
ಕಳೆದ ತಿಂಗಳಷ್ಟೆ ದುಲ್ಕರ್ ಸಲ್ಮಾನ್ (Dulquer Salman) ಮನೆಯ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ಅವರ ಸಂಗ್ರಹದಲ್ಲಿದ್ದ ಎಲ್ಲ ಕಾರುಗಳ ದಾಖಲೆಗಳನ್ನು, ಖರೀದಿಸಿದ ಮೂಲಗಳನ್ನು ಪರಿಶೀಲನೆ ಮಾಡಿದ್ದರು. ಮಾತ್ರವಲ್ಲದೆ ಎರಡು ಕಾರನ್ನು ಸೂಕ್ತ ದಾಖಲೆಗಳ ಕೊರತೆಯ ಕಾರಣ ನೀಡಿ ವಶಕ್ಕೆ ಸಹ ಪಡೆದುಕೊಂಡಿದ್ದರು. ದುಲ್ಕರ್ ಸಲ್ಮಾನ್ ಅಕ್ರಮವಾಗಿ ಹೊರದೇಶದಿಂದ ತಂದ, ನಕಲಿ ದಾಖಲೆಗಳುಳ್ಳ ಕಾರುಗಳನ್ನು ಕಡಿಮೆ ದರಕ್ಕೆ ಖರೀದಿ ಮಾಡಿದ್ದಾರೆ ಎಂಬ ಆರೋಪವೂ ಅವರ ಮೇಲೆ ಬಂದಿತ್ತು. ಅದೆಲ್ಲ ಇರುವಾಗಲೇ ಇದೀಗ ದುಲ್ಕರ್ ಸಲ್ಮಾನ್ ತಮ್ಮ ಸಂಗ್ರಹಕ್ಕೆ ಇನ್ನೊಂದು ಕಾರನ್ನು ಸೇರಿಸಿಕೊಂಡಿದ್ದಾರೆ.
ದುಲ್ಕರ್ ಸಲ್ಮಾನ್ ಬಳಿ ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಕಾರುಗಳಿವೆ. ವಿಶ್ವದ ಅತ್ಯುತ್ತಮ ಸಂಸ್ಥೆಗಳ ಹೊಚ್ಚ ಹೊಸ ಕಾರುಗಳ ಜೊತೆಗೆ ಹಳೆಯ, ಐಕಾನಿಕ್ ಎನಿಸಿಕೊಂಡ ಹಲವು ಕಾರುಗಳನ್ನು ದುಲ್ಕರ್ ಸಲ್ಮಾನ್ ಖರೀದಿಸಿ ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಕಾರುಗಳನ್ನು ಹೊಂದಿದ್ದರೂ ಸಹ ದುಲ್ಕರ್ ಸಲ್ಮಾನ್ ಇದೀಗ ಹೊಸದೊಂದು ಕಾರನ್ನು ಇತ್ತೀಚೆಗಷ್ಟೆ ಖರೀದಿ ಮಾಡಿದ್ದಾರೆ. ವಿಶೇಷವೆಂದರೆ ಅದೇ ಮಾದರಿಯ ಕಾರೊಂದು ಅವರ ಬಳಿ ಇದ್ದಾಗಿಯೂ ಹೊಸದೊಂದು ಕಾರು ಖರೀದಿ ಮಾಡಿದ್ದಾರೆ.
ಇದನ್ನೂ ಓದಿ:ಕಾರುಗಳ ಕಿಂಗ್ ದುಲ್ಕರ್ ಸಲ್ಮಾನ್, ಸಂಗ್ರಹದಲ್ಲಿರುವ ಕಾರುಗಳೆಷ್ಟು ಗೊತ್ತೆ?
ದುಲ್ಕರ್ ಸಲ್ಮಾನ್ ಅವರು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರೊಂದನ್ನು ಖರೀದಿ ಮಾಡಿದ್ದಾರೆ. ಈ ಹಿಂದೆಯೇ ಅವರು ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಖರೀದಿ ಮಾಡಿದ್ದರು. ಹಾಗಿದ್ದರೂ ಆ ಕಾರಿನ ವಿಶೇಷ ಆವೃತ್ತಿಯಾಗಿರುವ 110 ಆಕ್ಟಾ ಅನ್ನು ಇತ್ತೀಚೆಗಷ್ಟೆ ಖರೀದಿ ಮಾಡಿದ್ದಾರೆ. ಈ ಕಾರು 4.4 ಲೀಟರ್ ಟ್ವಿನ್ ಟರ್ಬೊ ಎಂಜಿನ್ ಅನ್ನು ಒಳಗೊಂಡಿದ್ದು, 100 ಕಿ.ಮೀ ವೇಗವನ್ನು ಕೇವಲ ನಾಲ್ಕು ಸೆಕೆಂಡ್ಗಳಲ್ಲಿ ತಲುಪುತ್ತದೆ. ಇದೊಂದು ಆಲ್ ವೀಲ್ ಡ್ರೈವ್ ಕಾರಾಗಿದ್ದು ರಸ್ತೆ, ಕಚ್ಚಾ ರಸ್ತೆ, ಬೆಟ್ಟದ ಹಾದಿಗಳಲ್ಲಿಯೂ ಸಹ ಈ ಕಾರು ಸುಲಭವಾಗಿ ಕ್ರಮಿಸಬಲ್ಲದು. ಈ ಕಾರಿನ ಈ ವೈಶಿಷ್ಟ್ಯತೆಗಳ ಕಾರಣಕ್ಕೆಂದೇ ದುಲ್ಕರ್ ಸಲ್ಮಾನ್ ಅವರು ಈ ಕಾರು ಖರೀದಿ ಮಾಡಿದ್ದಾರೆ. ಅಂದಹಾಗೆ ಈ ಕಾರಿನ ಬೆಲೆ ಸುಮಾರು ಮೂರು ಕೋಟಿ ರೂಪಾಯಿಗಳು.
ಅಂದಹಾಗೆ ದುಲ್ಕರ್ ಸಲ್ಮಾನ್ ಬಳಿ ಇರುವ ಕಾರುಗಳ ಸಂಗ್ರಹ ಸಾಮಾನ್ಯದ್ದಲ್ಲ. ಎಲ್ಲ ಜಗಪ್ರಸಿದ್ಧ ಐಶಾರಾಮಿ ಬ್ರ್ಯಾಂಡಿನ ಒಂದಕ್ಕಿಂತಲೂ ಹೆಚ್ಚು ಐಶಾರಾಮಿ ಕಾರುಗಳನ್ನು ದುಲ್ಕರ್ ಸಲ್ಮಾನ್ ಖರೀದಿಸಿ ಇಟ್ಟುಕೊಂಡಿದ್ದಾರೆ. ಮರ್ಸಿಡೀಸ್, ಬೆಂಜ್, ಪೋರ್ಷೆ, ಫೆರಾರಿ, ವೋಲ್ವೋ ಇನ್ನೂ ಕೆಲವು ಜಗತ್ತಿನ ನಂ1 ಕಾರು ಕಂಪೆನಿಗಳ ಕಾರುಗಳಿವೆ. ಅದೂ ಸಾಮಾನ್ಯ ಕಾರುಗಳಲ್ಲ, 80, 90ರ ದಶಕದ ಅತ್ಯುತ್ತಮ ಕಾರುಗಳನ್ನು ದುಲ್ಕರ್ ಸಲ್ಮಾನ್ ಖರೀದಿಸಿ ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡಿದ್ದಾರೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ಬಿಎಂಡಬ್ಲುವಿನ ಎಂ3 ಸರಣಿಯ e 28, e 20, e 34, e 36, 46, 92 ಕಾರುಗಳು ಅವರ ಸಂಗ್ರಹದಲ್ಲಿವೆ. ಇವೆಲ್ಲವೂ ಹಳೆಯ ಕಾರುಗಳು, ಬಿಎಂಡಬ್ಲು ಕಂಪೆನಿಯ ಇತ್ತೀಚೆಗೆ ಕೆಲ ಐಶಾರಾಮಿ ಕಾರುಗಳು ಸಹ ದುಲ್ಕರ್ ಬಳಿ ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ