ದಡೂತಿ ದೇಹ, 85 ಕೆಜಿ ತೂಕ; ವೈರಲ್​ ಆಯ್ತು ಫರ್ಹಾನ್​ ಅಖ್ತರ್​ ಫೋಟೋ

| Updated By: ರಾಜೇಶ್ ದುಗ್ಗುಮನೆ

Updated on: Jul 19, 2021 | 5:56 PM

ಸಿನಿಮಾಗಳಲ್ಲಿ ಫಿಟ್​ ಆಗಿರುವ ವ್ಯಕ್ತಿ ದಡೂತಿ ದೇಹ ಹೊಂದುವ ಪರಿಸ್ಥಿತಿ ಬಂದರೆ ವಿಎಫ್​ಎಕ್ಸ್​ ಬಳಕೆ ಮಾಡಲಾಗುತ್ತದೆ. ಆದರೆ, ಫರ್ಹಾನ್​ ಸ್ವತಃ ತೂಕ ಹೆಚ್ಚಿಸಿಕೊಂಡಿದ್ದಾರೆ.

ದಡೂತಿ ದೇಹ, 85 ಕೆಜಿ ತೂಕ; ವೈರಲ್​ ಆಯ್ತು ಫರ್ಹಾನ್​ ಅಖ್ತರ್​ ಫೋಟೋ
ದಡೂತಿ ದೇಹ, 85 ಕೆಜಿ ತೂಕ; ವೈರಲ್​ ಆಯ್ತು ಫರ್ಹಾನ್​ ಅಖ್ತರ್​ ಫೋಟೋ
Follow us on

ನಟ ಫರ್ಹಾನ್​ ಅಖ್ತರ್​ ಬಾಲಿವುಡ್​ನಲ್ಲಿ ಸಾಕಷ್ಟು ಚಾಲೆಂಜಿಂಗ್​ ಪಾತ್ರಗಳನ್ನು ಮಾಡಿದ್ದಾರೆ. ಪ್ರತಿ ಪಾತ್ರಕ್ಕೆ ಜೀವ ತುಂಬುವುದಕ್ಕೂ ಮೊದಲು ಸಾಕಷ್ಟು ತಯಾರಿ ನಡೆಸುತ್ತಾರೆ ಅವರು. ಬಾಕ್ಸಿಂಗ್​ ಆಧರಿಸಿ ಸಿದ್ಧಗೊಂಡಿರುವ ‘ತೂಫಾನ್’​ ಚಿತ್ರಕ್ಕಾಗಿ ಫರ್ಹಾನ್​ ಅಖ್ತರ್ ತೆಗೆದುಕೊಂಡ ಚಾಲೆಂಜ್​ ಅಂತಿತಹದ್ದಲ್ಲ. ಈ ಚಿತ್ರಕ್ಕಾಗಿ ಎದುರಿಸಿದ ಕಷ್ಟದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಫರ್ಹಾನ್​ ಅಖ್ತರ್​ ತೂಫಾನ್​ ಚಿತ್ರದಲ್ಲಿ ಬಾಕ್ಸರ್​ ಅಜೀಜ್​​ ಅಲಿ ಆಗಿ ಕಾಣಿಸಿಕೊಂಡಿದ್ದಾರೆ. ಬಾಕ್ಸರ್​ ಆಗುವುದಕ್ಕೂ ಮೊದಲು ಅಜೀಜ್​ ಪುಡಿ ರೌಡಿ ಆಗಿರುತ್ತಾನೆ. ನಂತರ ಬಾಕ್ಸಿಂಗ್ ಕಲಿಯುತ್ತಾನೆ. ಈ ಮಧ್ಯೆ ಬಾಕ್ಸಿಂಗ್​ ತೊರೆಯುವ ಸಂದರ್ಭ ಬರುತ್ತದೆ. ಈ ವೇಳೆ ಅಜೀಜ್​ ಫಿಟ್​ನೆಸ್​ ಕಳೆದುಕೊಳ್ಳುತ್ತಾನೆ. ಈ ಪಾತ್ರಕ್ಕಾಗಿ ದೊಡ್ಡ ಹೊಟ್ಟೆ ಹೊಂದುವ ಹಾಗೂ ತೂಕ ಹೆಚ್ಚಿಸಿಕೊಳ್ಳುವ ಅಗತ್ಯವಿತ್ತು.

ಸಿನಿಮಾಗಳಲ್ಲಿ ಫಿಟ್​ ಆಗಿರುವ ವ್ಯಕ್ತಿ ದಡೂತಿ ದೇಹ ಹೊಂದುವ ಪರಿಸ್ಥಿತಿ ಬಂದರೆ ವಿಎಫ್​ಎಕ್ಸ್​ ಬಳಕೆ ಮಾಡಲಾಗುತ್ತದೆ. ಆದರೆ, ಫರ್ಹಾನ್​ ಸ್ವತಃ ತೂಕ ಹೆಚ್ಚಿಸಿಕೊಂಡಿದ್ದಾರೆ. 69.9 ಕೆಜಿ ಇದ್ದ ಫರ್ಹಾನ್​ ಈ ಪಾತ್ರಕ್ಕಾಗಿ 85 ಕೆಜಿ ಆಗಿದ್ದಾರೆ. ದಡೂತಿ ದೇಹ ಕೂಡ ಬಂದಿದೆ. ನಂತರ ತೂಕ ಇಳಿಸಿಕೊಂಡು ಮತ್ತೆ ಸಿಕ್ಸ್​ ಪ್ಯಾಕ್​ ಮಾಡಿದ್ದಾರೆ. ಕೆಲವೇ ನಿಮಿಷಗಳ ದೃಶ್ಯಕ್ಕಾಗಿ ಫರ್ಹಾನ್​ ಇಷ್ಟು ತೂಕ ಏರಿಸಿಕೊಂಡಿದ್ದರು ಎಂಬುದು ವಿಶೇಷ.

ಈ ಫೋಟೋವನ್ನು ಸ್ವತಃ ಫರ್ಹಾನ್​ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.

‘ತೂಫಾನ್’​ ಚಿತ್ರಕ್ಕೆ ರಾಕೇಶ್​ ಓಂಪ್ರಕಾಶ್​ ಮೆಹ್ರಾ ನಿರ್ದೇಶನವಿದೆ. ಅಮೇಜಾನ್​ ಪ್ರೈಮ್​ನಲ್ಲಿ ಈ ಚಿತ್ರ ಜುಲೈ 16ರಂದು ಪ್ರೀಮಿಯರ್​ ಆಗಿದೆ. ಮಿಲ್ಖಾ ಸಿಂಗ್​ ಜೀವನವನ್ನು ಆಧರಿಸಿ ‘ಭಾಗ್​ ಮಿಲ್ಖಾ ಭಾಗ್​’ ಸಿನಿಮಾ ತಯಾರಾಗಿತ್ತು. 2013ರಲ್ಲಿ ಬಂದ ಆ ಸಿನಿಮಾದಲ್ಲಿ ಮಿಲ್ಖಾ ಸಿಂಗ್​ ಪಾತ್ರವನ್ನು ಫರ್ಹಾನ್​ ಅಖ್ತರ್​ ಮಾಡಿದ್ದರು. ಆ ಚಿತ್ರಕ್ಕೆ ರಾಕೇಶ್​ ಓಂಪ್ರಕಾಶ್​ ಮೆಹ್ರಾ ಅವರೇ ನಿರ್ದೇಶನ ಮಾಡಿದ್ದರು. ಬಾಕ್ಸ್​ ಆಫೀಸ್​ನಲ್ಲಿ ಆ ಸಿನಿಮಾ ಗೆದ್ದಿತ್ತು. ಆ ಚಿತ್ರದ ಮೂಲಕ ಮಿಲ್ಖಾ ಸಿಂಗ್ ಬದುಕಿನ ಸ್ಫೂರ್ತಿದಾಯಕ ಕಥೆ ಅನೇಕರಿಗೆ ತಿಳಿಯುವಂತಾಗಿತ್ತು. ನಂತರ ಇಬ್ಬರೂ ‘ತೂಫಾನ್​’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: Milkha Singh Death: ‘ನೀವು ಸದಾ ಜೀವಂತವಾಗಿರುತ್ತೀರಿ’; ಮಿಲ್ಖಾ ಸಿಂಗ್​ ನಿಧನಕ್ಕೆ ಫರ್ಹಾನ್​ ಅಖ್ತರ್​ ಸಂತಾಪ