ತೆಲಂಗಾಣದಲ್ಲಿ ಫೋನ್ ಟ್ಯಾಪಿಂಗ್ (Phone Tapping) ಪ್ರಕರಣ ಸಖತ್ ಸದ್ದು ಮಾಡುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಉನ್ನತ ದರ್ಜೆಯಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ತೆಲಂಗಾಣ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥನ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಆಗಿದೆ. ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆ ನಡೆದಷ್ಟು ಹಲವು ಆಘಾತಕಾರಿ ಸತ್ಯಗಳು ಹೊರಬೀಳುತ್ತಿವೆ. ಆರೋಪಿಗಳು ಹಾಲಿ ಸಿಎಂ ಫೋನ್ ಟ್ಯಾಪ್ ಮಾಡಿರುವ ಜೊತೆಗೆ ಹಲವು ಜನಪ್ರಿಯ ನಟಿಯರ ಫೋನ್ ಟ್ಯಾಪ್ ಮಾಡಿ ಅವರನ್ನು ಬ್ಲಾಕ್ ಮೇಲ್ ಮಾಡಿ ಕಿರುಕುಳ ನೀಡಿದ್ದರು ಎನ್ನಲಾಗುತ್ತಿದೆ.
ದಕ್ಷಿಣ ಭಾರತದ ಒಬ್ಬ ಜನಪ್ರಿಯ ನಟಿಯ ಫೋನ್ ಟ್ಯಾಪ್ ಮಾಡಲಾಗಿತ್ತೆಂದು ಇದೇ ಕಾರಣದಿಂದ ಆಕೆಯ ಖಾಸಗಿ ಜೀವನದಲ್ಲಿಯೂ ಸಮಸ್ಯೆಯುಂಟಾಗಿ ಪತಿ-ಪತ್ನಿ ಬೇರಾದರು ಎನ್ನಲಾಗುತ್ತಿದೆ. ಪ್ರಸ್ತುತ ಪ್ರಕರಣದಲ್ಲಿ ನಟಿಯ ಹೆಸರು ಸಹ ತುಸು ಜೋರಾಗಿಯೇ ಕೇಳಿ ಬರುತ್ತಿದೆ. ನಟಿಯೇ ಪತಿಯ ವಿರುದ್ಧ ಫೋನ್ ಟ್ಯಾಪಿಂಗ್ ಮಾಡಿಸಿದ್ದರು ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ಜನಪ್ರಿಯ ನಟಿಯರನ್ನು ವಿಚಾರಣೆಗೆ ಪೊಲೀಸರು ಆಹ್ವಾನಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಕಂಬ್ಯಾಕ್ ಮಾಡೋಕೆ ರೆಡಿ ಆದ ನಟಿ ನಭಾ ನಟೇಶ್
ದಕ್ಷಿಣ ಭಾರತದ ವಿಶೇಷವಾಗಿ ತೆಲುಗು ಚಿತ್ರರಂಗದ ಹಲವು ನಟಿಯರ ಫೋನ್ ಟ್ಯಾಪ್ ಮಾಡಲಾಗಿತ್ತು ಎನ್ನಲಾಗಿದೆ. ಮಾತ್ರವಲ್ಲದೆ, ಫೋನ್ ಟ್ಯಾಪಿಂಗ್ನಿಂದ ನಟಿಯರ ಖಾಸಗಿ ಜೀವನದ ವಿಷಯಗಳನ್ನು ತಿಳಿದುಕೊಂಡು ಅವರನ್ನು ಬ್ಲಾಕ್ಮೇಲ್ ಮಾಡಿ ಹಣ ಪಡೆಯಲಾಗಿತ್ತು ಎನ್ನಲಾಗುತ್ತಿದೆ. ತಾವು ರಾಜಕಾರಣಿಗಳ, ಉದ್ಯಮಿಗಳ ಹಾಗೂ ನಟ-ನಟಿಯರ ಫೋನ್ ಟ್ಯಾಪಿಂಗ್ ಮಾಡುತ್ತಿದ್ದುದಾಗಿ ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ತೆಲಂಗಾಣ ರಾಜ್ಯ ಗುಪ್ತಚರ ಇಲಾಖೆಯವರೇ ಈ ಹಿಂದಿನ ಸರ್ಕಾರದ ಸೂಚನೆಯ ಮೇರೆಗೆ ಫೋನ್ ಟ್ಯಾಪಿಂಗ್ ಅನ್ನು ಕಾಂಗ್ರೆಸ್ ಹಾಗೂ ಇತರೆ ರಾಜಕೀಯ ಮುಖಂಡರ ವಿರುದ್ಧ ಮಾಡಿಸಿತ್ತು ಎನ್ನಲಾಗುತ್ತಿದೆ. ಫೋನ್ ಟ್ಯಾಪಿಂಗ್ಗಾಗಿ ಇಟಲಿಯಿಂದ ಕೆಲವು ವಸ್ತುಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿತ್ತು. ಯಾವ ವ್ಯಕ್ತಿಯ ಫೋನ್ ಟ್ಯಾಪಿಂಗ್ ಮಾಡಬೇಕೋ ಆತ ಇರುವ ಜಾಗದಿಂದ 300 ಮೀಟರ್ ರೇಡಿಯಸ್ನಲ್ಲಿ ಯಂತ್ರವನ್ನು ಇಟ್ಟರೆ ಸಾಕಿತ್ತು. ತೆಲಂಗಾಣದ ಹಾಲಿ ಸಿಎಂ ರೇವಂತ್ ರೆಡ್ಡಿಯ ಫೋನ್ ಸಹ ಟ್ಯಾಪ್ ಮಾಡಲಾಗಿತ್ತು. ಅಲ್ಲದೆ ಹಲವು ಉದ್ಯಮಿಗಳ ಫೋನ್ ಟ್ಯಾಪಿಂಗ್ ಮಾಡಿ ಹಲವರನ್ನು ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಲಾಗಿತ್ತು ಎನ್ನಲಾಗಿದ್ದು. ಪ್ರಕರಣದ ತನಿಖೆ ಜಾರಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ