ವಿನೋದ್ ರಾಜ್ ಸೇರಿ ಅನೇಕರನ್ನು ಪರಿಚಯಿಸಿದ್ದೇಕೆ ದ್ವಾರಕೀಶ್? ವಿಷ್ಣು ಮೇಲಿನ ಸಿಟ್ಟು ಕಾರಣವಾ?

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೆಲವು ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಆದರೆ, ಪುಟ್ಟಣ್ಣ ಕಣಗಾಲ್ ಅವರು ನೀಡಿದ ಒಂದು ಮಹತ್ವದ ಕಿವಿಮಾತನ್ನು ಸ್ವೀಕರಿಸಿದ್ದರು ದ್ವಾರಕೀಶ್. ಇದಕ್ಕಾಗಿಯೇ ಅವರು ಹಲವರನ್ನು ಪರಿಚಯಿಸಿದ್ದರು.

ವಿನೋದ್ ರಾಜ್ ಸೇರಿ ಅನೇಕರನ್ನು ಪರಿಚಯಿಸಿದ್ದೇಕೆ ದ್ವಾರಕೀಶ್? ವಿಷ್ಣು ಮೇಲಿನ ಸಿಟ್ಟು ಕಾರಣವಾ?
ದ್ವಾರಕೀಶ್-ವಿನೋದ್ ರಾಜ್
Follow us
ರಾಜೇಶ್ ದುಗ್ಗುಮನೆ
|

Updated on:Apr 17, 2024 | 2:35 PM

ದ್ವಾರಕೀಶ್ (Dwarakish) ಹಾಗೂ ವಿಷ್ಣುವರ್ಧನ್ ಮಧ್ಯೆ ಸಾಕಷ್ಟು ಅನ್ಯೋನ್ಯತೆ ಇತ್ತು. ಹಲವು ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಅವೆಲ್ಲವೂ ಹಿಟ್ ಆಗಿದ್ದವು. ವಿಷ್ಣು ನಟನೆಯ ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಿದರು, ನಿರ್ದೇಶಿಸಿದರು. ಆದರೆ, ಒಂದು ಹಂತದಲ್ಲಿ ಇಬ್ಬರೂ ಬೇರೆ ಆದರು. ಆ ಬಳಿಕ ದ್ವಾರಕೀಶ್ ಅವರು ಹಲವು ಹೀರೋಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಹೊಸಬರ ಜೊತೆ ಕೆಲಸ ಮಾಡಿದರು. ವಿಷ್ಣುವರ್ಧನ್ ವಿರುದ್ಧದ ಸಿಟ್ಟಿನಿಂದ ಅವರು ಹೀಗೆ ಮಾಡಿದರ? ಇಲ್ಲ, ಅವರು ಹೊಸಬರನ್ನು ಪರಿಚಯಿಸಲು ಬೇರೆಯದೇ ಕಾರಣ ಇದೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೆಲವು ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಆದರೆ, ಪುಟ್ಟಣ್ಣ ಕಣಗಾಲ್ ಅವರು ನೀಡಿದ ಒಂದು ಮಹತ್ವದ ಕಿವಿಮಾತನ್ನು ಸ್ವೀಕರಿಸಿದ್ದರು ದ್ವಾರಕೀಶ್. ‘ನೀನು ಹಲವು ಸಿನಿಮಾಗಳನ್ನು ಮಾಡಿದ್ದೀಯಲ್ಲ ಮರಿ, ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡು. ಅದು ಒಳ್ಳೆಯದು. ಹೊಸಬರನ್ನು ನೀನು ಪ್ರೋತ್ಸಾಹಿಸಬೇಕು’ ಎಂದು ಪುಟ್ಟಣ್ಣ ಹೇಳಿದ್ದಾಗಿ ದ್ವಾರಕೀಶ್ ಅವರು ಬಿ ಗಣಪತಿ ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದರು. ಪುಟ್ಟಣ್ಣ ಅವರು ಮಾತು ದ್ವಾರಕೀಶ್​ಗೆ ಸರಿ ಎನಿಸಿತು.

‘ವಿನೋದ್ ರಾಜ್ ಅವರು ಆಗಾಗ ನಮ್ಮನೆಗೆ ಬರುತ್ತಿದ್ದರು. ಡ್ಯಾನ್ಸ್ ಮಾಡು ಮರಿ ಎಂದಾಗ ಡ್ಯಾನ್ಸ್ ಮಾಡುತ್ತಿದ್ದ. ಪುಟ್ಟಣ್ಣ ಕಣಗಾಲ್ ಹೇಳಿದ್ದಕ್ಕೂ, ಈತ ಡ್ಯಾನ್ಸ್ ಮಾಡಿದ್ದಕ್ಕೂ ಕನೆಕ್ಷನ್ ಆಯಿತು. ಈತ ಡ್ಯಾನ್ಸ್ ಮಾಡ್ತಾನೆ, ಹೀಗಾಗಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಸಿನಿಮಾ ಮಾಡಿದೆ. ಪುಟ್ಟಣ್ಣ ಅವರ ಮಾತಿನಿಂದಲೇ ಹೊಸಬರನ್ನು ಪರಿಚಯಿಸೋದು ಆರಂಭಿಸಿದೆ’ ಎಂದಿದ್ದರು ದ್ವಾರಕೀಶ್.

ಇದನ್ನೂ ಓದಿ: ಯಾವಾಗ ಶುರುವಾಗಲಿದೆ ಲೀಲಾವತಿ ಸ್ಮಾರಕ ನಿರ್ಮಾಣ ಕಾರ್ಯ? ಉತ್ತರ ನೀಡಿದ ವಿನೋದ್ ರಾಜ್​

1990ರಲ್ಲಿ ಬಂದ ‘ಶೃತಿ’ ಸಿನಿಮಾ ಮೂಲಕ ಸುನಿಲ್ ಹಾಗೂ ಶ್ರುತಿ ಅವರ ವೃತ್ತಿ ಜೀವನಕ್ಕೆ ಬೆಂಬಲವಾದರು.  ಸಿದ್ದಲಿಂಗಯ್ಯ, ಭಾರ್ಗವ ಅವರು ಸ್ವತಂತ್ರ ನಿರ್ದೇಶಕರಾಗಲು ಅವಕಾಶ ಮಾಡಿಕೊಟ್ಟರು ದ್ವಾರಕೀಶ್. ವಿನೋದ್ ರಾಜ್, ಹರ್ಷವರ್ಧನ, ಚರಣ್ ರಾಜ್​ ಸೇರಿ ಅನೇಕರನ್ನು ಅವರು ಪರಿಚಯಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:34 pm, Wed, 17 April 24