‘ಬರ್ಮ’ನಲ್ಲಿ ಬಾಲಿವುಡ್ ನಟ: ಮತ್ತೆ ಕನ್ನಡಕ್ಕೆ ಬಂದ ನಟ ಶಾವರ್ ಅಲಿ
Sandalwood: ಬಾಲಿವುಡ್ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗದಲ್ಲಿಯೂ ತಮ್ಮ ವಿಲನ್ ಪಾತ್ರಗಳಿಂದ ಗಮನ ಸೆಳೆದಿರುವ ಬಾಲಿವುಡ್ ನಟ ಈಗ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.
ದೊಡ್ಡ ದೊಡ್ಡ ಬಾಲಿವುಡ್ (Bollywood) ನಟರು ದಕ್ಷಿಣ ಭಾರತದ ಚಿತ್ರರಂಗದತ್ತ ಧಾವಿಸುತ್ತಿದ್ದಾರೆ. ಸಂಜಯ್ ದತ್, ಸೈಫ್ ಅಲಿ ಖಾನ್ ಅಂಥಹವರೇ ದಕ್ಷಿಣದ ಚಿತ್ರರಂಗಕ್ಕೆ ಬಂದು ಇಲ್ಲಿನ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಂಜಯ್ ದತ್ ಅಂಥಹಾ ದೊಡ್ಡ ಸ್ಟಾರ್ ಅನ್ನು ದಕ್ಷಿಣಕ್ಕೆ ಕರೆತಂದು ಖಡಕ್ ವಿಲನ್ ಮಾಡಿದ ಶ್ರೇಯ ಕನ್ನಡ ಚಿತ್ರರಂಗಕ್ಕೆ ಸಲ್ಲಬೇಕು. ಇದೀಗ ಈ ಹಿಂದೆ ಬಾಲಿವುಡ್ನಲ್ಲಿ ನಟಿಸಿದ್ದ ನಟರೊಬ್ಬರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ, ‘ಬರ್ಮ’ ಸಿನಿಮಾ ಮೂಲಕ.
ಚೇತನ್ ಕುಮಾರ್ ಹಾಗೂ ರಕ್ಷ್ ಜೋಡಿಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಬರ್ಮ’ದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಟೈಟಲ್ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು ನಿರೀಕ್ಷೆ ಹುಟ್ಟಿಸಿದೆ. ಇದೀಗ ಈ ಸಿನಿಮಾದ ಹೊಸ ಅಪ್ ಡೇಟ್ ಒಂದು ಹೊರಬಿದ್ದಿದೆ. ‘ಬರ್ಮ’ ಸಿನಿಮಾದಲ್ಲಿ ಯಾವ ನಟರು ನಟಿಸಲಿದ್ದಾರೆ? ಯಾರು ಚಿತ್ರದ ಭಾಗವಾಲಿದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಇಷ್ಟು ದಿನ ಬಹಿರಂಗಪಡಿಸಿರಲಿಲ್ಲ. ಆದರೆ ಈಗ ನಿರ್ದೇಶಕ ಚೇತನ್ ಕುಮಾರ್ ‘ಬರ್ಮ’ ಸಿನಿಮಾಕ್ಕಾಗಿ ಬಾಲಿವುಡ್ ತಾರೆಯನ್ನು ಕರೆತಂದಿದ್ದಾರೆ.
ಇದನ್ನೂ ಓದಿ: ನಾಯಿ ಕಚ್ಚಿದ ಪ್ರಕರಣದಲ್ಲಿ ದರ್ಶನ್ಗೆ ರಿಲೀಫ್; ಚಾರ್ಜ್ಶೀಟ್ನಲ್ಲಿ ಇರಲ್ಲ ನಟನ ಹೆಸರು
ಹಿಂದಿ ಮಾತ್ರವೇ ಅಲ್ಲದೆ ತೆಲುಗು ಸಿನಿಮಾಗಳಲ್ಲಿಯೂ ಮಿಂಚಿರುವ ಶಾವರ್ ಅಲಿ ‘ಬರ್ಮ’ ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಆದಿತ್ಯ ನಟನೆಯ ‘ರೆಬಲ್’ ಸಿನಿಮಾದಲ್ಲಿ ಶಾವರ್ ಅಲಿ ಈ ಹಿಂದೆ ನಟಿಸಿದ್ದರು. ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾದಲ್ಲಿಯೂ ವಿಲನ್ ಆಗಿ ಶಾವರ್ ಅಲಿ ಅಬ್ಬರಿಸಿದ್ದರು. ಇದೀಗ ಆರು ವರ್ಷದ ಬಳಿಕ ಮತ್ತೊಮ್ಮೆ ಕನ್ನಡ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಹಿಂದಿ ಚಿತ್ರರಂಗದಿಂದ ನಟನೆ ಆರಂಭಿಸಿದ್ದ ಶಾವರ್ ಅವರೀಗ ಟಾಲಿವುಡ್, ಸ್ಯಾಂಡಲ್ ವುಡ್ ನಲ್ಲಿಯೂ ಮಿಂಚುತ್ತಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ತಯಾರಾಗುತ್ತಿರುವ ‘ಬರ್ಮ’ ಸಿನಿಮಾದ ವಿಶೇಷ ಪಾತ್ರದಲ್ಲಿ ಶಾವರ್ ಅಲಿ ನಟಿಸುತ್ತಿದ್ದಾರೆ.
‘ಬರ್ಮ’ ಸಿನಿಮಾದಲ್ಲಿ ರಕ್ಷ್ ರಾಮ್ ಆಕ್ಷನ್ ಹೀರೋ ಆಗಿ ಅಬ್ಬರಿಸಲಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಬರ್ಮ’ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಹಿಂದೆ ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳಲ್ಲಿ ಚೇತನ್ ಕುಮಾರ್ ಹಾಗೂ ವಿ ಹರಿಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು ಆ ಎರಡೂ ಸಿನಿಮಾಗಳು ಹಿಟ್ ಆಗಿದ್ದವು. ಈಗ ‘ಬರ್ಮ’ ಚಿತ್ರದ ಮೂಲಕ ಮೂರನೇ ಬಾರಿಗೆ ಚೇತನ್ ಕುಮಾರ್ – ವಿ ಹರಿಕೃಷ್ಣ ಒಂದಾಗಿದ್ದಾರೆ. ಕಿರುತೆರೆ ಲೋಕದಲ್ಲಿ ಜನಪ್ರಿಯ ನಟರಾಗಿರುವ ರಕ್ಷ್ ಈಗ ‘ಬರ್ಮ’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ