ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (Dwarakish) ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗಿದೆ. 81 ವರ್ಷದ ಜೀವನದಲ್ಲಿ 60 ವರ್ಷ ಚಿತ್ರೋದ್ಯಮದ ಏಳಿಗೆಗೆ ಜೀವನ ಸವೆಸಿದ ಹಿರಿಯ ನಟ ಕಣ್ಮರೆಯಾಗಿದ್ದಾರೆ. ಅವರ ಅಗಲಿಕೆ ನಿಜಕ್ಕೂ ಕನ್ನಡ ಚಲನಚಿತ್ರರಂಗಕ್ಕೆ (sandalwood) ದೊಡ್ಡ ನಷ್ಟ ಉಂಟುಮಾಡಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಟ ದ್ವಾರಕೀಶ್ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನ ನೆರವೇರಿದೆ. ನಾಳೆ ದ್ವಾರಕೀಶ್ ಕುಟುಂಬಸ್ಥರಿಂದ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ರುದ್ರಭೂಮಿಯಲ್ಲಿ ಕುಟುಂಬಸ್ಥರಿಂದ ಪೂಜೆ ಮಾಡಲಿದ್ದು, ಬಳಿಕ ಅಸ್ಥಿ ತೆಗೆದುಕೊಂಡು ಬೆಳಗ್ಗೆ 9ಕ್ಕೆ ಶ್ರೀರಂಗಪಟ್ಟಣದಲ್ಲಿ ವಿಸರ್ಜನೆ ಮಾಡಲಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರು ತಮ್ಮ ನಿವಾಸದಲ್ಲೇ ಕನ್ನಡದ ಹಿರಿಯ ನಟ ದ್ವಾರಕೀಶ್ ನಿನ್ನೆ ವಿಧಿವಶರಾಗಿದ್ದರು. ನಟ, ನಿರ್ದೇಶಕ, ನಿರ್ಮಾಪಕ ಅಂತಾ ಕನ್ನಡ ಸಿನಿ ದುನಿಯಾದಲ್ಲಿ ಆಲ್‌ರೌಂಡರ್ ಆಗಿದ್ದ ದ್ವಾರಕೀಶ್ರ ಅಂತಿಮ ದರ್ಶನಕ್ಕೆ ಇಡೀ ಸ್ಯಾಂಡಲ್‌ವುಡ್ ಕಾಯುತ್ತಿತ್ತು. ಹೀಗಾಗಿ ರವೀಂದ್ರ ಕಲಾ ಕ್ಷೇತ್ರದಲ್ಲೇ ಬೆಳಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ದ್ವಾರಕೀಶ್ ಪಂಚಭೂತಗಳಲ್ಲಿ ಲೀನ; ಹಿರಿಯ ಮಗನಿಂದ ಚಿತೆಗೆ ಅಗ್ನಿಸ್ಪರ್ಶ
ನಟರಾದ ಸುದೀಪ್, ಯಶ್, ದರ್ಶನ್, ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ದೇವರಾಜ್ , ರಾಘವೇಂದ್ರ ರಾಜಕುಮಾರ್, ರಮೇಶ್ ಅರವಿಂದ್, ಕುಮಾರ್ ಬಂಗಾರಪ್ಪ, ಶ್ರೀಮುರುಳಿ, ಸೇರಿದಂತೆ ಇಡೀ ಚಿತ್ರರಂಗವೇ ಅಂತಿಮ ನಮನ ಸಲ್ಲಿಸಿದ್ದರು.
ಸುಧಾರಾಣಿ, ಮಾಳವಿಕಿ ಅವಿನಾಶ್, ಸುಮಲತಾ ಅಂಬರೀಶ್, ಗಿರೀಶ್ ಲೋಕೇಶ್, ಶೃತಿ ಸೇರಿದಂತೆ ನಟಿಯರು ಕೂಡ ಹಿರಿಯಣ್ಣನಿಗೆ ಭಾವುಕ ವಿದಾಯ ಹೇಳಿದ್ದರು. ಅದರಲ್ಲೂ ಶೃತಿಯಂಥೂ ಬಿಕ್ಕಿಬಿಕ್ಕಿ ಅತ್ತಿದ್ದರು.
ಇದನ್ನೂ ಓದಿ: ವಿನೋದ್ ರಾಜ್ ಸೇರಿ ಅನೇಕರನ್ನು ಪರಿಚಯಿಸಿದ್ದೇಕೆ ದ್ವಾರಕೀಶ್? ವಿಷ್ಣು ಮೇಲಿನ ಸಿಟ್ಟು ಕಾರಣವಾ?
ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕವೇ ಸಂತಾಪ ಸೂಚಿಸಿದ್ದರೆ, ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ್ದು ಅವರ ಜತೆಗಿನ ಒಡನಾಟ ಮೆಲುಕು ಹಾಕಿದ್ದರು.
ಕಲಾವಿದರು, ಅಭಿಮಾನಿಗಳು, ಗಣ್ಯರ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನ ಚಾಮರಾಜ ಪೇಟೆಯಲ್ಲಿರುವ ಹಿಂದೂರುದ್ರಭೂಮಿಗೆ ರವಾನಿಸಲಾಯಿತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಐವರು ಪುತ್ರರೂ ಸೇರಿ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಸನ್ನಿವೇಶ, ದ್ವಾರಕೀಶ್ ಎರಡನೇ ಪತ್ನಿ ಶೈಲಜಾಗೆ ಕಣ್ಣೀರು ತರಿಸಿತ್ತು. 81 ವರ್ಷ ಬದುಕಿದ್ದ ದ್ವಾರಕೀಶ್, ಆರು ದಶಕ ಕನ್ನಡ ಚಿತ್ರರಂಗವನ್ನು ಆಳಿದ್ದಾರೆ. ಇದೇ ಪ್ರಚಂಡ ಕುಳ್ಳ ಇನ್ನೂ ನೆನಪು ಮಾತ್ರ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:30 pm, Wed, 17 April 24