿಯಂತೂ ಕ್ರಿಕೆಟ್ ಹೆಸರು ಕೇಳಿದರೆ ಸಾರ್ ನಾನು ಬರಲ್ಲ, ನಂಗೆ ಆಡೋಕೆ ಬರಲ್ಲ ಅಂತಾರೆ ಹೀಗಿದ್ದಾಗ ಏನು ಮಾಡೋದು. ಅಲ್ಲದೆ ಇದು ಲೆದರ್ ಬಾಲ್ ಕ್ರಿಕೆಟ್ ಅನುಭವ ಇಲ್ಲದವರನ್ನು ಬಲವಂತದಿಂದ ಆಡುವಂತೆ ಮಾಡಲು ಸಾಧ್ಯವಿಲ್ಲ’’ ಎಂದರು ಸುದೀಪ್.

ಇದನ್ನೂ ಓದಿ:ನೀನು ಯಾವಾಗಲೂ ನನ್ನ ಗೆಳೆಯನಾಗಿರ್ತೀಯಾ: ದ್ವೇಷ ಮರೆತು ಸುದೀಪ್ ಎದುರು ಒಂದಾದ ವಿನಯ್-ಕಾರ್ತಿಕ್

ಯಶ್, ದರ್ಶನ್ ಯಾಕೆ ಆಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘‘ನಾವು ಎಲ್ಲರನ್ನೂ ಕರೆದಿದ್ದೇವೆ. ಕೆಸಿಸಿ ನನ್ನೊಬ್ಬನದ್ದಲ್ಲ, ಚಿತ್ರರಂಗ ಸೇರಿ ಮಾಡುತ್ತಿರುವ ಪಂದ್ಯಾವಳಿ ಇದು, ಹಾಗಾಗಿ ಎಲ್ಲರಿಗೂ ಆಹ್ವಾನ ಹೋಗಿದೆ. ಕೆಸಿಸಿ ಎಂಬುದು ಬಲವಂತ ಅಲ್ಲ, ಅದು ಗೌರವ. ನಾವು ಎಲ್ಲರಿಗೂ ಆಹ್ವಾನ ಕಳಿಸಿದ್ದೇವೆ, ಕೆಲವರು ಬರುತ್ತೇವೆ ಎಂದಿದ್ದಾರೆ, ಕೆಲವರು ನಾವು ಆಡದಿದ್ದರೂ ಗ್ರೌಂಡ್​ಗೆ ಬಂದು ನಿಮ್ಮ ಜೊತೆ ಇರುತ್ತೇವೆ ಎಂದಿದ್ದಾರೆ. ಧ್ರುವ ಸರ್ಜಾ ಸಹ ಬರುತ್ತಿಲ್ಲ, ಆದರೆ ಅವರೇ ನನಗೆ ಕಾಲ್ ಮಾಡಿ, ಕೆಡಿ ಸಿನಿಮಾದ ಕೆಲಸದಲ್ಲಿದ್ದೇನೆ, ಆಡಲು ಬರಲಾಗುತ್ತಿಲ್ಲ ಆದರೆ ಗ್ರೌಂಡ್​ಗೆ ಬರುತ್ತೇನೆ ಎಂದಿದ್ದಾರೆ’’ ಎಂದು ಮಾಹಿತಿ ನೀಡಿದರು.

ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ನಾಲ್ಕನೇ ಸೀಸನ್‌ ಇದೀಗ ನಡೆಯಲಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ. ನವೆಂಬರ್ 26ರಂದು ಕೆಸಿಸಿ ಹರಾಜು ಪ್ರತಿಕ್ರಿಯೆ ನಡೆದು, ತಂಡಗಳ ವಿಂಗಡಣೆಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಪಂದ್ಯಗಳು ಡಿಸೆಂಬರ್ 23 ರಿಂದ 25ವರೆಗೆ ನಡೆಯಲಿದೆ. ಈ ಟೂರ್ನಿಗೆ ಮಾಜಿ ಅಂತರಾಷ್ಟ್ರೀಯ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ