25 ವರ್ಷದ ಬಳಿಕ ಒಂದಾಗುತ್ತಿರುವ ‘ಮುಕ್ಕಾಲ ಮುಕ್ಕಾಬುಲಾ’ ಜೋಡಿ
AR Rahman-Prabhu Deva: ನಟ ಪ್ರಭುದೇವ ಹಾಗೂ ಎಆರ್ ರೆಹಮಾನ್ ಜೋಡಿ ಬರೋಬ್ಬರಿ 25 ವರ್ಷಗಳ ಬಳಿಕ ವಿಶಿಷ್ಟವಾದ ಸಿನಿಮಾ ಒಂದಕ್ಕಾಗಿ ಒಂದಾಗುತ್ತಿದ್ದಾರೆ.

‘ಮುಕ್ಕಾಲ ಮುಕಾಬುಲಾ’ ಹಾಡು ಯಾರಿಗೆ ನೆನಪಿಲ್ಲ. ಪ್ರಭುದೇವ (Prabhu Deva) ಅವರ ಡ್ಯಾನ್ಸ್, ಎಆರ್ ರೆಹಮಾನ್ ಅವರ ಸಂಗೀತ ಸಿನಿಮಾ ಪ್ರಿಯರಿಗೆ ಹುಚ್ಚೆಬ್ಬಿಸಿತ್ತು. ‘ಕಾದಲನ್’ ಸಿನಿಮಾದ ಈ ಹಾಡು ಇಂಟರ್ನೆಟ್ ಇಲ್ಲದ ಕಾಲದಲ್ಲಿಯೂ ಸಖತ್ ವೈರಲ್ ಆಗಿತ್ತು. ಹಾಡಿಗೆ ಪ್ರಭುದೇವ ಕುಣಿದಿದ್ದ ರೀತಿ, ಅವರಿಗೆ ಭಾರತದ ಮೈಕಲ್ ಜಾಕ್ಸನ್ ಎಂಬ ಬಿರುದು ತಂದುಕೊಟ್ಟಿತ್ತು. ‘ಕಾದಲನ್’ ಸಿನಿಮಾದ ಬಳಿಕ ಎಆರ್ ರೆಹಮಾನ್ ಹಾಗೂ ಪ್ರಭುದೇವ ಕೆಲ ಸಿನಿಮಾಗಳಿಗೆ ಒಟ್ಟಿಗೆ ಕೆಲಸ ಮಾಡಿದರಾದರೂ ಪ್ರಭುದೇವಗಾಗಿ ರೆಹಮಾನ್ ಸಂಗೀತ ನೀಡಿ 25 ವರ್ಷಗಳಾಗಿವೆ. ಇದೀಗ ಈ ಜೋಡಿ ಮತ್ತೆ ಒಂದಾಗಿದೆ.
ಇನ್ನೂ ಹೆಸರಿಡ ಸಿನಿಮಾ ಒಂದಕ್ಕಾಗಿ ಪ್ರಭುದೇವ ಹಾಗೂ ಎಆರ್ ರೆಹಮಾನ್ ಒಂದಾಗಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಪೋಸ್ಟರ್ನಲ್ಲಿ ಪ್ರಭುದೇವಾ ಅವರ ‘ಮುಕ್ಕಾಲ ಮುಕಾಬುಲಾ’ ಹಾಡಿನ ಡ್ಯಾನ್ಸ್ ಸ್ಟೆಪ್ನ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಜೊತೆಗೆ ಪೋಸ್ಟರ್ನಲ್ಲಿ ಎಆರ್ ರೆಹಮಾನ್ರ ಚಿತ್ರವೂ ಇದೆ.
ಬಿಹೈಂಡ್ ವೂಡ್ಸ್ ಸಂಸ್ಥೆಯ ಮಾಲೀಕ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದು, ಎಆರ್ ರೆಹಮಾನ್ ಹಾಗೂ ಪ್ರಭುದೇವ ಅವರನ್ನು 25 ವರ್ಷಗಳ ಬಳಿಕ ಒಟ್ಟಿಗೆ ಜೊತೆಗೆ ತಂದಿದ್ದಾರೆ. ಸಿನಿಮಾದಲ್ಲಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾವನ್ನು ಬಿಹೈಂಡ್ ವೂಡ್ಸ್ ಸಿಇಓ ಮನೋಜ್ ಎನ್ಎಸ್ ನಿರ್ದೇಶನ ಮಾಡಲಿದ್ದಾರೆ.
ಇದನ್ನೂ ಓದಿ:ಮಾಳು ನಿಪನಾಳ ಹಾಡಿದ ಗೀತೆಗೆ ಪ್ರಭುದೇವ ಡ್ಯಾನ್ಸ್; ಮಿಲಿಯನ್ ವೀವ್ಸ್
ಪ್ರಭುದೇವ ಹಾಗೂ ಎಆರ್ ರೆಹಮಾನ್ ಒಟ್ಟಿಗೆ ಕೆಲಸ ಮಾಡುತ್ತಿರುವ ಆರನೇ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಯಾವುದೇ ಹಿಂಸೆ, ಗೋಳು ಇರುವುದಿಲ್ಲ ಬದಲಿಗೆ ಎರಡೂವರೆ ಗಂಟೆಗಳ ಕಾಲ ಚಿತ್ರಮಂದಿರವನ್ನು ಅತ್ಯಂತ ಸಂತೋಷದ ಸ್ಥಳವನ್ನಾಗಿ ಮಾರ್ಪಾಟು ಮಾಡಲು ನಾವು ಬಯಸಿದ್ದು, ಸಿನಿಮಾದಲ್ಲಿ ಸಂಗೀತ ಹಾಗೂ ನೃತ್ಯದ ಅದ್ಭುತ ಜುಗಲ್ಬಂಧಿಯನ್ನು ಉಣಬಡಿಸಲಿದ್ದೇವೆ. ಜೊತೆಗೆ ಹಾಸ್ಯವೂ ಸಹ ಭರಪೂರವಾಗಿ ಇರಲಿದೆ ಎಂದಿದ್ದಾರೆ ನಿರ್ದೇಶಕ ಮನೋಜ್.
ಸಿನಿಮಾ ಬಗ್ಗೆ ಮಾತನಾಡಿರುವ ಎಆರ್ ರೆಹಮಾನ್, ‘ನಾನು ಹಲವು ವರ್ಷಗಳ ಹಿಂದೆ ಹೀಗೊಂದು ಯೋಚನೆ ಮಾಡಿದ್ದೆ. ಕೇವಲ ಸಂಗೀತ, ನೃತ್ಯ, ಹಾಸ್ಯ ಈ ಮೂರನ್ನೇ ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆಯೊಂದು ಹೊಳೆದಿತ್ತು. ಆದರೆ ಕಾಲಾನಂತರದಲ್ಲಿ ಆ ಯೋಚನೆಯನ್ನು ಬದಿಗೆ ಸರಿಸಿದ್ದೆ. ಈಗ ಈ ಪ್ರಾಜೆಕ್ಟ್ ಮೂಲಕ ಆ ಯೋಚನೆಯನ್ನು ಮತ್ತೆ ತೆರೆಗೆ ತರುವಂತಾಗುತ್ತಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ